ADVERTISEMENT

ಚಿಕ್ಕಬಳ್ಳಾಪುರ: 'ತಪ್ಪಿತಸ್ಥರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ'– ಸಚಿವ ಸುಧಾಕರ್

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2021, 10:28 IST
Last Updated 24 ಫೆಬ್ರುವರಿ 2021, 10:28 IST
ಸಚಿವ ಡಾ.ಕೆ.ಸುಧಾಕರ್
ಸಚಿವ ಡಾ.ಕೆ.ಸುಧಾಕರ್   

ಚಿಕ್ಕಬಳ್ಳಾಪುರ: ಜಿಲ್ಲೆಯ ಹಿರೇನಾಗವಲ್ಲಿ ಬಳಿ ನಡೆದ ಜಿಲೆಟಿನ್‌ ಸ್ಫೋಟ ಪ್ರಕರಣ ಸಂಬಂಧ ಅಧಿಕಾರಿ‌ಗಳಿಂದ ಈಗಾಗಲೇ ಮಾಹಿತಿ ಪಡೆದಿದ್ದೇನೆ. ತಪ್ಪಿತಸ್ಥರು ಯಾರೇ ಆಗಿದ್ದರೂ, ಎಷ್ಟೇ ಪ್ರಭಾವಿಗಳಾಗಿದ್ದರೂ ಅವರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದು ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಇಬ್ಬರು ಪೊಲೀಸ್‌ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಜೊತೆಗೆ ತಪ್ಪಿತಸ್ಥರಾದ ಪ್ರಕರಣದ ಎರಡನೇ ಆರೋಪಿ ಗಣಿ ಸಹ ಮಾಲೀಕ ರಾಘವೇಂದ್ರ ರೆಡ್ಡಿ, ನಾಲ್ಕನೇ ಆರೋಪಿ ವೆಂಕಟಾಶಿವಾ ರೆಡ್ಡಿ ಸೇರಿದಂತೆ ಐದು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಿದರು.

ಸರ್ಕಾರ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದೆ. ಇನ್ನುಳಿದ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಪೊಲೀಸರಿಗೆ ತಿಳಿಸಿದ್ದೇನೆ. ತಪ್ಪಿತಸ್ಥರ ವಿರುದ್ಧ ಬೇಕಾದ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಿಐಡಿ ಅಧಿಕಾರಿಗಳು ಪಾರದರ್ಶಕವಾಗಿ ತನಿಖೆ ನಡೆಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ಸಿಐಡಿ ತನಿಖೆ ಕೇಳಿರಲಿಲ್ಲ: ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವಂತೆ ಯಾರೂ ಕೇಳಿಲಿಲ್ಲ. ಆದರೆ, ಶಿವಮೊಗ್ಗದ ಹುಣಸೋಡು ದುರಂತಕ್ಕೆ ಸಂಬಂಧಿಸಿ ಇದುವರೆಗೆ ಯಾವುದೇ ತನಿಖೆಗೆ ನಡೆದಿಲ್ಲ. ಯಾವ ಅಧಿಕಾರಿಗಳನ್ನು ಅಮಾನತುಗೊಳಿಸಿಲ್ಲ. ಆದರೆ, ನಮ್ಮಲ್ಲಿ ಯಾರನ್ನು ರಕ್ಷಣೆ ಮಾಡೋ ಪ್ರಶ್ನೆಯೇ ಇಲ್ಲ. ಕಾನೂನಾತ್ಮಕವಾಗಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಉದ್ದೇಶದಿಂದ ಗೃಹ ಸಚಿವರೊಂದಿಗೆ ಚರ್ಚಿಸಿ ಸಿಐಡಿ ತನಿಖೆಗೆ ವಹಿಸಲಾಗಿದೆ ಎಂದು ಹೇಳಿದರು.

ರಾಜಕೀಯ ಒಡನಾಟವಿಲ್ಲ: ಭ್ರಮರವಾಸಿನಿ ಕ್ರಷರ್‌ ಮಾಲೀಕ ನಾಗರಾಜ್‌ ಅವರೊಂದಿಗೆ ನನಗೆ ಯಾವುದೇ ರಾಜಕೀಯ ಒಡನಾಟವಿಲ್ಲ. ನಾನು 2019ರಲ್ಲಿ ಬಿಜೆಪಿಗೆ ಹೋಗಿದ್ದೇನೆ. ನಾಗರಾಜ್‌ ಅವರು 25 ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿದ್ದಾರೆ. ನನ್ನದ್ದು ಚಿಕ್ಕಬಳ್ಳಾಪುರ ಕ್ಷೇತ್ರ, ಅವರದ್ದು ಗುಡಿಬಂಡೆ ಕ್ಷೇತ್ರ ಹಾಗಾಗಿ ನನಗೂ ಅವರಿಗೂ ಯಾವುದೇ ಸಂಬಂಧವಿಲ್ಲ. ಅವರನ್ನು ಪತ್ತೆ ಹಚ್ಚಿ ಕೂಡಲೇ ಬಂಧಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.