ಗೌರಿಬಿದನೂರು: ದೇವನಹಳ್ಳಿ ಬಳಿ ರೈತರ ಜಮೀನನ್ನು ಸ್ವಾಧೀನ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ರಾಜ್ಯ ಸರಕಾರ ಕೈಬಿಟ್ಟ ಹಿನ್ನೆಲೆಯಲ್ಲಿ ತಾಲ್ಲೂಕಿನಲ್ಲಿ ರೈತರು ಶುಕ್ರವಾರ ನಗರದ ಗಾಂಧಿ ವೃತ್ತದಲ್ಲಿ ವಿಜಯೋತ್ಸವ ಆಚರಿಸಿದರು.
ರಾಜ್ಯ ಜನಶಕ್ತಿ ಮತ್ತು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ರಾಜ್ಯ ಉಪಾಧ್ಯಕ್ಷ ಸಿರಿಮನೆ ನಾಗರಾಜ್ ಮಾತನಾಡಿ, ದೇವನಹಳ್ಳಿ ತಾಲ್ಲೂಕು ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ 1,777 ಎಕರೆ ಭೂಮಿಯ ಬಲವಂತದ ಭೂ ಸ್ವಾಧೀನವನ್ನು ವಿರೋಧಿಸಿ 1,198 ದಿನ ನಡೆಸಿದ ಸಂಯುಕ್ತ ಹೋರಾಟಕ್ಕೆ ಜಯ ದೊರೆತಿದೆ ಎಂದರು.
ಈ ಹೋರಾಟದಲ್ಲಿ ರಾಜ್ಯ ಸೇರಿದಂತೆ ತಾಲ್ಲೂಕಿನ ದಲಿತ ಸಂಘರ್ಷ ಸಮಿತಿ, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ, ಎದ್ದೇಳು ಕರ್ನಾಟಕ, ಜೀತ ವಿಮುಕ್ತ ಕರ್ನಾಟಕ, ರೈತ ಸಂಘಟನೆ, ಕಾರ್ಮಿಕ ಸಂಘಟನೆಗಳು ಭಾಗವಹಿಸಿ ಹೋರಾಟದ ಯಶಸ್ಸಿಗೆ ಕಾರಣವಾಗಿವೆ. ಈ ನಿಟ್ಟಿನಲ್ಲಿ ಬೆಂಬಲ ಸೂಚಿಸಿದ ರಾಜ್ಯದ ಎಲ್ಲಾ ತಾಲ್ಲೂಕುಗಳಿಗೆ ತೆರಳಿ ವಿಜಯೋತ್ಸವ ಆಚರಿಸುವುದರ ಜೊತೆಗೆ ರೈತರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇವೆ ಎಂದರು.
ರಾಜ್ಯ ಸಮಿತಿ ಸದಸ್ಯ ಮರಿಯಪ್ಪ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಾಭಿಪ್ರಾಯಕ್ಕೆ ಒಂದಲ್ಲಾ ಒಂದು ದಿನ ಜಯ ಸಿಕ್ಕೇ ಸಿಗುತ್ತದೆ ಎಂಬುದನ್ನು ನಮ್ಮ ಒಗ್ಗಟ್ಟಿನ ಹೋರಾಟ ನಿರೂಪಿಸಿದೆ. ಮುಂದೆ ಕೂಡ ಸರ್ಕಾರಗಳು ಯಾವುದೇ ಕಾರಣಕ್ಕೂ ರೈತರ ಜಮೀನುಗಳನ್ನು ಬಲವಂತದ ಭೂ ಸ್ವಾಧೀನ ಮಾಡಿಕೊಳ್ಳುವ ಸಾಹಸಕ್ಕೆ ಕೈ ಹಾಕಬಾರದು ಎಂದರು.
ರಾಜ್ಯ ಸಮಿತಿ ಖಜಾಂಚಿ ಶ್ರೀರಂಗಚಾರಿ ಮಾತನಾಡಿ, ಭೂಮಿ ಕಳೆದುಕೊಳ್ಳುವ ಆತಂಕದಲ್ಲಿದ್ದ ರೈತರಿಗೆ ಆಶಾಬೆಳಕಾಗಿ ರೈತ ಸಂಘಗಳು ಬೆನ್ನೆಲುಬಾಗಿ ನಿಂತಿದ್ದರಿಂದ ಇಂದು ಭೂಮಿ ರೈತರಿಗೆ ದಕ್ಕಿದೆ. ಚನ್ನರಾಯಪಟ್ಟಣದಲ್ಲಿ ಅನ್ನ ಬೆಳೆಯುವ ರೈತರ ಜಮೀನನ್ನು ಕಾರ್ಪೊರೇಟ್ ಕಂಪನಿಗಳ ಒತ್ತಡಕ್ಕೆ ಮಣಿದು ಸರ್ಕಾರ ಅವರಿಗೆ ನೀಡಲು ಮುಂದಾಗಿತ್ತು. ಇಂತಹ ರೈತ ವಿರೋಧಿ ಸರ್ಕಾರಗಳ ವಿರುದ್ಧ ರೈತರು ಎಚ್ಚೆತ್ತುಕೊಳ್ಳಬೇಕು. ಬಲವಂತದ ಭೂ ಸ್ವಾಧೀನ ಮಾಡುವುದನ್ನು ವಿರೋಧಿಸಿ, ಫಲವತ್ತಾದ ಭೂಮಿ ಉಳಿಸಿಕೊಳ್ಳಬೇಕು ಎನ್ನುವುದು ಎಲ್ಲರ ಬಯಕೆಯಾಗಿತ್ತು. ನಂತರ ಎಲ್ಲಾ ಸಂಘಗಳ ಒಕ್ಕೊರಲಿನಿಂದ ಇದನ್ನು ತಡೆಯಬೇಕು ಎಂದು ನಿರ್ಧರಿಸಲಾಯಿತು ಎಂದು ತಿಳಿಸಿದರು.
ಮುಖಂಡ ಮುರುಗೇಶ್, ವಕೀಲ ಎಂ.ಆರ್ ಲಕ್ಷ್ಮಿನಾರಾಯಣ್, ಸಿದ್ದಗಂಗಪ್ಪ, ಇಡಗೂರು ಸೋಮಯ್ಯ, ಪಿ.ನರಸಿಂಹಮೂರ್ತಿ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ಗುಂಡಾಪುರ ಲೋಕೇಶ್ ಗೌಡ ಮಾತನಾಡಿದರು.
ಆದಿನಾರಾಯಣಪ್ಪ, ನಂಜಪ್ಪ, ಗೋಪಾಲ್ ಗೌಡ, ವಿನಯ್, ಲಕ್ಷ್ಮಿನಾರಾಯಣ್, ಅಂಜಿನಪ್ಪ ಸೇರಿದಂತೆ ರೈತ ಮುಖಂಡರು, ಕಾರ್ಮಿಕ ಮತ್ತು ಮಹಿಳೆಯರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.