
ಚಿಂತಾಮಣಿ: ತಾಲ್ಲೂಕಿನ ವಿವಿಧೆಡೆ ಕ್ರೈಸ್ತರು ಯೇಸು ಕ್ರಿಸ್ತನ ಜನ್ಮದಿನವಾದ ಕ್ರಿಸ್‌ಮಸ್ ಹಬ್ಬವನ್ನು ಗುರುವಾರ ಸಡಗರ ಮತ್ತು ಸಂಭ್ರಮದಿಂದ ಆಚರಿಸಿದರು.
ಬೆಳಿಗ್ಗೆಯಿಂದಲೇ ಚರ್ಚ್‌ಗಳಿಗೆ ಕುಟುಂಬ ಸಮೇತ ತೆರಳಿ, ಯೇಸು ಕ್ರಿಸ್ತನ ಶಿಲುಬೆ ಮುಂದೆ ನಿಂತು ಶ್ರದ್ಧಾ, ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರು.
ಮಕ್ಕಳಿಂದ ಹಿಡಿದು ವೃದ್ಧರು ಸೇರಿದಂತೆ ಎಲ್ಲರೂ ಹಬ್ಬದ ಸಂಭ್ರಮದಲ್ಲಿ ಮಿಂದೆದ್ದರು. ಪುಟಾಣಿ ಮಕ್ಕಳು,ಯುವಕ,ಯುವತಿಯರು ಹೊಸ ಬಟ್ಟೆ ಧರಿಸಿ, ನಗರದ ಚರ್ಚ್‌ಗಳಿಗೆ ಬಂದಿದ್ದರು. ಸಂಜೆ ನಗರದ ಪ್ರಧಾನ ಚರ್ಚ್‌ನಲ್ಲಿ ಸೌಹಾರ್ದ ಮಿಲನ ಮತ್ತು ಜಾನಪದ ನೃತ್ಯ ಕಾರ್ಯಕ್ರಮ ನಡೆದವು.
ನಗರದ ಎನ್.ಆರ್. ಬಡಾವಣೆಯ ಪ್ರೊಟಿಸ್ಟಂಟ್ ಚರ್ಚ್, ಶಿಡ್ಲಘಟ್ಟ ವೃತ್ತದಲ್ಲಿರುವ ಕ್ಯಾಥೋಲಿಕ್ ಚರ್ಚ್, ಕೋಲಾರ ರಸ್ತೆಯಲ್ಲಿರುವ ಚರ್ಚ್, ಚೇಳೂರು ರಸ್ತೆಯಲ್ಲಿರುವ ಚರ್ಚ್ ಸೇರಿದಂತೆ ಎಲ್ಲ ಚರ್ಚ್‌ಗಳು ವಿಶೇಷ ಅಲಂಕಾರ ಮತ್ತು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದವು. ಚರ್ಚ್‌ಗಳ ಆವರಣದಲ್ಲಿ ನಕ್ಷತ್ರಗಳ ಮಿಂಚು, ಬಲೂನ್‌ಗಳ ಚಿತ್ತಾರ, ಹಚ್ಚ ಹಸಿರಿನ ಕ್ರಿಸ್ಮಸ್ ಟ್ರಿಗಳನ್ನು ಅಲಂಕಾರಕ್ಕೆ ಇಡಲಾಗಿತ್ತು.
ಬಾಲ ಯೇಸುವನ್ನು ಬರಮಾಡಿಕೊಳ್ಳಲು ವಿಭಿನ್ನ ವಿನ್ಯಾಸದ ಕ್ರಿಬ್‌ಗಳು, ಸಾಂತಾಕ್ಲಾಸ್ ಪ್ರತಿಬಿಂಬ, ಶುಭ ಸಂಕೇತದ ಗಂಟೆ, ಗೋದಲಿ, ಭಕ್ತರಿಂದ ಕ್ಯಾರಲ್ ಸಂಗೀತ ಹೀಗೆ ನಾನಾ ರೀತಿಯ ನಿರ್ಮಾಣಗಳು ಭಕ್ತರ ಗಮನಸೆಳೆದವು. ಯೇಸು ಕ್ರಿಸ್ತ ಜನಿಸಿದ ಸೂಚನೆ ನಕ್ಷತ್ರವಾದ ಕಾರಣ ನಕ್ಷತ್ರಾಕಾರದಲ್ಲಿ ಗೋದಲಿ ಹಾಗೂ ಯೇಸು ದನದ ಕೊಟ್ಟಿಗೆಯಲ್ಲಿ ಜನ್ಮ ತಾಳಿದ ಸಂಕೇತವಾಗಿ ದನದ ಕೊಟ್ಟಿಗೆಗಳನ್ನು ಎಲ್ಲ ಚರ್ಚ್‌ಗಳಲ್ಲಿ ರಚಿಸಲಾಗಿತ್ತು.
ಬುಧವಾರ ಮಧ್ಯ ರಾತ್ರಿಯಿಂದಲೇ ಕ್ರಿಸ್ಮಸ್ ಹಬ್ಬದ ಆಚರಣೆ ಆರಂಭವಾಗಿತ್ತು. ಮಧ್ಯರಾತ್ರಿ ವೇಳೆಯೂ ಚರ್ಚ್‌ಗಳಲ್ಲಿ ಹಾಗೂ ಕೆಲವು ಕ್ರೈಸ್ತ ಮುಖಂಡರ ಮನೆಗಳಲ್ಲಿ ಕ್ಯಾರಲ್ ಗಾಯನ, ಪ್ರಾರ್ಥನೆ ಅತ್ಯಂತ ಶ್ರದ್ಧೆ, ಭಕ್ತಿಯಿಂದ ನಡೆಯಿತು. ಕತ್ತಲಿನಿಂದ ಬೆಳಕಿನೆಡೆಗೆ ಸಾಗುವ ಸೂಚನೆಗಾಗಿ ಮೇಣದ ಬತ್ತಿಗಳನ್ನು ಬೆಳಗಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.
ಗುರುವಾರ ಬೆಳಿಗ್ಗೆ ಕ್ರೈಸ್ತರು ಚರ್ಚ್‌ಗಳಲ್ಲಿ ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಬೆಳಗಿನಿಂದ ರಾತ್ರಿವರೆಗೆ ಸಾಂತಾಕ್ಲಾಸ್ ವೇಷಧಾರಿ ಮತ್ತು ಸಮವಸ್ತ್ರ ತೊಟ್ಟ ಹಿರಿಯರು, ಕಿರಿಯರು ಹಾಡುತ್ತಾ, ಕುಣಿಯುತ್ತಾ ಮಕ್ಕಳಿಗೆ ಉಡುಗೊರೆ ನೀಡಿದರು. ಭಕ್ತರು ಹಾಗೂ ಭೇಟಿ ನೀಡಿದ ಸಾರ್ವಜನಿಕರಿಗೆ ಕೇಕ್ ವಿತರಿಸಲಾಯಿತು. ಇತರೆ ಧರ್ಮಿಯರು ಭೇಟಿ ನೀಡಿ ದೇವರ ದರ್ಶನ ಪಡೆದರು.
ಕ್ರೈಸ್ತರ ಮನೆಗಳಲ್ಲಿ ಕ್ರಿಸ್ಮಸ್ ವಿಶೇಷ ಕೇಕು, ಗಲಗಲಾ (ಡೈಮಂಡ್ ಬಿಸ್ಕೆಟ್) ಸಿಹಿ ತಿನಿಸು ಹಾಗೂ ಬಿರಿಯಾನಿ ಸೇರಿದಂತೆ ಮಾಂಸಾಹಾರದ ಭಕ್ಷ್ಯ ಭೋಜನಗಳನ್ನು ಸವಿದರು. ಸ್ನೇಹಿತರು, ಸಂಬಂಧಿಕರನ್ನು ಆಹ್ವಾನಿಸಿ ಹಬ್ಬದ ಊಟ ಹಾಕಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.