ADVERTISEMENT

ಫೆಬ್ರುವರಿ ಅಂತ್ಯಕ್ಕೆ ಜಿಲ್ಲಾ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2020, 12:20 IST
Last Updated 3 ಫೆಬ್ರುವರಿ 2020, 12:20 IST

ಚಿಕ್ಕಬಳ್ಳಾಪುರ: ‘ಚಿಂತಾಮಣಿಯಲ್ಲಿ ಫೆಬ್ರುವರಿ ಅಂತ್ಯಕ್ಕೆ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ನಿರ್ಧರಿಸಲಾಗಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಜಿಲ್ಲಾ ಘಟಕದ ಅಧ್ಯಕ್ಷ ಕೈವಾರ ಶ್ರೀನಿವಾಸ್‌ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚಿಂತಾಮಣಿಯಲ್ಲಿ ಈ ಹಿಂದೆಯೇ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ನಿರ್ಧರಿಸಿ, ಸಮ್ಮೇಳನದ ಅಧ್ಯಕ್ಷರನ್ನು ಸಹ ಆಯ್ಕೆ ಮಾಡಲಾಗಿತ್ತು. ಕಾರಣಾಂತರಗಳಿಂದ ಸಮ್ಮೇಳನ ನಡೆಸಲು ಸಾಧ್ಯವಾಗಲಿಲ್ಲ’ ಎಂದು ತಿಳಿಸಿದರು.

‘ಕಲಬುರ್ಗಿಯಲ್ಲಿ ಫೆ.5 ರಿಂದ 7ರ ವರೆಗೆ ನಡೆಯುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಜಿಲ್ಲೆಯಲ್ಲಿ 384 ಮಂದಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ಸಾಹಿತ್ಯಾಸಕ್ತರು ಕಲಬುರ್ಗಿ ಸಮ್ಮೇಳನದಲ್ಲಿ ಭಾಗವಹಿಸಬೇಕು’ ಎಂದು ಮನವಿ ಮಾಡಿದರು.

ADVERTISEMENT

‘ಜಿಲ್ಲೆಯಲ್ಲಿ ಸುಮಾರು 35 ವರ್ಷಗಳ ಹಿಂದೆ ಕೈವಾರದ ಯೋಗಿ ನಾರೇಯಣ ಮಠದಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆದಿತ್ತು. ಅಲ್ಲಿಂದ ಈವರೆಗೆ ಜಿಲ್ಲೆಗೆ ಸಮ್ಮೇಳನದ ಆತಿಥ್ಯ ದೊರೆತಿಲ್ಲ. ಆದ್ದರಿಂದ, ಕಲಬುರ್ಗಿ ಸಮ್ಮೇಳನದಲ್ಲಿ ನಡೆಯುವ ಕಸಾಪ ಕೇಂದ್ರ ಕಾರ್ಯಕಾರಿ ಸಮಿತಿ ಸಭೆಯಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯವನ್ನು ಚಿಕ್ಕಬಳ್ಳಾಪುರ ಜಿಲ್ಲೆಗೆ ನೀಡುವಂತೆ ಪ್ರಸ್ತಾವ ಸಲ್ಲಿಸಲಾಗುತ್ತದೆ’ ಎಂದು ಹೇಳಿದರು.

ಕಸಾಪ ಜಿಲ್ಲಾ ಘಟಕದ ಕಾರ್ಯದರ್ಶಿ ಪ್ರಕಾಶ್‌, ತಾಲ್ಲೂಕು ಘಟಕಗಳ ಅಧ್ಯಕ್ಷರಾದ ಪಾಪಣ್ಣ, ತ್ಯಾಗರಾಜ್, ರವೀಂದ್ರನಾಥ್, ಅನುರಾಧಾ ಆನಂದ್, ಉಪಾ ಶ್ರೀನಿವಾಸ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.