ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದಲ್ಲಿರುವ ಅನಧಿಕೃತ ಸ್ವತ್ತುಗಳಿಗೆ ‘ಬಿ’ ಖಾತೆ ಅಭಿಯಾನ ನಡೆಸಲಾಗುತ್ತಿದೆ. ‘ಬಿ’ ಖಾತೆ ನೀಡುವ ವೇಳೆ ನಗರಸಭೆ ಸಿಬ್ಬಂದಿ ಸ್ವತ್ತುಗಳ ಮಾಲೀಕರಿಂದ ಹಣ ಪಡೆದರೆ ಆ ಸಿಬ್ಬಂದಿ ವಿರುದ್ಧ ನಿರ್ದಾಕ್ಷಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಾಸಕ ಪ್ರದೀಪ್ ಈಶ್ವರ್ ಎಚ್ಚರಿಸಿದರು.
ನಗರದಲ್ಲಿ ಮಂಗಳವಾರ ‘ಮನೆ ಮನೆಗೆ ಖಾತಾ ಅದಾಲತ್’ಗೆ ನೇಮಿಸಿರುವ ನಗರಸಭೆ ಸಿಬ್ಬಂದಿ ಹಾಗೂ ಅಧಿಕಾರಿಗಳ ಜೊತೆ ಸಭೆ ನಡೆಸಿ ಅವರು ಮಾತನಾಡಿದರು.
ಯಾವುದೇ ಕಾರಣಕ್ಕೂ ನಗರಸಭೆ ಸಿಬ್ಬಂದಿ ಮತ್ತು ಅಧಿಕಾರಿಗಳು ‘ಬಿ’ ಖಾತೆಗೆ ಹಣ ಪಡೆಯಬಾರದು. ಖಾತೆ ಪಡೆಯಲು ಬರುವವರ ಜೊತೆ ತಾಳ್ಮೆಯಿಂದ ವರ್ತಿಸಬೇಕು ಎಂದರು.
ಫೆ.20ರಿಂದ 22ರವರೆಗೆ ಬೆಳಿಗ್ಗೆ 8ರಿಂದ ಸಂಜೆ 4.30ರವರೆಗೆ ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿ ‘ಮನೆ ಮನೆಗೆ ಖಾತಾ ಅದಾಲತ್’ ನಡೆಯಲಿದೆ. ಸ್ವತ್ತುಗಳ ಮಾಲೀಕರು ಯಾವುದೇ ದಲ್ಲಾಳಿಗಳನ್ನು ಆಶ್ರಯಿಸದೆ ಖಾತೆಗಳನ್ನು ಪಡೆಯಬೇಕು ಎಂದರು.
ನೇಮಕವಾಗಿರುವ ಸಿಬ್ಬಂದಿ ಬೆಳಿಗ್ಗೆ 8ರಿಂದ ಸಂಜೆ 4.30ರವರೆಗೆ ನಿಗದಿ ಸ್ಥಳದಲ್ಲಿಯೇ ಇರಬೇಕು. ಅವರಿಗೆ ಅವರು ಇರುವ ಸ್ಥಳದಲ್ಲೇ ಊಟ, ತಿಂಡಿಯ ವ್ಯವಸ್ಥೆ ಮಾಡಲಾಗುವುದು. ‘ಬಿ’ ಖಾತೆ ಮಾಡಿಸಿಕೊಳ್ಳಲು ಯಾರಿಗೂ ನಗರಸಭೆ ಕಚೇರಿ ಬಳಿ ಬನ್ನಿ ಎನ್ನಬಾರದು. ಅರ್ಜಿಗಳನ್ನು ಪಡೆದು ಅವುಗಳನ್ನು ಪರಿಶೀಲಿಸಲಾಗುತ್ತದೆ ಎಂದರು.
ಯಾವುದೇ ಕಾರಣಕ್ಕೂ ಮೂರನೇ ವ್ಯಕ್ತಿ ದಾಖಲೆಗಳನ್ನು ತಂದುಕೊಟ್ಟರೆ ತೆಗೆದುಕೊಳ್ಳಬಾರದು. ಮಾಲೀಕರೇ ಅರ್ಜಿ ಮತ್ತು ದಾಖಲೆಗಳನ್ನು ನೀಡಬೇಕು ಎಂದು ಹೇಳಿದರು.
ಬಡವರಿಗೆ ಒಳ್ಳೆಯದು ಮಾಡಲು ಇದು ಒಳ್ಳೆಯ ಅವಕಾಶ. 2024–25ನೇ ಸಾಲಿನ ತೆರಿಗೆಯನ್ನು ಎರಡು ಪಟ್ಟು ಮಾತ್ರ ಪಾವತಿಸಬೇಕು. ಯಾವುದೇ ಕಾರಣಕ್ಕೂ ಅದಕ್ಕಿಂತ ಹೆಚ್ಚಿನ ವರ್ಷಗಳ ತೆರಿಗೆಯನ್ನು ಪಾವತಿಸುವಂತಿಲ್ಲ. ನಾಗರಿಕರಿಗೆ ಸಂದೇಹಗಳು ಇದ್ದರೆ ನಗರಸಭೆ ಕಚೇರಿ ಹಾಗೂ ಶಾಸಕರ ಕಚೇರಿ ಸಂಪರ್ಕಿಸಬಹುದು ಎಂದು ಹೇಳಿದರು.
ಒಂದೊಂದು ವಾರ್ಡ್‌ಗೆ ಒಂದೊಂದು ರೀತಿಯ ತೆರಿಗೆ ಇದೆ. ಆ ಬಗ್ಗೆ ನಗರಸಭೆ ಅಧಿಕಾರಿಗಳು ಮಾಹಿತಿ ನೀಡುವರು. ಸರ್ಕಾರವು ‘ಬಿ’ ಖಾತೆ ಪಡೆಯಲು 90 ದಿನಗಳ ಗಡುವು ವಿಧಿಸಿದೆ. ಆ ಸಮಯದ ಒಳಗೆ ಮಾಡಿಸಿಕೊಳ್ಳಬೇಕು ಎಂದರು.
ನಗರಸಭೆ ಪೌರಾಯುಕ್ತ ಮನ್ಸೂರ್ ಅಲಿ ಸಭೆಯಲ್ಲಿ ಪಾಲ್ಗೊಂಡಿದ್ದರು.
ಹಕ್ಕುಪತ್ರ ವಾಪಸ್
ಡಾ.ಕೆ.ಸುಧಾಕರ್ ಅವರು ನೀಡಿದ್ದ ನಿವೇಶನಗಳ ಹಕ್ಕುಪತ್ರಗಳನ್ನು ಹೌಸಿಂಗ್ ಬೋರ್ಡ್‌ನವರು ವಾಪಸ್ ಪಡೆದಿದ್ದಾರೆ. ಈ ವಿಚಾರ ನಿಗಮದ ಬಳಿ ಇದೆ ಎಂದು ಪ್ರದೀಪ್ ಈಶ್ವರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.