ADVERTISEMENT

ದ್ರಾಕ್ಷಿಯನ್ನು ತಿಪ್ಪೆಗೆ ಸುರಿಯಲು ಮುಂದಾಗಿದ್ದ ರೈತರು: ಸಾಗಾಟಕ್ಕೆ ಅನುಮತಿ ಪತ್ರ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2020, 6:53 IST
Last Updated 30 ಮಾರ್ಚ್ 2020, 6:53 IST
   

ಚಿಕ್ಕಬಳ್ಳಾಪುರ: ಕೊರೊನಾ ಸೃಷ್ಟಿಸಿದ ಬಿಕ್ಕಟ್ಟಿನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಜಿಲ್ಲೆಯ ದ್ರಾಕ್ಷಿ ಬೆಳೆಗಾರರ ನೆರವಿಗೆ ಜಿಲ್ಲಾಡಳಿತ ಸೋಮವಾರ ಮುಂದಾಗಿದೆ.

ಸರಕು ಸಾಗಣೆ ವಾಹನಗಳ ವ್ಯವಸ್ಥೆ ಅಸ್ತವ್ಯಸ್ತಗೊಂಡ ಪರಿಣಾಮ ಖರೀದಿದಾರರಿಲ್ಲದೆ ರೈತರು‌ ದ್ರಾಕ್ಷಿ ಫಸಲನ್ನು ಕಟಾವು ಮಾಡಿ ತಿಪ್ಪೆಗೆ ಸುರಿಯಲು ಮುಂದಾಗಿದ್ದರು. ಈ ಬಗ್ಗೆ 'ಪ್ರಜಾವಾಣಿ' ಭಾನುವಾರ ವಿಶೇಷ ವರದಿ ಪ್ರಕಟಿಸಿತ್ತು.

ವರದಿಯ ಬೆನ್ನಲ್ಲೇ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಸೋಮವಾರದಿಂದ ದ್ರಾಕ್ಷಿ ಸಾಗಾಟದ ವಾಹನಗಳಿಗೆ ಅನುಮತಿ ಪತ್ರ ನೀಡಲು ಮುಂದಾಗಿದೆ. ಜತೆಗೆ ಸಾಮಾಜಿಕ ಅಂತರ ಕಾಯ್ದುಕೊಂಡು ತೋಟಗಳ ಕಟಾವು ನಡೆಸುವಂತೆ ರೈತರಿಗೆ ಸೂಚಿಸಿದೆ.

ADVERTISEMENT

ದ್ರಾಕ್ಷಿ ಸಾಗಾಟ ಪರವಾನಗಿಯಿಂದಾಗಿ ರೈತರು ಎಂದಿನಂತೆ ಸ್ಥಳೀಯ ಮಾತ್ರವಲ್ಲದೆ ಅಂತರರಾಜ್ಯ ಮಾರುಕಟ್ಟೆಗಳಿಗೂ ದ್ರಾಕ್ಷಿ ಸಾಗಾಟ ಮಾಡಲು‌ ಅನುಕೂಲವಾಗಲಿದೆ.

'ದ್ರಾಕ್ಷಿ ಬೆಳೆಗಾರರ ಸಮಸ್ಯೆ ಗಮನಕ್ಕೆ ಬರುತ್ತಿದ್ದಂತೆ ತಹಶೀಲ್ದಾರ್ ಮೂಲಕ ರೈತರಿಗೆ ದ್ರಾಕ್ಷಿ ಸಾಗಾಟ ಪರವಾನಗಿ ಪತ್ರ ನೀಡಲಾಗುತ್ತಿದೆ. ಸೋಮವಾರ ಕೆಲ ರೈತರು ಪರವಾಗಿ ಪತ್ರ ಪಡೆದುಕೊಳ್ಳುತ್ತಿದ್ದಾರೆ' ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕುಮಾರಸ್ವಾಮಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.