
ಗುಡಿಬಂಡೆ: ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ಪೊಲೀಸ್ ಸಿಬ್ಬಂದಿ ವಾಸಕ್ಕಾಗಿ ಪಟ್ಟಣದ ಪೊಲೀಸ್ ಠಾಣೆ ಪಕ್ಕ ಸುವ್ಯವಸ್ಥಿತವಾದ ವಸತಿ ಗೃಹಗಳನ್ನು ನಿರ್ಮಾಣ ಮಾಡಲಾಗಿತ್ತು. ಆದರೆ, ಆ ವಸತಿ ಗೃಹಗಳು ಇದೀಗ ಪಾಳುಬಿದ್ದ ಸ್ಥಿತಿಗೆ ತಲುಪಿದ್ದು, ವಸತಿ ಗೃಹಗಳ ಸುತ್ತಮುತ್ತಲೂ ದಟ್ಟವಾದ ಗಿಡಗಂಟಿಗಳು ಬೆಳೆದಿವೆ.
ದಟ್ಟವಾದ ಗಿಡಗಂಟಿಗಳಲ್ಲಿ ವಿಷಜಂತುಗಳು ಇರುವ ಭೀತಿಯ ಹಿನ್ನೆಲೆಯಲ್ಲಿ ಕೆಲವು ವಸತಿ ಗೃಹಗಳಲ್ಲಿರುವ ಪೊಲೀಸರ ಕುಟುಂಬಸ್ಥರು ವಾಸ ಮಾಡಲು ಹೆದರಿಕೊಳ್ಳುತ್ತಿದ್ದಾರೆ.
ಪಟ್ಟಣದ ಪೊಲೀಸ್ ಠಾಣೆಯಲ್ಲಿ 28 ಪುರುಷ ಪೊಲೀಸ್ ಕಾನ್‌ಸ್ಟೆಬಲ್‌ಗಳು ಮತ್ತು 7 ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್‌ಗಳು, ಇಬ್ಬರು ಆರಕ್ಷಕ ಉಪ ನಿರೀಕ್ಷಿಕರು ಹಾಗೂ ಒಬ್ಬ ಆರಕ್ಷಕ ವೃತ್ತ ನಿರೀಕ್ಷಕರು ಸೇರಿ 38 ಪೊಲೀಸ್ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಪೈಕಿ ಕೇವಲ ಐದು ಕುಟುಂಬಗಳು ಮಾತ್ರವೇ ವಸತಿ ಗೃಹಗಳಲ್ಲಿ ವಾಸ ಮಾಡುತ್ತಿದ್ದಾರೆ. 10ಕ್ಕೂ ವಸತಿ ಗೃಹಗಳು ಪಾಳುಬಿದ್ದಿವೆ. ಐದು ವಸತಿ ಗೃಹಗಳಲ್ಲಿ ಪೊಲೀಸ್ ಕಾನ್‌ಸ್ಟೆಬಲ್‌ಗಳ ಕುಟುಂಬಸ್ಥರು ವಾಸ ಮಾಡುತ್ತಿದ್ದರೂ, ಗಿಡಗಂಟಿಗಳಿಂದ ಹಾವು ಸೇರಿದಂತೆ ಇನ್ನಿತರ ವಿಷ ಜಂತುಗಳು ಮನೆಯೊಳಕ್ಕೆ ಬರುವ ಸಾಧ್ಯತೆ ಎಂಬ ಕಾರಣಕ್ಕೆ ಭಯದಲ್ಲೇ ಕಾಲ ಕಳೆಯುವಂತಾಗಿದೆ.
ವಸತಿ ಗೃಹಗಳ ಆವರಿಸಿದ ಪೊದೆ: ಪೊಲೀಸ್ ವಸತಿ ಗೃಹಗಳ ಸುತ್ತ ಕಾಂಪೌಂಡ್ ನಿರ್ಮಿಸಲಾಗಿದೆ. ಪಾಳು ಬಿದ್ದಿರುವ ಎಲ್ಲ ವಸತಿ ಗೃಹಗಳಲ್ಲಿ ಮುಳ್ಳಿನ ಪೊದೆಗಳು ಬೆಳೆದುನಿಂತಿವೆ. ಇದರಿಂದಾಗಿ ವಸತಿ ಗೃಹಗಳನ್ನು ಮುಳ್ಳಿನ ಪೊದೆಗಳು ಮತ್ತು ಗಿಡಗಂಟಿಗಳೇ ಆವರಿಸಿದಂತಾಗಿದ್ದು, ವಸತಿ ಗೃಹಗಳನ್ನು ಕಂಡರೆ ಭಯಪಡುವಂತಾಗಿದೆ. ಇನ್ನು ಪೊಲೀಸ್ ವಸತಿ ಗೃಹಗಳ ಆವರಣದಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ. ಎಲ್ಲಂದರಲ್ಲಿ ಕಸ, ಬಟ್ಟೆಬರಿಗಳನ್ನು ಬಿಸಾಡಲಾಗಿದೆ. ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ, ದುರ್ಗಂಧ ವ್ಯಾಪಿಸಿದೆ. ಬೀದಿದೀಪಗಳು ಇಲ್ಲದಿರುವುದು ಸೇರಿದಂತೆ ಅನೇಕ ಸಮಸ್ಯೆಗಳಿವೆ ಎಂದು ಇಲ್ಲಿ ವಾಸಿಸುತ್ತಿರುವ ಪೊಲೀಸ್ ಕುಟುಂಬಸ್ಥರು ದೂರುತ್ತಾರೆ.
ವಸತಿ ಗೃಹಗಳ ಅಭಿವೃದ್ಧಿ ಸೇರಿದಂತೆ ಇನ್ನಿತರ ಕಾಮಗಾರಿಗಳಿಗಾಗಿ ಪೊಲೀಸ್ ಇಲಾಖೆಯಿಂದಲೇ ಅನುದಾನ ಸಿಗುತ್ತದೆ. ಆದಾಗ್ಯೂ, ವಸತಿ ಗೃಹಗಳು ಅವ್ಯವಸ್ಥೆಯ ಆಗರವಾಗಿವೆ ಎನ್ನುತ್ತಾರೆ ಪೊಲೀಸ್ ಸಿಬ್ಬಂದಿ.
ಈ ಕುರಿತು ಪ್ರತಿಕ್ರಿಯಿಸಿದ ಹೆಸರು ಹೇಳಲು ಇಚ್ಚಿಸದ ಸಿಬ್ಬಂದಿ, ‘ವಸತಿ ಗೃಹಗಳ ಅಭಿವೃದ್ಧಿಗಾಗಿ ಇಲಾಖೆಯಿಂದ ಅನುದಾನ ಬಿಡುಗಡೆಯಾಗುತ್ತದೆ. ಆದರೆ, ಬಂದ ಅನುದಾನ ಎಲ್ಲಿ ಬಳಕೆಯಾಗುತ್ತಿದೆ ಎಂಬ ಬಗ್ಗೆ ಯಾರಿಗೂ ಗೊತ್ತಿಲ್ಲ. ವಸತಿ ಗೃಹಗಳಲ್ಲಿ ವಾಸ ಮಾಡಲು ಭಯವಾಗುತ್ತಿದೆ. ವಸತಿ ಗೃಹಗಳಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದ್ದು, ದುರ್ನಾತ ಬೀರುತ್ತಿದೆ. ಇನ್ನು ಗಿಡಗಂಟಿಗಳಲ್ಲಿ ಹಾವು ಸೇರಿದಂತೆ ಇನ್ನಿತರ ವಿಷ ಜಂತುಗಳು ಸೇರಿಕೊಂಡಿರುವ ಸಾಧ್ಯತೆ ಇದೆ. ಹೀಗಾಗಿ, ಮಕ್ಕಳನ್ನು ಆಚೆ ಬಿಡಲು ಭಯವಾಗುತ್ತದೆ. ಉನ್ನತ ಅಧಿಕಾರಿಗಳು ಎಚ್ಚೆತ್ತುಕೊಂಡು ವಸತಿ ಗೃಹಗಳ ಆವರಣ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು. ಹೊಸದಾಗಿ ವಸತಿ ಗೃಹಗಳನ್ನು ನಿರ್ಮಿಸಿಕೊಡಬೇಕು’ ಎಂದರು.
ಪೊಲೀಸ್ ವಸತಿ ಗೃಹಗಳಲ್ಲಿ ಹೆಚ್ಚು ಮುಳ್ಳಿನ ಪೊದೆಗಳಿವೆ. ಇದರಲ್ಲಿ ಕ್ರೂರ ಪ್ರಾಣಿಗಳು ಸೇರಿಕೊಂಡರೂ ಗೊತ್ತಾಗುವುದಿಲ್ಲ. ಕಾಡಿನಂತೆ ಬೆಳೆದು ನಿಂತಿದೆ. ಇದರಿಂದ ಸಾರ್ವಜನಿಕರಿಗೂ ಸಹ ತೊಂದರೆ ಆಗುತ್ತಿದೆ. ಮುಳ್ಳಿನ ಪೊದೆಗಳ ತೆರವಿಗೆ ಕ್ರಮ ಕೈಗೊಳ್ಳಬೇಕಿದೆ.ಮುನಿಕೃಷ್ಣಪ್ಪ ಸರ್ಕಲ್ ಇನ್‌ಸ್ಪೆಕ್ಟರ್ ಗುಡಿಬಂಡೆ
ವಸತಿ ಗೃಹಗಳ ಸುತ್ತಮುತ್ತ ದಟ್ಟವಾಗಿ ಬೆಳೆದುನಿಂತ ಪೊದೆಗಳಲ್ಲಿ ಚಿರತೆ ಮರಿಯೊಂದು ಕಾಣಿಸಿಕೊಂಡಿತ್ತು. ಈ ಸಂದರ್ಭದಲ್ಲಿ ವಸತಿ ಗೃಹದಲ್ಲಿರುವ ಪೊಲೀಸ್ ಸಿಬ್ಬಂದಿ ಆತಂಕಕ್ಕೀಡಾಗಿದ್ದರು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಬಂದು ಚಿರತೆ ಮರಿಯನ್ನು ಹಿಡಿದು ಬೆಂಗಳೂರಿನಲ್ಲಿರುವ ಬನ್ನೇರುಘಟ್ಟ ಉದ್ಯಾನಕ್ಕೆ ಬಿಟ್ಟಿದ್ದರು. ಇಲ್ಲಿನ ದಟ್ಟವಾಗಿ ಬೆಳೆದ ಗಿಡ ಮರಗಳ ಪೊದೆಗಳಲ್ಲಿ ಚಿರತೆ ಮರಿಗಳು ಮತ್ತು ಚಿರತೆ ಇರಬಹುದು ಎಂಬ ಆತಂಕವೂ ಮನೆ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.