
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರ ವ್ಯಾಪ್ತಿಯಲ್ಲಿ ಈ ಹಿಂದಿನಿಂದಲೂ ಎಲ್ಲೆಂದರಲ್ಲಿ ಕಸ ಎಸೆಯಲಾಗುತ್ತಿದೆ. ಸಾಮಾನ್ಯಸಭೆಗಳಲ್ಲಿಯೂ ಕಸದ ವಿಷಯ ಪ್ರಮುಖವಾಗಿ ಚರ್ಚೆ ಆಗುತ್ತಿತ್ತು. ‘ಹಸಿರು ಚಿಕ್ಕಬಳ್ಳಾಪುರ’ ಘೋಷಣೆಯಡಿ ಆಗಾಗ್ಗೆ ಅಧಿಕಾರಿಗಳು ಸಹ ನಗರದ ಕಸ ತೆರವಿಗೆ ಮುಂದಾಗುತ್ತಿದ್ದರು.
ಹೀಗೆ ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ತಡೆಯಲು ನಗರಸಭೆ ನಾನಾ ಪ್ರಯತ್ನಗಳು, ಅರಿವಿನ ಕಾರ್ಯಕ್ರಮಗಳನ್ನು ನಡೆಸಿದರೂ ಫಲ ಮಾತ್ರ ನಿರೀಕ್ಷಿತವಾಗಿರಲಿಲ್ಲ. ಆದರೆ ಈಗ ದೃಢ ಹೆಜ್ಜೆ ಎನ್ನುವಂತೆ ಕಸ ಎಸೆಯುವವರ ಮೇಲೆ ದಂಡಾಸ್ತ್ರ ಪ್ರಯೋಗಕ್ಕೆ ನಗರಸಭೆ ಮುಂದಾಗಿದೆ.
ನವೆಂಬರ್‌ನಲ್ಲಿ ಮತ್ತು ಡಿಸೆಂಬರ್ ಮೊದಲ ದಿನ ಸೇರಿ ನಗರಸಭೆಯು ₹13,120 ದಂಡ ವಸೂಲಿ ಮಾಡಿದೆ. ಕಸ ಎಸೆಯುವವರ ಮೇಲೆ ನಿಗಾಯಿಟ್ಟ ನಗರಸಭೆ ಅಧಿಕಾರಿಗಳು ನವೆಂಬರ್‌ನಲ್ಲಿ ₹12,100 ದಂಡ ವಿಧಿಸಿದ್ದಾರೆ. ಡಿಸೆಂಬರ್ 1ರಂದು ಕಂದವಾರ ಬಳಿ ರಸ್ತೆ ಬದಿಗೆ ಕಸ ಎಸೆದ ಇಬ್ಬರಿಗೆ ₹1,020 ದಂಡ ವಿಧಿಸಲಾಗಿದೆ. ₹100ರಿಂದ ₹2,000ದವರೆಗೆ ದಂಡವನ್ನು ವಿಧಿಸಲಾಗಿದೆ.
ದಂಡ ವಿಧಿಸುತ್ತಾರೆ ಎನ್ನುವ ಮಾತುಗಳು ಈಗ ಒಂದು ವಾರ್ಡ್‌ನಿಂದ ಮತ್ತೊಂದು ವಾರ್ಡ್‌ಗೆ ಹರಡುತ್ತಿದೆ. ಈ ಕಾರಣದಿಂದ ರಸ್ತೆ ಬದಿ ಕಸ ಎಸೆಯುವುದು ತಹಬದಿಗೆ ಬರುತ್ತಿದೆ ಎನ್ನುತ್ತಾರೆ ನಗರಸಭೆ ಅಧಿಕಾರಿಗಳು.
ಬೈಕ್ ವಶಕ್ಕೆ ಪಡೆದಿದ್ದ ಅಧಿಕಾರಿಗಳು: ನಗರದ ಕಂದವಾರ ರಸ್ತೆಯಲ್ಲಿ ಅಕ್ಟೋಬರ್‌ನಲ್ಲಿ ಕಸ ಸುರಿಯುತ್ತಿದ್ದ ಯುವಕನ ಬೈಕ್ ನಗರಸಭೆ ಸಿಬ್ಬಂದಿ ವಶಕ್ಕೆ ಪಡೆದಿದ್ದರು. ನಗರಸಭೆ ದಂಡ ಕಟ್ಟುವಂತೆ ಸೂಚಿಸಿದ್ದರು. ಆಗ ಯುವಕ ಸಿಬ್ಬಂದಿ ಬಳಿ ಗಲಾಟೆ ಮಾಡಿ ‘ದಂಡ ಕಟ್ಟಲ್ಲ, ಏನ್ ಮಾಡ್ತೀರೋ ಮಾಡಿ’ ಎಂದು ಅವಾಜ್ ಹಾಕಿದ್ದ. ದಂಡ ಕಟ್ಟದ ಕಾರಣ ಯುವಕನ ಬೈಕ್ ಅನ್ನು ನಗರಸಭೆ ಸಿಬ್ಬಂದಿ ವಶಕ್ಕೆ ಪಡೆದಿದ್ದರು. ಬೈಕ್ ವಶಕ್ಕೆ ಪಡೆಯುವ ವೇಳೆ ಬೈಕ್ ಕೀ ತಗುಲಿ ಅಧಿಕಾರಿಗೆ ಗಾಯವೂ ಆಗಿತ್ತು.
ಬ್ಲಾಕ್‌ಸ್ಪಾಟ್‌ಗಳ ಇಳಿಕೆ: ನಗರದಲ್ಲಿ ಕಸ ಎಸೆಯುವುದಕ್ಕೆ ಸಂಬಂಧಿಸಿದಂತೆ ನಗರಸಭೆಯು ಒಟ್ಟು 65 ಬ್ಲಾಕ್‌ಸ್ಪಾಟ್ ಗುರುತಿಸಿತ್ತು. ಈ ಬ್ಲಾಕ್‌ಸ್ಪಾಟ್‌ಗಳಲ್ಲಿ ಜನರು ಅಪಾರ ಪ್ರಮಾಣದಲ್ಲಿ ಕಸ ಎಸೆಯುತ್ತಿದ್ದರು. ‘ಇಲ್ಲಿ ಕಸ ಎಸೆಯಬಾರದು’ ಎಂದು ಫಲಕಗಳನ್ನು ಅಳವಡಿಸಲಾಯಿತು. ಆ ಸ್ಥಳಗಳ ಮೇಲೆ ನಿಗಾ ಸಹ ಇರಿಸಲಾಯಿತು. ಆ ಪರಿಣಾಮ 8ರಿಂದ 10 ಬ್ಲಾಕ್‌ಸ್ಪಾಟ್‌ಗಳಲ್ಲಿ ಇಳಿಕೆಯಾಗಿವೆ.
ನಗರಸಭೆ ಕಚೇರಿ, ಕೌಸರ್ ನಗರ, ಒಕ್ಕಲಿಗರ ಕಲ್ಯಾಣ ಮಂಟಪದ ಹಿಂಭಾಗ, ಕಂದವಾರ ಬಾಗಿಲಿನ ಎರಡು ಕಡೆ, ಎಂ.ಜಿ ರಸ್ತೆ, ವಾಪಸಂದ್ರ ರಸ್ತೆಯಲ್ಲಿ ಗುರುತಿಸಿದ್ದ ಬ್ಲಾಕ್‌ಸ್ಪಾಟ್‌ಗಳಲ್ಲಿ ಈಗ ಕಸ ಬೀಳುತ್ತಿಲ್ಲ.
‘ನಗರಸಭೆಯಲ್ಲಿ 11 ಮಂದಿ ಕಮ್ಯುನಿಟಿ ಮೊಬಿಲೈಜರ್‌ಗಳಿದ್ದು 31 ವಾರ್ಡ್‌ಗಳಲ್ಲಿಯೂ ನಿಗಾ ವಹಿಸಿದ್ದಾರೆ. ಯಾರು ಕಸ ಕೊಡುತ್ತಿಲ್ಲ ಎನ್ನುವುದನ್ನು ತಿಳಿದು ಅಂತಹವರ ಮನೆಗೆ ತೆರಳಿ ವಿಚಾರಿಸುತ್ತಿದ್ದಾರೆ. ನಮ್ಮ ಈ ಕ್ರಮಗಳಿಂದ ಪೂರ್ಣ ಪ್ರಮಾಣದಲ್ಲಿ ರಸ್ತೆ ಬದಿ ಕಸ ಎಸೆಯುವುದು ನಿಂತಿದೆ ಎನ್ನುತ್ತಿಲ್ಲ. ಆದರೆ ಈ ಹಿಂದಿಗೆ ಮತ್ತು ಇಂದಿಗೆ ಹೋಲಿಸಿದರೆ ಶೇ 25ರಷ್ಟು ಕಡಿಮೆಯಾಗಿದೆ’ ಎನ್ನುತ್ತಾರೆ ನಗರಸಭೆ ಪರಿಸರ ಎಂಜಿನಿಯರ್ ಉಮಾಶಂಕರ್.
‘ರಾತ್ರಿಯ ವೇಳೆ ಮತ್ತು ಬೆಳ್ಳಂ ಬೆಳಿಗ್ಗೆ ಈಗಲೂ ಕೆಲವು ಕಡೆಗಳಲ್ಲಿ ಕಸವನ್ನು ಜನರು ರಸ್ತೆಗೆ ಎಸೆಯುತ್ತಿದ್ದಾರೆ. ವಾಣಿಜ್ಯ ವಹಿವಾಟಿನ ಅಂಗಡಿಗಳಿಗೆ ಪ್ರತ್ಯೇಕವಾಗಿ ವಾಹನ ಕಳುಹಿಸಿ ಕಸ ಸಂಗ್ರಹಿಸಲಾಗುತ್ತಿದೆ. ಜನರು ಸಹ ಈ ವಿಚಾರವಾಗಿ ಅರಿವು ಹೊಂದಬೇಕು. ನಮ್ಮ ಸುತ್ತಲಿನ ಪರಿಸರ ಉತ್ತಮವಾಗಿರಬೇಕು ಎನ್ನುವ ಭಾವನೆ ಬೆಳೆಸಿಕೊಳ್ಳಬೇಕು’ ಎಂದರು.
₹100ರಿಂದ ₹2,000ದವರೆಗೆ ದಂಡ ನಿಗಾಕ್ಕೆ 11 ಮಂದಿ ಕಮ್ಯುನಿಟಿ ಮೊಬಿಲೈಜರ್ ನಗರಸಭೆ ಗುರುತಿಸಿದ 65 ಬ್ಲಾಕ್‌ಸ್ಪಾಟ್
‘ದಂಡ ಪಾವತಿಸದಿದ್ದರೆ ಮನೆ ಮುಂದೆ ಕಸ’
ನಗರಸಭೆಯ ಕಮ್ಯುನಿಟಿ ಮೊಬಿಲೈಸರ್‌ಗಳು ಕಸ ಸಂಗ್ರಹ ನಿರ್ವಹಣೆ ಮತ್ತು ಸ್ವಚ್ಛತೆಯ ಬಗ್ಗೆ ಗಮನವಿಟ್ಟಿದ್ದಾರೆ. ಮೊದಲ ಬಾರಿ ಕಸ ಎಸೆದವರಿಗೆ ಜಾಗೃತಿ ಮೂಡಿಸುತ್ತಿದ್ದೇವೆ. ಇಲ್ಲಿ ಕಸ ಎಸೆಯಬಾರದು ನಗರಸಭೆಯ ಕಸದ ವಾಹನಗಳಿಗೆ ನೀಡಿ ಎಂದು ತಿಳಿವಳಿಕೆ ಮೂಡಿಸುತ್ತಿದ್ದೇವೆ ಎನ್ನುತ್ತಾರೆ ನಗರಸಭೆ ಪರಿಸರ ಎಂಜಿನಿಯರ್ ಉಮಾಶಂಕರ್. ‘ಮತ್ತೆ ಕಸ ಎಸೆಯುವುದು ಪುನರಾವರ್ತನೆ ಆದರೆ ದಂಡ ವಿಧಿಸುತ್ತೇವೆ. ಭಾವಚಿತ್ರಗಳನ್ನು ಸಹ ತೆಗೆದುಕೊಳ್ಳುತ್ತಿದ್ದೇವೆ. ಇಲ್ಲಿಯವರೆಗೆ ಹೀಗೆ ತಪ್ಪು ಮಾಡಿದವರಿಗೆ ದಂಡ ವಿಧಿಸಿದ್ದೇವೆ. ಅವರು ಪಾವತಿಸಿದ್ದಾರೆ. ಒಂದು ವೇಳೆ ದಂಡ ಪಾವತಿಸಲು ನಿರಾಕರಿಸಿದರೆ ಅವರ ಮನೆಗಳು ಅಥವಾ ಅಂಗಡಿಗಳ ಎದುರು ನಗರಸಭೆಯ ವಾಹನಗಳನ್ನು ಕಳುಹಿಸಿ ಕಸ ಸುರಿಯುತ್ತೇವೆ’ ಎಂದು ಎಚ್ಚರಿಕೆ ನೀಡಿದರು. ಕಸ ಎಸೆಯುವವರ ಭಾವಚಿತ್ರವನ್ನು ತೆಗೆದ ತಕ್ಷಣ ಅವರು ಅವಮಾನವಾಯಿತು ಎನ್ನುವ ರೀತಿಯಲ್ಲಿ ವರ್ತಿಸುವರು. ಆಗ ನಾವು ತಿಳಿವಳಿಕೆ ಮೂಡಿಸುತ್ತೇವೆ. ತಿಳಿವಳಿಕೆಗೂ ಜಗ್ಗದಿದ್ದರೆ ದಂಡ ವಿಧಿಸುತ್ತಿದ್ದೇವೆ ಎಂದು ಹೇಳಿದರು.
ಹೋಟೆಲ್‌ಗೆ ಪರವಾನಗಿ ರದ್ದುಗೊಳಿಸುವ ಎಚ್ಚರಿಕೆ
ರಸ್ತೆ ಬದಿ ಬ್ಲಾಕ್ ಸ್ಪಾಟ್‌ಗಳು ಸೇರಿದಂತೆ ಎಲ್ಲೆಂದರಲ್ಲಿ ಕಸ ಎಸೆದವರಿಗೆ ₹100ರಿಂದ ₹2 ಸಾವಿರದವರೆಗೆ ದಂಡ ವಿಧಿಸಲಾಗಿದೆ. ನಗರದ ಪ್ರಮುಖ ಹೋಟಲ್‌ವೊಂದು ರಸ್ತೆ ಬದಿ ಕಸ ಎಸೆದಿದೆ. ಈ ಕಸವನ್ನು ನಗರಸಭೆ ಸಿಬ್ಬಂದಿ ತೆರವುಗೊಳಿಸಿ ಆ ಹೋಟೆಲ್ ಮಾಲೀಕರಿಗೆ ₹200 ದಂಡ ಸಹ ವಿಧಿಸಿದ್ದಾರೆ. ಮತ್ತೊಮ್ಮೆ ರಸ್ತೆಗೆ ಕಸ ಎಸೆದರೆ ಪರವಾನಗಿ ರದ್ದುಗೊಳಿಸುವ ಎಚ್ಚರಿಕೆ ಸಹ ನೀಡಿದ್ದಾರೆ. ನಂದಿನಿ ಮಿಲ್ಕ್ ಪಾರ್ಲರ್‌ಗಳು ಹೋಟೆಲ್‌ಗಳು ವಾಣಿಜ್ಯ ವಹಿವಾಟು ನಡೆಸುವ ಮಳಿಗೆಗಳು ಹೀಗೆ ವಿವಿಧ ವಲಯಗಳ ಮಾಲೀಕರ ಮೇಲೂ ದಂಡಾಸ್ತ್ರ ಪ್ರಯೋಗವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.