ADVERTISEMENT

50 ಟನ್‌ ದ್ರಾಕ್ಷಿ ಖರೀದಿಸಿದ ಸಂಸದ ಡಿ.ಕೆ.ಸುರೇಶ್‌: ಜನರಿಗೆ ಉಚಿತವಾಗಿ ವಿತರಣೆ

ಕನಕಪುರ ಮತ್ತು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಡ ಜನರಿಗೆ ಉಚಿತವಾಗಿ ವಿತರಿಸಲು ರವಾನೆ

​ಪ್ರಜಾವಾಣಿ ವಾರ್ತೆ
Published 1 ಮೇ 2020, 13:32 IST
Last Updated 1 ಮೇ 2020, 13:32 IST
ಚಿಕ್ಕಬಳ್ಳಾಪುರ ತಾಲ್ಲೂಕಿನ ಮಂಡಿಕಲ್ಲು ಹೋಬಳಿ ಹರಿಸ್ಥಳದ ರೈತ ಚೌಡರೆಡ್ಡಿ ಅವರ ತೋಟದಲ್ಲಿ ಸಂಸದ ಡಿ.ಕೆ.ಸುರೇಶ್‌ ಅವರು ದ್ರಾಕ್ಷಿ ಖರೀದಿಸಿದರು.
ಚಿಕ್ಕಬಳ್ಳಾಪುರ ತಾಲ್ಲೂಕಿನ ಮಂಡಿಕಲ್ಲು ಹೋಬಳಿ ಹರಿಸ್ಥಳದ ರೈತ ಚೌಡರೆಡ್ಡಿ ಅವರ ತೋಟದಲ್ಲಿ ಸಂಸದ ಡಿ.ಕೆ.ಸುರೇಶ್‌ ಅವರು ದ್ರಾಕ್ಷಿ ಖರೀದಿಸಿದರು.   

ಚಿಕ್ಕಬಳ್ಳಾಪುರ: ಕೊರೊನಾ, ಲಾಕ್‌ಡೌನ್‌ ಕಾರಣಕ್ಕೆ ಸಂಕಷ್ಟದಲ್ಲಿರುವ ರೈತರಿಗೆ ಚೈತನ್ಯ ತುಂಬುವ ದಿಸೆಯಲ್ಲಿ ಸಂಸದ ಡಿ.ಕೆ.ಸುರೇಶ್ ಅವರು ಶುಕ್ರವಾರ ತಾಲ್ಲೂಕಿನ ರೈತರೊಬ್ಬರ ಮೂರು ಎಕರೆ ತೋಟದಲ್ಲಿದ್ದ ದ್ರಾಕ್ಷಿ ಫಸಲು ಖರೀದಿಸಿದರು.

ಮಂಡಿಕಲ್ಲು ಹೋಬಳಿ ಹರಿಸ್ಥಳದ ರೈತ ಚೌಡರೆಡ್ಡಿ ಅವರ ತೋಟಕ್ಕೆ ಭೇಟಿ ನೀಡಿದ ಡಿ.ಕೆ.ಸುರೇಶ್‌ ಅವರು, ಒಂದು ಕೆ.ಜಿ ದ್ರಾಕ್ಷಿಗೆ ₹18 ಬೆಲೆಯಲ್ಲಿ ಸುಮಾರು 50 ಟನ್ ದ್ರಾಕ್ಷಿ ಖರೀದಿಸಿದರು.

ಕಟಾವು ಮಾಡಿದ ದ್ರಾಕ್ಷಿಯನ್ನು ಆರು ಲಾರಿಗಳ ಮೂಲಕ ಕನಕಪುರ ಮತ್ತು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಡ ಜನರಿಗೆ ಉಚಿತವಾಗಿ ವಿತರಿಸಲು ಕಳುಹಿಸಿಕೊಟ್ಟರು.

ADVERTISEMENT

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಶ್‌, ’ಇಂತಹ ಸಂಕಷ್ಟದ ಸಮಯದಲ್ಲಿ ಪ್ರತಿಯೊಬ್ಬರಿಗೂ ಒಂದಿಲ್ಲೊಂದು ರೀತಿಯಲ್ಲಿ ಪರಿಹಾರ ದೊರೆಯುತ್ತದೆ. ಆದರೆ ರೈತರಿಗೆ ಸಿಗುವುದಿಲ್ಲ. ಹೀಗಾಗಿ, ರೈತರಿಗೆ ಸಹಾಯ ಹಸ್ತ ಚಾಚುತ್ತಿರುವೆ‘ ಎಂದರು.

’ರೈತರು ವರ್ಷದಲ್ಲಿ ಒಂದು ಉತ್ತಮ ಸೀಸನ್‌ಗಾಗಿ ಕಾಯ್ದುಕೊಂಡಿರುತ್ತಾರೆ. ಏಕಾಏಕಿ ಕಾಣಿಸಿಕೊಂಡ ಕೊರೊನಾ ಸೋಂಕಿನ ಭೀತಿ ಅನ್ನದಾತರನ್ನು ಕಂಗೇಡಿಸಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ, ರಾಜ್ಯ ಸರ್ಕಾರ ಸೂಕ್ತ ಮಾರ್ಗದರ್ಶನ ಕೊಡಬೇಕಿತ್ತು. ಇಲ್ಲವೇ ಸಹಾಯ ಹಸ್ತ ಚಾಚುವ ಕೆಲಸ ಮಾಡಬೇಕಿತ್ತು‘ ಎಂದು ಹೇಳಿದರು.

’ಕೋವಿಡ್‌ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಪರಿಸ್ಥಿತಿ ನಿರ್ವಹಣೆಯಲ್ಲಿ ಅಧಿಕಾರಿಗಳು, ಸಚಿವರಲ್ಲೇ ಗೊಂದಲವಿದೆ. ಈವರೆಗೆ ಜನರಿಗೆ ಅಕ್ಕಿ ಕೊಟ್ಟಿದ್ದು ಬಿಟ್ಟು ಬೇರೇನೂ ಸಹಾಯ ಮಾಡಿಲ್ಲ‘ ಎಂದು ಆರೋಪಿಸಿದರು.

’ರಾಜ್ಯ ಸರ್ಕಾರಕ್ಕೆ ಜನರ ಆರೋಗ್ಯಕ್ಕಿಂತಲೂ ತುರ್ತಾಗಿ ಖಜಾನೆಗೆ ದುಡ್ಡು ಬರುವುದು ಮುಖ್ಯವಾಗಿದೆ. ಹೀಗಾಗಿ ಮದ್ಯ ಮಾರಾಟಕ್ಕೆ ಅವಕಾಶ ನೀಡುವಂತೆ ಎರಡು ಬಾರಿ ಪ್ರಧಾನಮಂತ್ರಿ ಅವರಿಗೆ ಮನವಿ ಸಲ್ಲಿಸಿ ಛೀಮಾರಿ ಹಾಕಿಸಿಕೊಂಡಿದೆ‘ ಎಂದು ಹೇಳಿದರು.

’ಜನರಿಗೆ ಸರ್ಕಾರ ಉಚಿತವಾಗಿ ಮಾಸ್ಕ್‌, ಸ್ಯಾನಿಟೈಸರ್‌ ವಿತರಿಸಿಲ್ಲ. ಬದಲು ಮಾಸ್ಕ್‌ ಇಲ್ಲದೆ ಹೊರ ಬಂದರೆ ದಂಡ ಹಾಕುವುದಾಗಿ ಅಧಿಕಾರಿಗಳು ಬೆದರಿಸುತ್ತಾರೆ. ದಂಡ ಕಟ್ಟಲು ಜನರು ಎಲ್ಲಿಂದ ಹಣ ತರಬೇಕು‘ ಎಂದು ಪ್ರಶ್ನಿಸಿದರು.

’ಈವರೆಗೆ ಸರ್ಕಾರ ರೈತರು, ಜನಸಾಮಾನ್ಯರ ಹಿತ ಕಾಯುವ ಕೆಲಸ ಮಾಡಿಲ್ಲ. ಲಾಕ್‌ಡೌನ್‌ ಸಂದರ್ಭದಲ್ಲಿ ರೈತರು ಹಾಗೂ ಕಾರ್ಮಿಕರ ಹಿತ ರಕ್ಷಿಸುವ ಉದ್ದೇಶದಿಂದ ರೈತರಿಂದ ನೇರವಾಗಿ ಹತ್ತು ಟನ್‌ ತರಕಾರಿಯನ್ನು ಖರೀದಿಸಿ ಜನತೆಗೆ ವಿತರಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ‘ ಎಂದು ತಿಳಿಸಿದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಮುಖಂಡರಾದ ನಂದಿ ಆಂಜನಪ್ಪ, ಕೆ.ವಿ.ನವೀನ್‌ ಕಿರಣ್, ಪುರದಗಡ್ಡೆ ಮುನೇಗೌಡ, ಅಡಗಲ್ ಶ್ರೀಧರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.