ADVERTISEMENT

ಚಿಕ್ಕಬಳ್ಳಾಪುರ | ವಾರಸುದಾರರಿಲ್ಲದ ಕಾರಿಗೆ ಕಾನ್‌ಸ್ಟೆಬಲ್ ಕಳ್ಳಾಟ!

ಅನುಮಾನಾಸ್ಪದ ರೀತಿ ಪತ್ತೆಯಾದ ಕಾರನ್ನು ತೆಗೆದುಕೊಂಡು ಹೋಗಿ ಮನೆ ಬಳಿ ನಿಲ್ಲಿಸಿಕೊಂಡು ಮತ್ತೆ ರಸ್ತೆಗೆ ತಂದರು

ಈರಪ್ಪ ಹಳಕಟ್ಟಿ
Published 9 ಜೂನ್ 2020, 19:31 IST
Last Updated 9 ಜೂನ್ 2020, 19:31 IST
ಚಿಕ್ಕಬಳ್ಳಾಪುರದಲ್ಲಿರುವ ಪೊಲೀಸ್ ವಸತಿ ಸಂಕೀರ್ಣದ ಬಳಿ ಅನೇಕ ದಿನಗಳಿಂದ ನಿಂತಿದ್ದ ಕಾರು
ಚಿಕ್ಕಬಳ್ಳಾಪುರದಲ್ಲಿರುವ ಪೊಲೀಸ್ ವಸತಿ ಸಂಕೀರ್ಣದ ಬಳಿ ಅನೇಕ ದಿನಗಳಿಂದ ನಿಂತಿದ್ದ ಕಾರು   

ಚಿಕ್ಕಬಳ್ಳಾಪುರ: ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ–7ರಲ್ಲಿ ವಾರಸುದಾರರಿಲ್ಲದೆ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದ್ದ ಕಾರು ಕೆಲವು ದಿನಗಳ ಕಾಲ ಪೊಲೀಸ್ ವಸತಿ ಸಂಕೀರ್ಣದ ಬಳಿ ನಿಂತಿದ್ದು, ಸೋಮವಾರ ಪುನಃ ಅನಾಥ ಸ್ಥಿತಿಯಲ್ಲಿಯೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಪತ್ತೆಯಾಗಿರುವುದು ಹಲವು ಸಂಶಯಗಳಿಗೆ ಎಡೆ ಮಾಡಿದೆ.

ಎರಡು ತಿಂಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ –7ರಲ್ಲಿ ಹಾರೋಬಂಡೆ ಸಮೀಪದ ನೀಲಗಿರಿ ತೋಪಿನ ಬಳಿ ಅನುಮಾನಾಸ್ಪದ ರೀತಿಯಲ್ಲಿ ಕೇರಳದ ನೋಂದಣಿ ಸಂಖ್ಯೆ (ಕೆಎಲ್ 11 ಇ 4818) ಹೊಂದಿರುವ ಮಾರುತಿ ಸುಜುಕಿ ಜೆನ್ ಕಾರು ಪತ್ತೆಯಾಗಿತ್ತು ಎನ್ನಲಾಗಿದೆ.

ವಾರಸುದಾರರಿಲ್ಲದ ಕಾರು ನೋಡಿದ ಗ್ರಾಮಾಂತರ ಠಾಣೆಯ ಕಾನ್‌ಸ್ಟೆಬಲ್‌ ಒಬ್ಬರು ಸದ್ದಿಲ್ಲದೆ ಅದನ್ನು ತೆಗೆದುಕೊಂಡು ಬಂದು ನಗರ ಪೊಲೀಸ್‌ ಠಾಣೆಯ ಆವರಣದಲ್ಲಿರುವ ಪೊಲೀಸ್ ವಸತಿಗೃಹದ ಬಳಿ ನಿಲ್ಲಿಸಿಕೊಂಡಿದ್ದರು. ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾದ ಕಾರಿನ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿಲ್ಲ. ಮಾಲೀಕರನ್ನೂ ಪತ್ತೆ ಮಾಡುವ ಪ್ರಯತ್ನ ಮಾಡಿಲ್ಲ. ಈ ವಿಚಾರವನ್ನು ಗುಟ್ಟಾಗಿಟ್ಟಿದ್ದು ಏಕೆ ಎಂಬ ಅನುಮಾನ ಸಾರ್ವಜನಿಕರನ್ನು ಕಾಡುತ್ತಿದೆ.

ADVERTISEMENT

ಈ ವಿಚಾರ ಹಿರಿಯ ಅಧಿಕಾರಿಗಳಿಗೆ ತಿಳಿದು ಕೆಲಸಕ್ಕೆ ಸಂಚಕಾರ ಬರುವ ಭಯದಿಂದ ಸೋಮವಾರ ಮಧ್ಯಾಹ್ನ ನಗರ ಹೊರವಲಯದ ಹೊನ್ನೇನಹಳ್ಳಿ ಬಳಿ ಸರ್ವಿಸ್‌ ರಸ್ತೆಗೆ ತೆಗೆದುಕೊಂಡು ಹೋಗಿ ಕಾರು ನಿಲ್ಲಿಸಲಾಗಿದೆ. ಚಕ್ರಗಳ ಗಾಳಿ ತೆಗೆದು ಏನೂ ಅರಿಯದವರ ರೀತಿ ಜಾಗ ಖಾಲಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೇರಳದ ತ್ರಿಶೂರ್ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯಲ್ಲಿ ಜಾನಿ ಸನ್‌ ಆಫ್‌ ಕೊಚ್ಚಪ್ಪು ಎಂಬುವರ ಹೆಸರಿನಲ್ಲಿ ಈ ಕಾರು ನೋಂದಣಿಯಾಗಿದೆ. ಯಾವ ಕಾರಣಕ್ಕೆ ಹೆದ್ದಾರಿಯಲ್ಲಿ ಅನಾಥವಾಗಿ ಪತ್ತೆಯಾಗಿತ್ತು ಎನ್ನುವುದು ಇಂದಿಗೂ ನಿಗೂಢವಾಗಿದೆ.

ಅನಾಥವಾಗಿ ಸಿಕ್ಕ ಕಾರನ್ನು ಪೊಲೀಸ್ ಸಿಬ್ಬಂದಿ ಕಾನೂನು ಬಾಹಿರವಾಗಿ ರಾಜಾರೋಷವಾಗಿ ಇಟ್ಟುಕೊಂಡದ್ದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಸಮಗ್ರ ತನಿಖೆಯಿಂದಷ್ಟೇ ಇದರಲ್ಲಿ ಯಾರೆಲ್ಲ ಪಾತ್ರವಿದೆ ಎನ್ನುವುದು ಬೆಳಕಿಗೆ ಬರಬೇಕಿದೆ.

ಇತ್ತೀಚೆಗಷ್ಟೇ, ಗ್ರಾಮಾಂತರ ಠಾಣೆ ಸಿಬ್ಬಂದಿ ಟೈರ್‌ ಕಳ್ಳರ ವಿಚಾರದಲ್ಲಿ ಕರ್ತವ್ಯಲೋಪ ಎಸಗಿದ ಪ್ರಕರಣ ಸಂಚಲನ ಮೂಡಿಸಿತ್ತು.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಗ್ರಾಮಾಂತರ ಠಾಣೆ ಎಸ್‌ಐ ಚೇತನಗೌಡ ಮತ್ತು ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಅವರನ್ನು ಸಂಪರ್ಕಿಸಲಾಯಿತು. ಆದರೆ ಅವರು ಕರೆ ಸ್ವೀಕರಿಸಲಿಲ್ಲ.

*
ವಾರಸುದಾರರಿಲ್ಲದ ಕಾರಿನ ಬಗ್ಗೆ ಯಾವುದೇ ರೀತಿ ಮಾಹಿತಿ ಇಲ್ಲ. ಈ ಬಗ್ಗೆ ವಿಚಾರಣೆ ನಡೆಸಿ ಕ್ರಮ ಜರುಗಿಸಲಾಗುವುದು
-ಪ್ರಶಾಂತ್, ಸರ್ಕಲ್ ಇನ್‌ಸ್ಪೆಕ್ಟರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.