ADVERTISEMENT

ಚಿಂತಾಮಣಿ: ರಸ್ತೆ ಕಾಮಗಾರಿಗೆ ಭೂಮಿಪೂಜೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 6:11 IST
Last Updated 8 ಜನವರಿ 2026, 6:11 IST
ಚಿಂತಾಮಣಿ ತಾಲ್ಲೂಕಿನ ಬಡಗವಾರಹಳ್ಳಿಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು
ಚಿಂತಾಮಣಿ ತಾಲ್ಲೂಕಿನ ಬಡಗವಾರಹಳ್ಳಿಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು   

ಚಿಂತಾಮಣಿ: ಕೈಗಾರಿಕೆ ಪ್ರದೇಶಗಳ ಸ್ಥಾಪನೆಯಿಂದ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಾವಿರಾರು ಸ್ಥಳೀಯರಿಗೆ ಉದ್ಯೋಗ ಮತ್ತು ಸ್ವಂತ ಉದ್ಯೋಗಗಳನ್ನು ಕೈಗೊಳ್ಳಲು ಅವಕಾಶ ದೊರೆಯುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಕಾಗತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡಗವಾರಹಳ್ಳಿಯ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ₹25 ಲಕ್ಷ ವೆಚ್ಚದ ಸಿಮೆಂಟ್ ರಸ್ತೆ ಕಾಮಗಾರಿಗೆ ಬುಧವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ತಾಲ್ಲೂಕಿನ ಕನಿಶೆಟ್ಟಹಳ್ಳಿ, ಸೋಯಾಜಲಹಳ್ಳಿ ಬಳಿ 2010ರಲ್ಲೇ ಸುಮಾರು 900 ಎಕರೆ ಪ್ರದೇಶವನ್ನು ಕೈಗಾರಿಕಾ ಪ್ರಾಂಗಣಕ್ಕಾಗಿ ಗುರುತಿಸಲಾಗಿತ್ತು. 2013 ಚುನಾವಣೆಯ ರಾಜಕೀಯ ಏರುಪೇರಿನಿಂದ ಕಳೆದ 10 ವರ್ಷಗಳಲ್ಲಿ ಆ ಯೋಜನೆಯ ಕಡೆ ಯಾರು ಗಮನಹರಿಸಲಿಲ್ಲ. ಸೋಮಯಾಜಲಹಳ್ಳಿಯಲ್ಲಿ 280 ಎಕರೆಯನ್ನು ಪರಿಭಾವಿತ ಅರಣ್ಯ ಪ್ರದೇಶ ಎಂದು ಎಂದು ತಪ್ಪಾಗಿ ಗುರುತಿಸಿದರೂ ಯಾರು ಕಿವಿಗೊಡದೆ ಯೋಜನೆ ಸ್ಥಗಿತವಾಗಿತ್ತು ಎಂದರು.

ADVERTISEMENT

2023 ಮತ್ತೆ ಕೈಗಾರಿಕಾ ಪ್ರಾಂಗಣ ಸ್ಥಾಪನೆ ಕುರಿತು ಕ್ರಮಕೈಗೊಂಡಿದ್ದೇನೆ. ಕನಿಶೆಟ್ಟಿಹಳ್ಳಿಯಿಂದ ಮದನಪಲ್ಲಿ ರಸ್ತೆಯವರೆಗೂ ಮತ್ತೆ ಒಂದು ಸಾವಿರ ಎಕರೆಯನ್ನು ಗುರುತಿಸಲಾಗಿದೆ. ಅಧಿಕಾರಿಗಳು ರೈತರ ಸಭೆ ಕರೆದು ಮಾತುಕತೆ ನಡೆಸಿದ್ದಾರೆ. ಶೇ 90ರಷ್ಟು ರೈತರು ಒಪ್ಪಿಕೊಂಡಿದ್ದಾರೆ. ರೈತರಿಗೆ ಉತ್ತಮ ಪರಿಹಾರ ನೀಡಲಾಗುವುದು. ಮೊದಲ ಹಂತದಲ್ಲಿ ಜಮೀನು ನೀಡಿರುವ ರೈತರಿಗೆ ₹100 ಕೋಟಿ ಪರಿಹಾರವನ್ನು ಒಂದು ವಾರದೊಳಗೆ ನೇರವಾಗಿ ರೈತರಿಗೆ ವಿತರಿಸಲಾಗುವುದು ಎಂದು ತಿಳಿಸಿದರು.

ಸ್ಥಳೀಯರಿಗೆ ಉದ್ಯೋಗಾವಕಾಶದ ಜತೆಗೆ ಆ ಭಾಗದ ಭೂಮಿಯ ಬೆಲೆ 4-5 ಪಟ್ಟು ಹೆಚ್ಚಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನದ ಅಡಿಯಲ್ಲಿ ಜನಪ್ರತಿನಿಧಿಗಳು ಜನರ ಬದುಕಿನ ಬದಲಾವಣೆಗಾಗಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಬೇಕು. ಕೇವಲ ಪ್ರಚಾರಕ್ಕಾಗಿ ಸದಾ ಇನ್ನೊಬ್ಬರನ್ನು ಟೀಕಿಸುವ ಏಕೈಕ ಕಾರ್ಯಕ್ರಮದಿಂದ ಕಾಲಹರಣ ಮಾಡಿದರೆ ಯಾವುದೇ ಪ್ರಯೋಜನವಿಲ್ಲ ಎಂದು ಪರೋಕ್ಷವಾಗಿ ಮಾಜಿ ಶಾಸಕರನ್ನು ಟೀಕಿಸಿದರು.

ಕ್ಷೇತ್ರದ ಜನರ ಬದುಕಿನಲ್ಲಿ ಬದಲಾವಣೆ ತರಲು ಪ್ರಯತ್ನ ಮಾಡುತ್ತಿದ್ದೇನೆ. ಅಂತರ್ಜಲ ವೃದ್ಧಿಗಾಗಿ ಕೆ.ಸಿ.ವ್ಯಾಲಿಯ ಎರಡನೇ ಹಂತದಲ್ಲಿ 50 ಕೆರೆ ಮತ್ತು ಎಚ್.ಎನ್.ವ್ಯಾಲಿ ಯೋಜನೆಯಲ್ಲಿ 119 ಕೆರೆಗಳನ್ನು ತುಂಬಿಸುವ ಯೋಜನೆಗೂ ಮಂಜೂರಾತಿ ದೊರಕಿಸಿದ್ದೇನೆ. ಕೆರೆ ತುಂಬಿಸುವ ಯೋಜನೆ ಕೇವಲ ಅಂತರ್ಜಲ ವೃದ್ಧಿಗಾಗಿ ಮಾತ್ರ. ಕೆರೆಗಳಲ್ಲಿ ಯಾವುದೇ ಕೊಳವೆಬಾವಿಗಳನ್ನು ಕೊರೆಯಬಾರದು ಎಂದು ಸೂಚಿಸಲಾಗಿದೆ ಎಂದರು.

ಸರ್ಕಾರಿ ಯೋಜನೆಗಳ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಮುಕ್ತಾಯಗೊಳಿಸಿದರೆ ಸಾರ್ವಜನಿಕರಿಗೆ ಸಹಾಯವಾಗುತ್ತದೆ. ಕಾಮಗಾರಿ ಅಪೂರ್ಣಗೊಳಿಸಿ ಜನರಿಗೆ ತೊಂದರೆ ಮಾಡಬಾರದು. ವ್ಯವಸ್ಥಿತವಾಗಿ ಯೋಜನೆಗಳನ್ನು ರೂಪಿಸದೆ ಅಲ್ಲೊಂದು-ಇಲ್ಲೊಂದು ಅಪೂರ್ಣ ಕಾಮಗಾರಿಗಳನ್ನು ಕೈಗೊಂಡರೆ ಜನರಿಗೆ ಸೌಲಭ್ಯ ದೊರೆಯುವುದಿಲ್ಲ, ಸಾರ್ವಜನಿಕರ ತೆರಿಗೆ ಹಣವೂ ವ್ಯರ್ಥವಾಗುತ್ತದೆ ಎಂದರು.

ತಾಲ್ಲೂಕಿನ ಮುರುಗಮಲ್ಲ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ದುರಸ್ತಿ, ಭೂಮಿಶೆಟ್ಟಹಳ್ಳಿ ಗ್ರಾಮದ ಮುಖ್ಯರಸ್ತೆಯಿಂದ ಆದರ್ಶ ಶಾಲೆಯವರೆಗೂ ರಸ್ತೆ ಅಭಿವೃದ್ಧಿ ಕಾಮಗಾರಿ, ಇರಗಂಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡ್ಡಂಪಲ್ಲಿ ಗ್ರಾಮದ ಕೆರೆಕಟ್ಟೆ ಅಭಿವೃದ್ಧಿ ಕಾಮಗಾರಿ, ಎಂ.ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಂ.ಡಿ.ಆರ್‌ನಿಂದ ಪಲ್ಲಿಗಡ್ಡ-ಲಕ್ಕೇಪಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.

ಈರುಳ್ಳಿ ಶಿವಣ್ಣ, ನಾರಾಯಣಸ್ವಾಮಿ, ಮುನಿರಾಜು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.