ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರೆಡ್‌ಕ್ರಾಸ್ ಸಂಸ್ಥೆಯು ಮಹತ್ವದ ಮೈಲಿಗಲ್ಲು ದಾಟಿದೆ. ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆಯು ತನ್ನ 13 ವರ್ಷಗಳ ಪಯಣದಲ್ಲಿ 1,00,641 ಯುನಿಟ್ ರಕ್ತ ಸಂಗ್ರಹಿಸಿ ವಿತರಿಸಿದೆ. ಇಷ್ಟೇ ಪ್ರಮಾಣದಲ್ಲಿ ಪ್ಲಾಸ್ಮಾ ಸಹ ಸಂಸ್ಥೆಯು ವಿತರಿಸಿದೆ.
ರಾಜ್ಯದ 31 ಜಿಲ್ಲೆಗಳ ಪೈಕಿ 10 ಜಿಲ್ಲೆಗಳಲ್ಲಿ ಮಾತ್ರ ರೆಡ್‌ಕ್ರಾಸ್ ರಕ್ತನಿಧಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಈ ಪೈಕಿ ಚಿಕ್ಕಬಳ್ಳಾಪುರವೂ ಒಂದು. 2012ರಲ್ಲಿ ಜಿಲ್ಲೆಯಲ್ಲಿ ರಕ್ತನಿಧಿ ಕೇಂದ್ರ ಆರಂಭವಾಯಿತು. ಇಲ್ಲಿಯವರೆಗೂ ಜಿಲ್ಲೆಯಲ್ಲಿ 1,222 ರಕ್ತದಾನ ಶಿಬಿರಗಳನ್ನು ಸಂಸ್ಥೆಯು ಆಯೋಜಿಸಿದೆ.
ಈಗ ಒಂದು ಲಕ್ಷ ಯುನಿಟ್ ರಕ್ತ ವಿತರಿಸಿದ ಸಾಧನೆಯನ್ನೂ ತನ್ನದಾಗಿಸಿಕೊಂಡಿದೆ. ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆಯು ತನ್ನ ಕಾರ್ಯಚಟುವಟಿಕೆಗಳನ್ನು ಉತ್ತಮವಾಗಿ ನಿರ್ವಹಿಸಿದ ಪರಿಣಾಮ ರಾಜ್ಯಪಾಲರಿಂದ ಮೂರು ಬಾರಿ ಪ್ರಶಸ್ತಿ ಪಡೆದ ಹೆಗ್ಗಳಿಕೆಯನ್ನೂ ಹೊಂದಿದೆ. ವರ್ಷದಿಂದ ವರ್ಷಕ್ಕೆ ಜಿಲ್ಲೆಯ ರೆಡ್‌ಕ್ರಾಸ್ ರಕ್ತನಿಧಿಯು ರಕ್ತ ಸಂಗ್ರಹ ಮತ್ತು ವಿತರಣೆಯ ಪ್ರಮಾಣವನ್ನು ಏರುಗತಿಯಲ್ಲಿ ಕೊಂಡೊಯ್ಯುತ್ತಿದೆ.
ಚಿಕ್ಕಬಳ್ಳಾಪುರದ ರೆಡ್‌ಕ್ರಾಸ್ ನಿಧಿಗೆ ಮಾಸಿಕ 1 ಸಾವಿರ ಯುನಿಟ್ ರಕ್ತದ ಬೇಡಿಕೆ ಇದೆ. ಸದ್ಯ ಮಾಸಿಕ 700ರಿಂದ 800 ಯುನಿಟ್ ರಕ್ತವು ಸಂಗ್ರಹವಾಗುತ್ತಿದೆ. ರಕ್ತನಿಧಿ ಕೇಂದ್ರವು 1,200 ಯುನಿಟ್ ಸಂಗ್ರಹ ಸಾಮರ್ಥ್ಯ ಹೊಂದಿದೆ.
ದಿನದ 24 ಗಂಟೆಯೂ ರಕ್ತನಿಧಿ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ವೈದ್ಯರು ಸೇರಿ 18 ಸಿಬ್ಬಂದಿ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲಾ ಆಸ್ಪತ್ರೆ, ನಂದಿ ವೈದ್ಯಕೀಯ ಶಿಕ್ಷಣ ಕಾಲೇಜಿನ ಜೊತೆಗೆ ಜಿಲ್ಲೆಯ ಚಿಂತಾಮಣಿ, ಗುಡಿಬಂಡೆ, ಶಿಡ್ಲಘಟ್ಟ, ಗೌರಿಬಿದನೂರು, ಬಾಗೇಪಲ್ಲಿ ರಕ್ತ ಶೇಖರಣಾ ಘಟಕಗಳಿಗೂ ರಕ್ತವನ್ನು ಪೂರೈಸಲಾಗುತ್ತಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆರಂಭವಾದ ಮೊದಲ ರಕ್ತನಿಧಿ ಕೇಂದ್ರ ಇದಾಗಿದೆ.
ಜಿಲ್ಲೆಯಷ್ಟೇ ಅಲ್ಲ ನೆರೆಯ ಕೋಲಾರ, ಬೆಂಗಳೂರು ಗ್ರಾಮಾಂತರ ಮತ್ತು ಆಂಧ್ರಪ್ರದೇಶದ ಗಡಿ ಭಾಗದ ಜಿಲ್ಲೆಗಳಿಗೂ ಚಿಕ್ಕಬಳ್ಳಾಪುರ ರೆಡ್‌ಕ್ರಾಸ್ ರಕ್ತನಿಧಿ ಕೇಂದ್ರದಿಂದ ರಕ್ತಪೂರೈಕೆ ಆಗುತ್ತಿದೆ. ಇದು ಘಟಕ ಹೆಗ್ಗಳಿಕೆ ಎನಿಸಿದೆ.
ಈಶಾ ಕೇಂದ್ರಕ್ಕೆ ಬಸ್: ರೆಡ್‌ಕ್ರಾಸ್ ರಕ್ತಸಂಗ್ರಹಕ್ಕೆ ‘ಡೋನರ್ ಕೋಚ್’ ಬಸ್ ಸಹ ಹೊಂದಿದೆ. ಈ ವಾಹನ ಪ್ರತಿ ಶನಿವಾರ ಮತ್ತು ಭಾನುವಾರ ಈಶಾ ಯೋಗ ಕೇಂದ್ರಕ್ಕೆ ತೆರಳಲಿದೆ. ಇಲ್ಲಿಗೆ ಹೆಚ್ಚಿನ ಪ್ರವಾಸಿಗರು ಬರುವ ಕಾರಣ ಆಸಕ್ತರು ಈ ರಕ್ತದಾನ ಸಹ ಮಾಡಬಹುದು. ಹೀಗೆ ಎಲ್ಲಿ ದೊಡ್ಡ ಪ್ರಮಾಣದ ಜನಸಂದಣಿ ಸೇರುತ್ತದೆಯೊ ಅಂತಹ ಕಡೆಗಳಿಗೆ ತೆರಳಿ ಈ ಡೋನರ್ ಕೋಚ್ ವಾಹನ ರಕ್ತ ಸಂಗ್ರಹಿಸುತ್ತಿದೆ.
‘ರಕ್ತನಿಧಿ ಕೇಂದ್ರವು ಸಂಗ್ರಹಿಸುವ ರಕ್ತದಲ್ಲಿ ಶೇ 80ರಷ್ಟು ಚಿಕ್ಕಬಳ್ಳಾಪುರ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಿಗೆ ಮತ್ತು ಶೇ 20ರಷ್ಟು ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುವ ರೋಗಿಗಳಿಗೆ ರಕ್ತ ನೀಡಲಾಗುತ್ತಿದೆ’ ಎಂದು ಜಿಲ್ಲಾ ರೆಡ್‌ಕ್ರಾಸ್ ಸಭಾಪತಿ ಎಂ.ಜಯರಾಮ್ ತಿಳಿಸಿದರು.
ಕೋವಿಡ್ ಅವಧಿಯಲ್ಲಿ ಲಸಿಕೆ ಹಾಕಿಸಿಕೊಂಡವರು ರಕ್ತದಾನ ಮಾಡಬಾರದು ಎನ್ನುವ ತಪ್ಪು ಕಲ್ಪನೆ ಇತ್ತು. ಆದ ಕಾರಣ ಕೋವಿಡ್ ನಂತರ ಸಂಗ್ರಹದ ಪ್ರಮಾಣ ಕಡಿಮೆ ಆಯಿತು. ಜಾಗೃತಿ ಮತ್ತು ಶಿಬಿರಗಳು ಈಗ ಹೆಚ್ಚು ನಡೆಯುತ್ತಿರುವ ಪರಿಣಾಮ ರಕ್ತ ಸಂಗ್ರಹ ಸ್ವಲ್ಪ ಮಟ್ಟಿಗೆ ಹೆಚ್ಚಿದೆ ಎಂದರು.
ಜಿಲ್ಲೆಯಲ್ಲಿ ಒಂದು ವರ್ಷದಲ್ಲಿ 13 ಸಾವಿರ ಮಹಿಳೆಯರಿಗೆ ಹೆರಿಗೆ ಆಗಿದೆ. ಇವರಲ್ಲಿ ಗರಿಷ್ಠ ಮಹಿಳೆಯರಿಗೆ ಸಿಜೇರಿಯನ್ ಶಸ್ತ್ರಚಿಕಿತ್ಸೆ ನಡೆದಿದೆ. ಸಿಜೇರಿಯನ್ ಆದವರಿಗೆ ರಕ್ತ ಅಗತ್ಯ. ಹೀಗೆ ಈ ಸಿಜೇರಿಯನ್ ಶಸ್ತ್ರಚಿಕಿತ್ಸೆಗೆ ಒಳಪಟ್ಟವರಿಗೆ ರಕ್ತನಿಧಿ ಕೇಂದ್ರದಿಂದ ರಕ್ತ ನೀಡಲಾಗಿದೆ ಎಂದು ಹೇಳಿದರು.
ಕೆಲ ರೋಗಿಗಳಿಗೆ ಉಚಿತವಾಗಿ ರಕ್ತ
ಕ್ಯಾನ್ಸರ್ ಡಯಾಲಿಸಿಸ್ ತಲೆಸಿಮೀಯಾ ಎಚ್‌ಐವಿ ರೋಗಿಗಳಿಗೆ ಉಚಿತವಾಗಿ ರಕ್ತ ನೀಡುತ್ತೇವೆ ಎಂದು ರೆಡ್‌ಕ್ರಾಸ್ ಜಿಲ್ಲಾ ಸಭಾಪತಿ ಎಂ.ಜಯರಾಮ್ ‘ಪ್ರಜಾವಾಣಿ’ಗೆ ತಿಳಿಸಿದರು. ಮಾಸಿಕ 1 ಸಾವಿರ ಯುನಿಟ್‌ಗಳ ರಕ್ತವು ಜಿಲ್ಲಾ ರೆಡ್‌ಕ್ರಾಸ್ ರಕ್ತನಿಧಿಯಿಂದ ಬೇಡಿಕೆ ಇದೆ. ಬೇರೆ ಸಂಸ್ಥೆಗಳಿಗಿಂತ ನಾವು ಕಡಿಮೆ ದರದಲ್ಲಿ ರಕ್ತವನ್ನು ನೀಡುತ್ತಿದ್ದೇವೆ ಎಂದರು.
ಜಿಲ್ಲೆಯಲ್ಲಿ ಬೃಹತ್ ಶಿಬಿರಗಳು
ಚಿಂತಾಮಣಿಯಲ್ಲಿ ಮಾಜಿ ಸಚಿವ ಚೌಡರೆಡ್ಡಿ ಅವರ ಜನ್ಮದಿನದ ಅಂಗವಾಗಿ ನಡೆದ ರಕ್ತದಾನ ಶಿಬಿರದಲ್ಲಿ 3200 ಯುನಿಟ್ ಕೆ.ವಿ ಮತ್ತು ಪಂಚಗಿರಿ ಶಿಕ್ಷಣ ಸಂಸ್ಥೆಗಳ ದತ್ತಿ ದಿನದ ಅಂಗವಾಗಿ ನಡೆದ ರಕ್ತದಾನ ಶಿಬಿರಗಳಲ್ಲಿ 2811 ಯುನಿಟ್ ಮತ್ತು ಬಾಗೇಪಲ್ಲಿಯಲ್ಲಿ ಶಾಸಕ ಸುಬ್ಬಾರೆಡ್ಡಿ ಅವರ ಜನ್ಮದಿನದ ಅಂಗವಾಗಿ ನಡೆದ ರಕ್ತದಾನ ಶಿಬಿರದಲ್ಲಿ 1700ಕ್ಕೂ ಹೆಚ್ಚು ಯುನಿಟ್ ರಕ್ತ ಸಂಗ್ರಹವಾಗಿದೆ. ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರಗಳು ಇವಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.