ಚಿಕ್ಕಬಳ್ಳಾಪುರ: ಧರ್ಮಸ್ಥಳ ಕ್ಷೇತ್ರದ ವಿರುದ್ಧ ಅಪಪ್ರಚಾರ ನಡೆಸಲಾಗುತ್ತಿದೆ. ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ತೇಜೋವಧೆ ಮಾಡಲಾಗುತ್ತಿದೆ. ಹೀಗೆ ಮಾಡುತ್ತಿರುವವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ನಗರದಲ್ಲಿ ಮಂಗಳವಾರ ಜಿಲ್ಲಾ ಜನಜಾಗೃತ ಸಮಿತಿ ಹಾಗೂ ಧರ್ಮಸ್ಥಳ ಭಕ್ತರು ಪ್ರತಿಭಟಿಸಿದರು.
ಧರ್ಮಸ್ಥಳ ಭಕ್ತಾಭಿಮಾನಿಗಳ ವೇದಿಕೆ ಈ ಪ್ರತಿಭಟನೆ ಹಮ್ಮಿಕೊಂಡಿತ್ತು. ಮರುಳ ಸಿದ್ದೇಶ್ವರ ದೇವಸ್ಥಾನದಿಂದ ಜಾಥಾ ಆರಂಭಿಸಿದ ಭಕ್ತರು ಎಂ.ಜಿ ರಸ್ತೆಯಲ್ಲಿ ಮೆರವಣಿಗೆ ನಡೆಸಿದರು. ಶಿಡ್ಲಘಟ್ಟ ವೃತ್ತದಲ್ಲಿ ಜನಾಗ್ರಹ ಸಭೆ ನಡೆಯಿತು.
ವಿವಿಧ ಸಂಘಟನೆಗಳ ಮುಖಂಡರು, ರಾಜಕೀಯ ಪಕ್ಷಗಳ ಮುಖಂಡರು, ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಕಾರ್ಯಕರ್ತರು, ಜೈನ ಸಮುದಾಯದ ಮುಖಂಡರು ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಯಲುವಹಳ್ಳಿ ಎನ್. ರಮೇಶ್ ಮಾತನಾಡಿ, ಸಮಾಜದ ಸ್ವಾಸ್ಥ್ಯ ಕದಡುತ್ತಿರುವ ಮತ್ತು ತಮ್ಮ ಸ್ವಾರ್ಥಕ್ಕಾಗಿ ನಮ್ಮೆಲ್ಲರ ಪವಿತ್ರ ಕ್ಷೇತ್ರದ ಬಗ್ಗೆ ಮತ್ತು ವೀರೇಂದ್ರ ಹೆಗ್ಗಡೆ ಅವರ ಬಗ್ಗೆ ಕೆಲವರು ನಿರಂತರವಾಗಿ ತೇಜೋವಧೆ ಮಾಡುತ್ತಿದ್ದಾರೆ. ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್ ಮತ್ತಿತರರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಮುಖಂಡ ಕೆ.ಎಂ. ಮುನೇಗೌಡ ಮಾತನಾಡಿ, ಕ್ಷೇತ್ರದ ವಿರುದ್ಧ ಸಂಚು ರೂಪಿಸುತ್ತಿರುವ ಮತ್ತು ಕ್ಷೇತ್ರದ ಪಾವಿತ್ರ್ಯಕ್ಕೆ ಕಳಂಕ ತರುತ್ತಿರುವವರನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ. ಕಿಡಿಗೇಡಿಗಳು ಇದೇ ರೀತಿ ತಮ್ಮ ಚಾಳಿ ಮುಂದುವರಿಸಿದಲ್ಲಿ ನಾಡಿನಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಬಿಜೆಪಿ ಮುಖಂಡ ಕೆ.ವಿ ನಾಗರಾಜ್ ಮಾತನಾಡಿ, ಧರ್ಮಸ್ಥಳ ನಮ್ಮೆಲ್ಲರ ಪವಿತ್ರ ಕ್ಷೇತ್ರ. ಈ ಕ್ಷೇತ್ರಕ್ಕೆ ಕಳಂಕ ತರುವವರ ವಿರುದ್ಧ ಜಾತ್ಯತೀತ, ಪಕ್ಷಾತೀತವಾಗಿ ನಾವೆಲ್ಲರೂ ಸೇರಿ ಹೋರಾಡೋಣ ಎಂದು ಹೇಳಿದರು.
ಉದ್ಯಮಿ ಅಂಗರೇಖನಹಳ್ಳಿ ರವಿಕುಮಾರ್, ಚಿಂತಾಮಣಿಯ ಕುಪೇಂದ್ರಪ್ಪ, ಗೌರಿಬಿದನೂರಿನ ಮಾರ್ಕೆಟ್ ಮೋಹನ್, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ರಾಮೇಗೌಡ ಮತ್ತಿತರರು ಮಾತನಾಡಿದರು.
ಎಸ್‌ಆರ್‌ಎಸ್ ದೇವರಾಜ್, ರವಿಕುಮಾರ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.