ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಭರ್ತಿಗೆ ಕಾಲಕೂಡುವ ಸ್ಥಿತಿ ಕಾಣುತ್ತಿಲ್ಲ. ಸದಸ್ಯರ ಪಟ್ಟಿಯ ರಾಜಕಾರಣದಿಂದ ಮತ್ತೆ ನನೆಗುದಿಗೆ ಬಿದ್ದಿದೆ.
ನಗರಸಭೆ ಪೌರಾಯುಕ್ತರ ಬಳಿಯೇ ನಗರಸಭೆ ಸ್ಥಾಯಿ ಸಮಿತಿ ಸದಸ್ಯರ ಮೂರು ಪಟ್ಟಿಗಳು ಇವೆ. ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಅವರಿಗೆ ಈ ಮೂರು ಪಟ್ಟಿಗಳಲ್ಲಿ ಯಾವ ಪಟ್ಟಿಯನ್ನೂ ಕಳುಹಿಸಿಕೊಟ್ಟಿಲ್ಲ. ಸ್ಥಾಯಿ ಸಮಿತಿ ರಚನೆಗೆ ಸಂಬಂಧಿಸಿದಂತೆ ಮಾಹಿತಿಯನ್ನು ಜಿಲ್ಲಾಧಿಕಾರಿ ಅವರಿಗೆ ಕಳುಹಿಸಬೇಕು.
ನಗರಸಭೆ ರಾಜಕೀಯವನ್ನು ನೋಡಿದರೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಭರ್ತಿಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಚಿಕ್ಕಬಳ್ಳಾಪುರ ನಗರಸಭೆ ಆಡಳಿತ ಮಂಡಳಿಯ ಅವಧಿ ಅಕ್ಟೋಬರ್ 31ಕ್ಕೆ ಅಂತ್ಯವಾಗಲಿದೆ.
ಜು.22ರಂದು ನಗರಸಭೆ ಅಧ್ಯಕ್ಷ ಎ.ಗಜೇಂದ್ರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರು ಮತ್ತು ಪೌರಾಯುಕ್ತರ ಸಮ್ಮುಖದಲ್ಲಿ 11 ನಗರಸಭಾ ಸದಸ್ಯರ ಹೆಸರನ್ನು ಸ್ಥಾಯಿ ಸಮಿತಿಗೆ ಆಯ್ಕೆ ಮಾಡಲಾಗಿದೆ. ಎಲ್ಲ ಸದಸ್ಯರು ಒಪ್ಪಿ ಸರ್ವಾನುಮತದಿಂದ ತೀರ್ಮಾನಿಸಿದ್ದಾರೆ. ಈ ಆಯ್ಕೆಯಾದ ಸದಸ್ಯರನ್ನು ಪೌರಾಯುಕ್ತರು ಸಭೆ ಓದಿ, ಸಭೆಯಲ್ಲಿ ರೆಕಾರ್ಡ್ ಸಹ ಮಾಡಿದ್ದಾರೆ.
ಈ ನಡುವೆ ನಗರಸಭೆ ಅಧ್ಯಕ್ಷ ಎ.ಗಜೇಂದ್ರ ಮತ್ತು ಮಾಜಿ ಅಧ್ಯಕ್ಷ ಹಾಗೂ ಸದಸ್ಯ ಡಿ.ಎಸ್.ಆನಂದರೆಡ್ಡಿ ಬಾಬು ಸಹ ಸ್ಥಾಯಿ ಸಮಿತಿ ಸದಸ್ಯರ ಪಟ್ಟಿಯನ್ನು ಪೌರಾಯುಕ್ತರಿಗೆ ನೀಡಿದ್ದಾರೆ. ಈಗ ಪೌರಾಯುಕ್ತರ ಬಳಿ ಮೂರು ಪಟ್ಟಿಗಳು ಇವೆ. ಈ ವಿಚಾರವಾಗಿ ತೀವ್ರ ಹಗ್ಗಜಗ್ಗಾಟ ಸಹ ನಗರಸಭೆ ಅಂಗಳದಲ್ಲಿ ನಡೆಯುತ್ತಿದೆ. ಈ ಕಾರಣದಿಂದ ಪೌರಾಯುಕ್ತರು ಯಾವುದೇ ಪಟ್ಟಿಯನ್ನೂ ಜಿಲ್ಲಾಧಿಕಾರಿಗೆ ಕಳುಹಿಸಿಲ್ಲ.
ನಗರಸಭೆ ಸಾಮಾನ್ಯ ಸಭೆಯಲ್ಲಿ ಅನುಮೋದನೆಯಾಗಿರುವ ಸ್ಥಾಯಿ ಸಮಿತಿ ಸದಸ್ಯರ ಪಟ್ಟಿ ಮತ್ತು ಆ ನಂತರದ ಪಟ್ಟಿಗಳಲ್ಲಿ ಕಾಂಗ್ರೆಸ್‌ನ ಕೆಲವು ಸದಸ್ಯರು ಅದಲು ಬದಲಾಗಿವೆ. ಈ ವಿಚಾರವೂ ಸಹ ಜಟಾಪಟಿಗೆ ಕಾರಣವಾಗಿದೆ.
ನಗರಸಭೆ ಆಡಳಿತ ಮಂಡಳಿ ಅಧಿಕಾರಕ್ಕೆ ಕೇವಲ ಬೆರಳೆಣಿಕೆಯ ದಿನಗಳು ಮಾತ್ರ ಬಾಕಿ ಇವೆ. ಇಂಥದ್ದರ ನಡುವೆಯೂ ರಾಜಕೀಯ ಹಗ್ಗಜಗ್ಗಾಟದಿಂದ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಭರ್ತಿ ಆಗುತ್ತದೆಯೇ ಇಲ್ಲವೆ ಎನ್ನುವ ಕುತೂಹಲವಿದೆ.
2013ರಿಂದಲೂ ನಗರಸಭೆ ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನ ಖಾಲಿ ಇದೆ. ಈ ಹಿಂದೆ ನಡೆದ ನಗರಸಭೆಯ ಹಲವು ಸಾಮಾನ್ಯಸಭೆಗಳಲ್ಲಿ ಸ್ಥಾಯಿ ಸಮಿತಿ ರಚನೆಯ ವಿಚಾರ ತೀವ್ರ ಚರ್ಚೆಗೆ ಕಾರಣವಾಗಿದೆ. ಆದರೆ ಅಧ್ಯಕ್ಷ ಸ್ಥಾನ ಭರ್ತಿ ಮಾತ್ರ ಸಾಧ್ಯವಾಗಿಲ್ಲ.
ಸುಬ್ರಹ್ಮಣ್ಯಾಚಾರಿಗೆ ಪಟ್ಟ ಎಂದಿರುವ ಡಾ.ಕೆ.ಸುಧಾಕರ್: ಸ್ಥಾಯಿ ಸಮಿತಿ ರಚನೆ ವಿಚಾರವು ಆಡಳಿತ ಪಕ್ಷದ ಸದಸ್ಯರನ್ನು ಜಟಾಪಟಿಗೆ ಕಾರಣವಾದ ಹಿನ್ನೆಲೆಯಲ್ಲಿ ಇತ್ತೀಚೆಗೆ ಸಂಸದ ಡಾ.ಕೆ. ಸುಧಾಕರ್ ನಗರದ ತಮ್ಮ ನಿವಾಸದಲ್ಲಿ ಆಡಳಿತ ಪಕ್ಷದ ಸದಸ್ಯರ ಸಭೆ ನಡೆಸಿದ್ದರು.
ಈ ವೇಳೆ ಮಾಧ್ಯಮದವರು ಯಾರು ಅಧ್ಯಕ್ಷರಾಗುವರು ಎಂದಿದ್ದಕ್ಕೆ, ‘ಸುಬ್ರಹ್ಮಣ್ಯಾಚಾರಿ ಅವರನ್ನು ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲು ಒಮ್ಮತದಿಂದ ತೀರ್ಮಾನಿಸಲಾಗಿದೆ. ಎಲ್ಲರೂ ಒಮ್ಮತದಿಂದ ಈ ಬಗ್ಗೆ ನಿರ್ಧಾರ ಮಾಡಿದ್ದಾರೆ’ ಎಂದಿದ್ದರು. ಸುಬ್ರಹ್ಮಣ್ಯಾಚಾರಿಗೆ ಅಧ್ಯಕ್ಷ ಸ್ಥಾನ ದೊರೆಯುತ್ತದೆ ಎನ್ನುವ ಮಾತುಗಳು ಈ ಹಿಂದಿನಿಂದಲೂ ಕೇಳಿ ಬರುತ್ತಿವೆ.
ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರು, ಅಧ್ಯಕ್ಷರಿಗೆ ಸಮಾನ ಎನ್ನುವ ರೀತಿಯಲ್ಲಿಯೇ ಅಧಿಕಾರ ಹೊಂದಿರುವರು.
ಸಾಮಾನ್ಯಸಭೆಯಲ್ಲಿ ದಾಖಲಿಸಿರುವ ಸ್ಥಾಯಿ ಸಮಿತಿ ಸದಸ್ಯರ ಪಟ್ಟಿಯೇ ಅಂತಿಮ. ಉಳಿದ ಪಟ್ಟಿಗಳ ಅಂಗೀಕಾರ ಸಾಧ್ಯವಿಲ್ಲ. ಇನ್ನೂ ಸಹ ಜಿಲ್ಲಾಧಿಕಾರಿ ಅವರಿಗೆ ಸದಸ್ಯರ ಪಟ್ಟಿಯನ್ನು ಶಿಫಾರಸು ಮಾಡಿಲ್ಲ. ಮನ್ಸೂರ್ ಅಲಿ ಪೌರಾಯುಕ್ತರು ಚಿಕ್ಕಬಳ್ಳಾಪುರ ನಗರಸಭೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.