ADVERTISEMENT

ಚಿಕ್ಕಬಳ್ಳಾಪುರ: ಅಂಗವಿಕಲರ ವಾಹನಕ್ಕಿಲ್ಲ ವಿತರಣೆ ಭಾಗ್ಯ!

ಸರ್‌.ಎಂ.ವಿ ಜಿಲ್ಲಾ ಕ್ರೀಡಾಂಗಣದಲ್ಲಿ ಒಂದು ತಿಂಗಳಿನಿಂದ ವಾಹನಗಳ ನಿಲುಗಡೆ

ಡಿ.ಎಂ.ಕುರ್ಕೆ ಪ್ರಶಾಂತ
Published 5 ಡಿಸೆಂಬರ್ 2025, 7:55 IST
Last Updated 5 ಡಿಸೆಂಬರ್ 2025, 7:55 IST
ಚಿಕ್ಕಬಳ್ಳಾಪುರ ಜಿಲ್ಲಾ ಕ್ರೀಡಾಂಗಣದ ಒಳಾಂಗಣ ಕ್ರೀಡಾಂಗಣದ ಬಳಿ ನಿಲುಗಡೆ ಆಗಿರುವ ವಾಹನಗಳು
ಚಿಕ್ಕಬಳ್ಳಾಪುರ ಜಿಲ್ಲಾ ಕ್ರೀಡಾಂಗಣದ ಒಳಾಂಗಣ ಕ್ರೀಡಾಂಗಣದ ಬಳಿ ನಿಲುಗಡೆ ಆಗಿರುವ ವಾಹನಗಳು   

ಚಿಕ್ಕಬಳ್ಳಾಪುರ: ‘ಈ ವಾಹನಗಳು ಇಲ್ಲಿ ಏಕೆ ಇವೆ’, ‘ಒಂದು ತಿಂಗಳ ಮೇಲಾಯಿತು. ಈ ಗಾಡಿಗಳನ್ನು ನಿಲ್ಲಿಸಿ ಅದು ಯಾವಾಗ ಕೊಡುವರೊ’– ನಗರದ  ಸರ್‌.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದ ಒಳಾಂಗಣ ಕ್ರೀಡಾಂಗಣದ ಬಳಿ ನಿಲ್ಲಿಸಿರುವ ಅಂಗವಿಕಲ ವಾಹನಗಳನ್ನು ನೋಡಿದವರು ಒಂದಲ್ಲಾ ಒಂದು ರೀತಿಯ ಉದ್ಗಾರ ತೆಗೆಯುವರು. 

ಒಂದು ತಿಂಗಳಿನಿಂದಲೂ ಒಳಾಂಗಣ ಕ್ರೀಡಾಂಗಣ ಬಳಿ ಅಂಗವಿಕಲರಿಗೆ ವಿತರಿಸಲು ವಾಹನಗಳನ್ನು ನಿಲ್ಲಿಸಲಾಗಿದೆ. ಈಗಾಗಲೇ ವಾಹನಗಳ ವಿತರಣೆಗೆ ಅರ್ಹ ಫಲಾನುಭವಿಗಳನ್ನೂ ಗುರುತಿಸಲಾಗಿದೆ. ಆದರೆ ವಾಹನ ಬಂದು ತಿಂಗಳಾದರೂ ವಿತರಣೆ ಆಗಿಲ್ಲ!

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಅವರ 2023–24 ಮತ್ತು 2024–25ನೇ ಸಾಲಿನ ಶಾಸಕರ ‍ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಈ ವಾಹನಗಳನ್ನು ವಿತರಿಸಲಾಗುತ್ತಿದೆ. ಎರಡೂ ಸಾಲಿನ ಶೇ 10ರಷ್ಟು ಅನುದಾನದಲ್ಲಿ ಒಟ್ಟು 40 ವಾಹನಗಳನ್ನು ಖರೀದಿಸಲಾಗಿದೆ.

ADVERTISEMENT

ವಾಹನಗಳನ್ನು ಅರ್ಹ ಅಂಗವಿಕಲ ಫಲಾನುಭವಿಗಳಿಗೆ ವಿತರಿಸಬೇಕಾಗಿದೆ. ಶಾಸಕರ ಕಚೇರಿಯಿಂದ ಈಗಾಗಲೇ ಫಲಾನುಭವಿಗಳ ಪಟ್ಟಿ ಸಹ ತಯಾರಿಸಲಾಗಿದೆ. ಫಲಾನುಭವಿಗಳಿಗೆ ಕರೆ ಮಾಡಲಾಗಿದೆ.

‘ವಾಹನಗಳ ನೋಂದಣಿ ಸಂಖ್ಯೆ ಬರಬೇಕು. ವಿಮೆಯೂ ಆಗಿಲ್ಲ. ಶೀಘ್ರದಲ್ಲಿಯೇ ಈ ಪ್ರಕ್ರಿಯೆಗಳು ಪೂರ್ಣವಾಗುತ್ತವೆ. ಶಾಸಕರ ದಿನಾಂಕ ಪಡೆದು ಫಲಾನುಭವಿಗಳಿಗೆ ವಾಹನಗಳನ್ನು ವಿತರಿಸುತ್ತೇವೆ’ ಎಂದು ಅಂಗವಿಕಲ ಕಲ್ಯಾಣ ಇಲಾಖೆ ಅಧಿಕಾರಿಗಳು ವಾಹನಗಳು ವಿತರಣೆ ಆಗದಿರುವ ಬಗ್ಗೆ ಕಾರಣಗಳನ್ನು ನೀಡುವರು. 

‘ವಾಹನಗಳಲ್ಲಿ ಏನಾದರೂ ಸಮಸ್ಯೆಗಳು ಇದ್ದರೆ ಸರಿಪಡಿಸಿಕೊಡುತ್ತೇವೆ. ಬ್ಯಾಟರಿ ಮತ್ತು ವಾಹನಕ್ಕೆ ಅಳವಡಿಸುವ ಹೆಚ್ಚುವರಿ ಚಕ್ರವೂ ನಮ್ಮ ಬಳಿಯೇ ಇದೆ’ ಎನ್ನುತ್ತಾರೆ.

ದೂಳಿಡಿಯುತ್ತಿರುವ ವಾಹನಗಳು: ಒಳಾಂಗಣ ಕ್ರೀಡಾಂಗಣ ಮುಂಭಾಗ ನಿಲುಗಡೆ ಮಾಡಿರುವ ವಾಹನಗಳು ದೂಳಿಡಿಯುತ್ತಿವೆ. ವಾಹನಗಳಿಗೆ ಹೊದಿಸಿರುವ ಹೊದಿಕೆಗಳು ಒಂದೊಂದಾಗಿ ಹರಿದು ಹೋಗುತ್ತಿವೆ. ಕೆಲವು ವಾಹನಗಳಿಗೆ ಮಣ್ಣು ಮೆತ್ತಿದೆ. ಸೂಕ್ತ ಭದ್ರತೆಯೂ ಇಲ್ಲ. 

ಕ್ರೀಡಾಂಗಣಕ್ಕೆ ಬೆಳಗಿನ ವಾಯುವಿಹಾರಕ್ಕೆ ಬರುವ ಒಬ್ಬರಾದರೂ ಈ ವಾಹನಗಳ ಬಗ್ಗೆ ನಿತ್ಯವೂ ವಿಚಾರಿಸುತ್ತಾರೆ. ‘ತಕ್ಕು ಹಿಡಿದು ಹಾಳಾಗುವಷ್ಟರಲ್ಲಿ ವಿತರಣೆ ಆಗುತ್ತವೆಯೇ’ ಎಂದು ವ್ಯಂಗ್ಯದಿಂದ ನುಡಿಯುತ್ತಾರೆ.

ನಗರದಲ್ಲಿ ಜಿಲ್ಲಾಡಳಿತದಿಂದ ಬುಧವಾರ ವಿಶ್ವ ಅಂಗವಿಕಲರ ದಿನಾಚರಣೆಯ ಕಾರ್ಯಕ್ರಮವೂ ನಡೆಯಿತು. ಈ ಕಾರ್ಯಕ್ರಮದಲ್ಲಿ ವಾಹನಗಳ ವಿತರಣೆ ಆಗುತ್ತವೆ ಎಂದುಕೊಂಡಿದ್ದವರಿಗೆ ಭ್ರಮ ನಿರಸನ. ಫಲಾನುಭವಿಗಳೂ ಇಂದು ವಿತರಣೆ ಆಗುತ್ತದೆ ನಾಳೆ ವಿತರಣೆ ಆಗುತ್ತದೆ ಎಂದು ಕಾಯುತ್ತಲೇ ಇದ್ದಾರೆ.

ಎರಡು ವರ್ಷಗಳ 40 ವಾಹನಗಳು ವಾಹನದತ್ತ ಆಸೆಗಣ್ಣಿನಿಂದ ನೋಡುತ್ತಿರುವ ಫಲಾನುಭವಿಗಳು ವಿಶ್ವ ಅಂಗವಿಕಲರ ದಿನಾಚರಣೆಯಲ್ಲಿಯೂ ವಿತರಣೆ ಇಲ್ಲ

ಒಂದೇ ದಿನ 200 ವಾಹನ ವಿತರಿಸಿರುವ ಸಚಿವ ಮೇ 23ರಂದು ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ ಸಚಿವ ಡಾ.ಎಂ.ಸಿ.ಸುಧಾಕರ್ 200 ತ್ರಿಚಕ್ರ ವಾಹನಗಳನ್ನು ಅಂಗವಿಕಲರಿಗೆ ವಿತರಿಸುವ ಮೂಲಕ ಮಾದರಿ ಎನಿಸಿದ್ದಾರೆ. ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 200 ತ್ರಿಚಕ್ರ ವಾಹನಗಳನ್ನು ಒಂದೇ ಬಾರಿ ವಿತರಿಸಿದರು. ಇದು ಜಿಲ್ಲೆಯ ಮಟ್ಟಿಗೆ ಮಹತ್ವದ ಕೆಲಸ. ‘ರಾಜ್ಯದಲ್ಲೇ ಮೊಟ್ಟ ಮೊದಲ ಬಾರಿಗೆ ಶಾಸಕರ ಸಂಪೂರ್ಣ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಅಂಗವಿಕಲರಿಗೆ ತ್ರಿಚಕ್ರ ವಾಹನಗಳನ್ನು ವಿತರಿಸಲಾಗುತ್ತಿದೆ. ₹ 2 ಕೋಟಿಯಷ್ಟು ದೊಡ್ಡ ಮೊತ್ತದ ಸೌಲಭ್ಯ ಒಂದೇ ಬಾರಿಗೆ ಫಲಾನುಭವಿಗಳಿಗೆ ತಾಲ್ಲೂಕಿನಲ್ಲಿ ದೊರೆಯುತ್ತಿರುವುದು ದಾಖಲೆಯಾಗಿದೆ. ಅಂಗವಿಕಲರ ಬಗ್ಗೆ ಕೇವಲ ಬಾಯಿ ಮಾತಿನ ಕಾಳಜಿ ಇದ್ದರೆ ಸಾಲದು. ಬದಲಿಗೆ ಮಾತು ಕೃತಿ ಒಂದೇ ಆಗಿರಬೇಕು ಎಂದು ಸಚಿವರು ಕಾರ್ಯಕ್ರಮದಲ್ಲಿ ನುಡಿದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.