
ಗೌರಿಬಿದನೂರು: ನಗರದ ಇಡಗೂರು ರಸ್ತೆಯ ವೀರಂಡಹಳ್ಳಿ ಬಳಿ ಕಸ ಹಾಕುವ ಬ್ಲಾಕ್‌ಸ್ಪಾಟ್‌ಗಳಲ್ಲಿ ಮಂಗಳವಾರ ನಗರಸಭೆ ವತಿಯಿಂದ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಯಿತು.
ನಗರಸಭೆ ಪೌರಾಯುಕ್ತ ಕೆ.ಜಿ. ರಮೇಶ್ ಮಾತನಾಡಿ, ‘ನಗರವನ್ನು ಸುಂದರವಾಗಿ ಕಾಣುವಂತೆ ಮಾಡಲು ಸಾರ್ವಜನಿಕರ ಸಹಕಾರ ಅಗತ್ಯ’ ಎಂದು ಹೇಳಿದರು.
ಕೆಲವರು ಮನೆಯಲ್ಲಿನ ಕಸವನ್ನು ನಗರಸಭೆ ವಾಹನಕ್ಕೆ ನೀಡದೆ, ಸಾರ್ವಜನಿಕರು ಓಡಾಡುವ ಸ್ಥಳಗಳಲ್ಲಿ ತಂದು ಸುರಿಯುತ್ತಿದ್ದಾರೆ. ಇಂತಹ ಬ್ಲಾಕ್‌ಸ್ಪಾಟ್‌ಗಳನ್ನು ಗುರುತು ಮಾಡಿ, ರಂಗೋಲಿ ಹಾಕಿ, ಹೂವಿನ ಗಿಡಗಳನ್ನು ನೆಟ್ಟು, ಇಲ್ಲಿ ಯಾರು ಕಸ ಹಾಕಬಾರದು ಎಂದು ನಾಮಫಲಕ ಅಳವಡಿಸಲಾಗುತ್ತಿದೆ ಎಂದು ಹೇಳಿದರು.
ಕೆಲವು ಜಾಗಗಳಲ್ಲಿ ಜನರಿಗೆ ನಗರಸಭೆ ಕಸದ ವಾಹನಕ್ಕೆ ಹಸಿ ಮತ್ತು ಒಣ ಕಸವನ್ನು ನೀಡಬೇಕು ಎಂದು ಎಷ್ಟೇ ಮನವಿ ಮಾಡಿದರೂ ರಸ್ತೆ ಬದಿಯೇ ತಂದು ಸುರಿಯುತ್ತಿದ್ದಾರೆ. ಇಂತಹ ಸ್ಥಳಗಳನ್ನು ನಗರಸಭೆಯಿಂದ ಅಂದಗೊಳಿಸುವ ಕೆಲಸ ಮಾಡಲಾಗುತ್ತಿದೆ. ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.
ಪ್ರಜ್ಞಾವಂತ ಜನರು ಹಸಿ ಮತ್ತು ಒಣಕಸ ವಿಂಗಡಿಸಿ ನಗರಸಭೆ ವಾಹನಗಳಿಗೆ ನೀಡುತ್ತಿದ್ದಾರೆ. ಪೌರ ಕಾರ್ಮಿಕರು ಮನೆ ಮನೆಗೆ ತೆರಳಿ ಈ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ನಗರಸಭೆ ಪರಿಸರ ಅಭಿಯಂತರ ಶಿವಶಂಕರ್, ಆರೋಗ್ಯ ನಿರೀಕ್ಷಕ, ನವೀನ್, ಶ್ವೇತಾ, ಸಣ್ಣ ಮೀರ್, ನಗರಸಭೆ ಸಿಬ್ಬಂದಿ ಹಾಗೂ ವಾರ್ಡ್ ನಿವಾಸಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.