ADVERTISEMENT

ಕೋವಿಡ್-19 | ಚಿಕ್ಕಬಳ್ಳಾಪುರದಲ್ಲಿ ಎರಡನೇ ಬಲಿ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2020, 7:15 IST
Last Updated 15 ಏಪ್ರಿಲ್ 2020, 7:15 IST
   

ಚಿಕ್ಕಬಳ್ಳಾಪುರ: ಕೋವಿಡ್-19ಗೆ ತುತ್ತಾಗಿದ್ದ ನಗರದ 17ನೇ ವಾರ್ಡ್ ವ್ಯಾಪ್ತಿಯ ಅಂಜುಮನ್ ರಸ್ತೆ ನಿವಾಸಿ 69 ವರ್ಷದ ವ್ಯಕ್ತಿ ಬುಧವಾರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಈ ಮಾಹಿತಿನಖಚಿತಪಡಿಸಿರುವ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು, ‘ಚಿಕ್ಕಬಳ್ಳಾಪುರದ 69 ವರ್ಷದ ವ್ಯಕ್ತಿಯೊಬ್ಬರು ಕೋವಿಡ್‌–19ಸೋಂಕಿನಿಂದ ಮೃತಪಟ್ಟಿದ್ದಾರೆ. ಪಾರ್ಥಿವ ಶರೀರವನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ‌ ಇಡಲಾಗಿದ್ದು, ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ಅಂತ್ಯಕ್ರಿಯೆಗೆ ಇಲಾಖೆಯು ಸಿದ್ಧತೆ ನಡೆಸುತ್ತಿದೆ. ದಯಮಾಡಿ ಸಾರ್ವಜನಿಕರು ಮನೆಯಲ್ಲೇ ಸುರಕ್ಷಿತವಾಗಿರಬೇಕು ಎಂದು ವಿನಂತಿಸುತ್ತೇನೆ’ಎಂದು ಟ್ವೀಟ್ ಮಾಡಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ ಗೌರಿಬಿದನೂರಿನ 12 ಜನರಲ್ಲಿ ಮತ್ತು ಚಿಕ್ಕಬಳ್ಳಾಪುರದ ಒಬ್ಬ ವ್ಯಕ್ತಿ ಸೇರಿ ಒಟ್ಟು 13 ಮಂದಿಯಲ್ಲಿ ಕೋವಿಡ್ ಪತ್ತೆಯಾಗಿತ್ತು. ಈ ಪೈಕಿ 72 ವರ್ಷದ ವೃದ್ದೆಯೊಬ್ಬರು ಮಾರ್ಚ್ 25 ರಂದು ಮೃತಪಟ್ಟಿದ್ದರು. ಚಿಕಿತ್ಸೆಯಲ್ಲಿದ್ದ 12 ಜನರ ಪೈಕಿ 8 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ADVERTISEMENT

ಬುಧವಾರ ಮೃತಪಟ್ಟಿರುವ ವ್ಯಕ್ತಿಗೆ ಕೋವಿಡ್ ತಗಲಿರುವುದು ಮಂಗಳವಾರವಷ್ಟೇ ದೃಢಪಟ್ಟಿತ್ತು. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಸೋಮವಾರ ಸಂಜೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕೋವಿಡ್ ಸೋಂಕಿತರ ಸಂಪರ್ಕದ ಯಾವುದೇ ಕುರುಹುಗಳು ಇಲ್ಲದಿದ್ದರೂ ನಗರದ ವ್ಯಕ್ತಿ ದಿಢೀರ್ ಕೋವಿಡ್ಗೆ ಬಲಿಯಾಗಿರುವುದು ನಗರವನ್ನು ತಲ್ಲಣಿಸುವಂತೆ ಮಾಡಿದೆ.

ಈಗಾಗಲೇ ಆರೋಗ್ಯ ಇಲಾಖೆ ಅಧಿಕಾರಿಗಳು ಮೃತ ಸೋಂಕಿತನ ಪತ್ನಿ, ಇಬ್ಬರು ಮಕ್ಕಳು, ಮನೆಗೆಲಸದ ಮಹಿಳೆಯನ್ನು ಜಿಲ್ಲಾ ಆಸ್ಪತ್ರೆಯ ಕೋವಿಡ್ ವಾರ್ಡ್ನಲ್ಲಿ ಕ್ವಾರಂಟೈನ್ಗೆ ಒಳಪಡಿಸಿ, ನಿಗಾ ವಹಿಸಿದ್ದಾರೆ.

ಅಂಜುಮನ್ ನಗರದ ವ್ಯಕ್ತಿಗೆ ಯಾವ ಮೂಲದಿಂದ ಕೋವಿಡ್ ತಗುಲಿದೆ ಎಂದು ಪತ್ತೆ ಮಾಡಲು ಆರೋಗ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

ನಗರದಲ್ಲಿ ಕೋವಿಡ್ ಪ್ರಕರಣ ವರದಿಯಾದ ಬೆನ್ನಲ್ಲೇ 17 ವಾರ್ಡ್ ವ್ಯಾಪ್ತಿಯಲ್ಲಿ ಜಿಲ್ಲಾಡಳಿತ ಮಂಗಳವಾರ ಸೀಲ್ ಡೌನ್ ಜಾರಿಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.