ADVERTISEMENT

ತಿರುಮಲ ತಿರುಪತಿ ದೇವಸ್ಥಾನ ಹೋಲುವ ದೇವರಗುಡಿಪಲ್ಲಿ: ಮೂಲಸೌಕರ್ಯ ಕೊರತೆ

ಕನಿಷ್ಠ ಸೌಲಭ್ಯಗಳಿಲ್ಲದೆ ಭಕ್ತರ ಪರದಾಟ

ಪಿ.ಎಸ್.ರಾಜೇಶ್
Published 30 ಡಿಸೆಂಬರ್ 2025, 4:32 IST
Last Updated 30 ಡಿಸೆಂಬರ್ 2025, 4:32 IST
ಬಾಗೇಪಲ್ಲಿ ತಾಲ್ಲೂಕಿನ ದೇವರಗುಡಿಪಲ್ಲಿ (ಗಡಿದಂ) ಲಕ್ಷ್ಮಿವೆಂಕಟರಮಣಸ್ವಾಮಿ ದೇವಾಲಯದ ನೋಟ
ಬಾಗೇಪಲ್ಲಿ ತಾಲ್ಲೂಕಿನ ದೇವರಗುಡಿಪಲ್ಲಿ (ಗಡಿದಂ) ಲಕ್ಷ್ಮಿವೆಂಕಟರಮಣಸ್ವಾಮಿ ದೇವಾಲಯದ ನೋಟ   

ಬಾಗೇಪಲ್ಲಿ: ತಾಲ್ಲೂಕಿನಲ್ಲಿರುವ ಪುರಾಣ, ಐತಿಹಾಸಿಕ ಪ್ರಸಿದ್ಧವಾದ ದೇವರಗುಡಿಪಲ್ಲಿ (ಗಡಿದಂ) ಲಕ್ಷ್ಮಿವೆಂಕಟರಮಣ ದೇವಾಲಯಕ್ಕೆ ಪ್ರತಿನಿತ್ಯ ಭಕ್ತ ಸಾಗರವೇ ಹರಿದುಬರುತ್ತಿದೆ. ಇದರಿಂದಾಗಿ ತಾಲ್ಲೂಕಿನ ಪ್ರವಾಸೋದ್ಯಮ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿದೆ. 

ಆದರೆ, ಈ ಕ್ಷೇತ್ರಕ್ಕೆ ಅನುದಾನ ಲಭ್ಯವಾಗುತ್ತಿಲ್ಲ. ಇದರಿಂದಾಗಿ ಈ ಕ್ಷೇತ್ರದಲ್ಲಿ ಮೂಲಸೌಲಭ್ಯಗಳೇ ಇಲ್ಲದೆ, ಭಕ್ತರು ಪರದಾಡುವ ದುಃಸ್ಥಿತಿ ಎದುರಾಗಿದೆ. 

ದೇವಾಲಯದ ಪ್ರಾಂಗಣದಲ್ಲಿ ಕೊಠಡಿಗಳು, ಹೊರಭಾಗದಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆಯಷ್ಟೇ. ಉಳಿದಂತೆ ಕನಿಷ್ಠ ಮೂಲಭೂತ ಸೌಲಭ್ಯಗಳು ಇಲ್ಲ. ವೈಕುಂಠ ಏಕಾದಶಿ, ಶ್ರಾವಣ ಮಾಸ, ಬ್ರಹ್ಮರಥೋತ್ಸವ, ಕಲ್ಯಾಣೋತ್ಸವಗಳು ಸೇರಿದಂತೆ ದೇವಾಲಯಗಳಲ್ಲಿ ವಿಶೇಷ ಪೂಜಾಕೈಂಕರ್ಯಗಳು ನಡೆಯುತ್ತಿರುತ್ತವೆ. ರಾಜ್ಯ, ಹೊರರಾಜ್ಯಗಳಿಂದ ನೂರಾರು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಆದರೆ, ಹೀಗೆ ಬರುವ ಭಕ್ತರು, ಪ್ರವಾಸಿಗರಿಗೆ ತಂಗಲು ಸಮುದಾಯ ಭವನ ಇಲ್ಲ.

ADVERTISEMENT

ಇನ್ನು ಕುಡಿಯುವ ನೀರು, ಸ್ನಾನಗೃಹಗಳು, ಬಿಸಿನೀರು, ಶೌಚಾಲಯಗಳೂ ಇಲ್ಲ. ದೇವರ ಹೆಸರಿನಲ್ಲಿ ಮುಡಿ ಕೊಡಲು ಕೊಠಡಿಗಳನ್ನು ನಿರ್ಮಿಸಲಾಗಿದೆ. ಆದರೆ, ಅವುಗಳು ಸಮರ್ಪಕವಾಗಿಲ್ಲ. ಮಹಿಳೆಯರು, ಹೆಣ್ಣುಮಕ್ಕಳು ಸ್ನಾನ ಮಾಡಲು, ಸ್ನಾನಗೃಹಗಳು, ಶೌಚಾಲಯಗಳಿಲ್ಲ. ಒಟ್ಟಾರೆ ಸೌಕರ್ಯಗಳ ಅಭಾವದಿಂದ ಈ ಗಡಿದಂ ಕ್ಷೇತ್ರವು ಕೊರಗುತ್ತಿದೆ ಎಂದು ಪ್ರವಾಸಿಗರು ಹೇಳುತ್ತಾರೆ. 

ಇಲ್ಲಿಗೆ ಬರುವ ಭಕ್ತರ ಅನುಕೂಲಕ್ಕಾಗಿ ಗ್ರಾಮದಲ್ಲಿ ಯಾತ್ರಿ ನಿವಾಸ ನಿರ್ಮಿಸಲಾಗಿದೆ. ಆದರೆ, ನಿರ್ವಹಣೆ ಇಲ್ಲದೆ ಯಾತ್ರಿ ನಿವಾಸವು ಅನೈತಿಕ ಚಟುವಟಿಕೆಗಳ ತಾಣವಾಗಿ ಬದಲಾಗಿದೆ. ಯಾತ್ರಿ ನಿವಾಸಕ್ಕೆ ಬಾಗಿಲು, ಕಿಟಕಿಗಳು ಇಲ್ಲ. ಕಸ, ತ್ಯಾಜ್ಯ ಹಾಕುವ ಸ್ಥಳವಾಗಿ ಮಾರ್ಪಟ್ಟಿದ್ದು, ಕಳೆ ಮತ್ತು ಮುಳ್ಳಿನ ಗಿಡಗಳು ಬೆಳೆದುನಿಂತಿವೆ. 

ಐತಿಹಾಸಿಕ ಗಡಿದಂ ಲಕ್ಷ್ಮಿವೆಂಕಟರಮಣ ಪುಣ್ಯಕ್ಷೇತ್ರವನ್ನು ಪ್ರವಾಸಿ ತಾಣವಾಗಿ ರೂಪಿಸಬೇಕು. ಪುಷ್ಕರಣಿ, ಸಮುದಾಯ ಭವನ, ಉದ್ಯಾನವನ ಮತ್ತು ಭಕ್ತರು ತಂಗಲು ಕೊಠಡಿಗಳು ಸೇರಿದಂತೆ ಮೂಲಸೌಲಭ್ಯಗಳನ್ನು ಕಲ್ಪಿಸಬೇಕು. ಹಂತಹಂತವಾಗಿ ಅಭಿವೃದ್ಧಿಪಡಿಸಬೇಕು ಎಂದು ಭಕ್ತರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. 

ಇತಿಹಾಸ: ಕ್ರಿ.ಶ 16 ನೇ ಶತಮಾನದ ವಿಜಯನಗರ ಅರಸ ಕೃಷ್ಣದೇವರಾಯರ ನಂತರ ಕಾಲಘಟ್ಟದಲ್ಲಿ ಈ ಸ್ಥಳಕ್ಕೆ ಕೃಷ್ಣಸಮುದ್ರ ಎಂದು ಕರೆಯಲಾಗಿದೆ. ನಂತರ ತಿರುವೆಂಗಡನಾಥ ದೇವಾಲಯದಿಂದ ದೇವರಗುಡಿಪಲ್ಲಿ ಎಂಬ ಹೆಸರು ಬಂದಿದೆ. ಇಲ್ಲಿನ ಶಾಸನಗಳ ಪ್ರಕಾರ ಈ ದೇವಾಲಯದಕ್ಕೆ ಪ್ರಸನ್ನ ಶ್ರೀನಿವಾಸ ಮತ್ತು ತಿರುವೆಂಗಡನಾಥ ಎಂಬ 2 ಹೆಸರುಗಳಿವೆ. ವಿಜಯನಗರ ಕಾಲದ ಅರಸರ ಆರಂಭ ಕಾಲದಲ್ಲಿ ಕಲ್ಲಿನ ದೇವಾಲಯ ನಿರ್ಮಾಣವಾಗಿತ್ತು. ಈಗಿನ ದೇವಾಲಯದ ಗರ್ಭಗುಡಿ ಶಾಸನದ ಪ್ರಕಾರ 14ನೇ ಶತಮಾನದಲ್ಲಿ ಈ ಗುಡಿ ಕಟ್ಟಲಾಗಿದೆ. ದೇವಾಲಯದ ಗೋಡೆಗಳು ಭದ್ರವಾಗಿವೆ. ಹೊರಮೊಗಶಾಲೆ ದ್ರಾವಿಡ ಶೈಲಿಯ ಗೋಡೆಕಂಬಗಳು ಇವೆ.

ದೇವಾಲಯದ ಗರ್ಭಗುಡಿಯಲ್ಲಿ ವೆಂಕಟರಮಣ ದೇವರ ಮೂಲ ವಿಗ್ರಹವನ್ನು ಗರುಡ ಪೀಠದ ಮೇಲೆ ನಿಲ್ಲಿಸಲಾಗಿದೆ. ಅಕ್ಕಪಕ್ಕದಲ್ಲಿ ಭೂದೇವಿ, ಶ್ರೀದೇವಿಯರು ಶೋಭಿಸಿದ್ದಾರೆ. ಸ್ವಾಮಿಯ ಪ್ರಭಾವಳಿಯಲ್ಲಿ ವಿಷ್ಣುವಿನ ದಶಾವತಾರದಲ್ಲಿ ಕೆತ್ತನೆ ಮಾಡಲಾಗಿದೆ. ಮೂಲವಿಗ್ರಹವು 5 ಅಡಿಯಷ್ಟು ಎತ್ತರ ಇದೆ. ದೇವಾಲಯದ ಮುಂದೆ 108 ಅಡಿಗಳ ಎತ್ತರದ ಗೋಪುರ ನಿರ್ಮಿಸಲಾಗಿದೆ. ಮೂರು ದಿಕ್ಕುಗಳಲ್ಲಿ ಚಿಕ್ಕದಾದ ಗೋಪುಗಳಿವೆ. 

ಭಕ್ತರ ಅನುಕೂಲಕ್ಕೆ ನಿರ್ಮಿಸಿದ ಯಾತ್ರಿ ನಿವಾಸವನ್ನು ದುರಸ್ತಿಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಗಡಿದಂ, ಗುಮ್ಮನಾಯಕನಪಾಳ್ಯ ಕೋಟೆ ಅಭಿವೃದ್ಧಿಗೆ ಅನುದಾನಕ್ಕಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಅನುದಾನ ಬಂದ ಕೂಡಲೇ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು. 

ನಿರ್ವಹಣೆ ಕೊರತೆಯಿಂದ ಹಾಳು ಕೊಂಪೆಯಾದ ಗ್ರಾಮದಲ್ಲಿನ ಭಕ್ತರ ಯಾತ್ರಿ ನಿವಾಸ
ಮುಡಿ ಕೊಡುವ ಕಟ್ಟಡ ಕಾಮಗಾರಿ ಅಪೂರ್ಣ

ಕ್ಷೇತ್ರದ ಅಭಿವೃದ್ಧಿಗೆ ಮನವಿ

ತಾಲ್ಲೂಕಿನ ಗಡಿದಂ ಲಕ್ಷ್ಮಿವೆಂಕಟರಮಣಸ್ವಾಮಿ ದೇವರು ತಿರುಮಲದಲ್ಲಿನ ಲಕ್ಷ್ಮಿವೆಂಕಟರಮಣ ದೇವರನ್ನೇ ಹೋಲುತ್ತದೆ. ಇದರಿದಾಗಿ ಎರಡನೇ ತಿರುಮಲ ತಿರುಪತಿ ಎಂದೇ ಖ್ಯಾತಿ ಪಡೆದಿದೆ. ಇಂಥ ಐತಿಹಾಸಿಕ ಪುರಾಣ ಪ್ರಸಿದ್ಧ ಗಡಿದಂ ಲಕ್ಷ್ಮಿವೆಂಕಟರಮಣ ದೇವಸ್ಥಾನದಲ್ಲಿ ಮೂಲ ಸೌಲಭ್ಯಗಳಿಲ್ಲ. ಮೂಲ ಸೌಲಭ್ಯ ಕಲ್ಪಿಸಲು ಒತ್ತಾಯಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಗ್ರಾಮದ ಹಿರಿಯ ಡಿ.ಎನ್. ಶಿವರಾಮರೆಡ್ಡಿ ತಿಳಿಸಿದರು.  ರಾಜ್ಯದ ವಿವಿಧ ಭಾಗಗಳಷ್ಟೇ ಅಲ್ಲದೆ ಆಂಧ್ರಪ್ರದೇಶ ತೆಲಂಗಾಣ ಸೇರಿದಂತೆ ವಿವಿಧೆಡೆಯಿಂದ ಪ್ರತಿನಿತ್ಯ ನೂರಾರು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ದೂರದ ಪ್ರದೇಶಗಳಿಂದ ಬರುವ ಭಕ್ತರಿಗೆ ತಂಗಲು ಸಮುದಾಯ ಭವನ ಕೊಠಡಿಗಳು ನಿರ್ಮಾಣವಾಗಬೇಕು. ಶೌಚಾಲಯಗಳು ಸ್ನಾನಗೃಹಗಳನ್ನು ನಿರ್ಮಿಸಬೇಕು. ಐತಿಹಾಸಿಕ ಪುಣ್ಯಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡಬೇಕು ಎಂದು ಬ್ರಾಹ್ಮಣದ ಸಂಘದ ತಾಲ್ಲೂಕು ಅಧ್ಯಕ್ಷ ಎಸ್. ಮುನಿರಾಮಯ್ಯ ತಿಳಿಸಿದರು. 

ಇಂದು ವೈಕುಂಠ ಸಂಭ್ರಮ

ದೇವರಗುಡಿಪಲ್ಲಿ (ಗಡಿದಂ) ಗ್ರಾಮದ ಲಕ್ಷ್ಮೀವೆಂಕಟರಮಣ ದೇವಾಲಯದಲ್ಲಿ ಇದೇ 30ರಂದು ವೈಕುಂಠ ಏಕಾದಶಿ ಪ್ರಯುಕ್ತ ಭಕ್ತರಿಗೆ ವೈಕುಂಠ ದರ್ಶನ ವ್ಯವಸ್ಥೆ ಹಮ್ಮಿಕೊಳ್ಳಲಾಗಿದೆ. ದೇವಾಲಯದ ಉತ್ತರ ದಿಕ್ಕಿನ ಗೋಪುರ ಕೆಳಗೆ ಉಯ್ಯಾಲೆಯಲ್ಲಿ ಸ್ವಾಮಿಯ ಶಿಲಾವಿಗ್ರಹಗಳನ್ನು ಇರಿಸಿ ಭಕ್ತರಿಗೆ ದರ್ಶನ ಮಾಡಿಸಲು ಅಗತ್ಯ ಸಿದ್ಧತೆ ನಡೆದಿದೆ. ವಿದ್ಯುತ್ ದೀಪಾಲಂಕಾರ ಹೂವುಗಳಿಂದ ಅಲಂಕಾರದ ಶೋಭೆಯಲ್ಲಿ ದೇವರ ಉತ್ಸವಮೂರ್ತಿಗಳು ಕಾಣಿಸಲಿವೆ. ಮಂಗಳವಾರ ಬೆಳಗಿನ ಜಾವ 4 ಗಂಟೆಗೆ ಮಹಾಮಂಗಳಾರತಿ ಮಾಡಿ ದೇವರ ದರ್ಶನಕ್ಕೆ ಇರಿಸಲಾಗಿದೆ ಎಂದು ದೇವಾಲಯದ ಪ್ರಧಾನ ಅರ್ಚಕ ಕೆ.ಪ್ರಕಾಶರಾವ್ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.