
ಕೊಡಿಗೇನಹಳ್ಳಿ: ತುಮಕೂರು ಜಿಲ್ಲೆ ಕಗ್ಗಲಡು ಪಕ್ಷಿಗಳ ಅದರಲ್ಲೂ ವಿಶೇಷವಾಗಿ ಬಣ್ಣದ ಕೊಕ್ಕರೆಗಳ ತಂಗುದಾಣ. ತಂಗನಹಳ್ಳಿ ಕೆರೆಯೂ ಬಹುರೂಪಿ ಪಕ್ಷಿಗಳ ತವರೂರು. ಈಗ ಈ ಪಟ್ಟಿಗೆ ದೊಡ್ಡಮಾಲೂರು
ಕೆರೆಯೂ ಸೇರಿದೆ.
ದೊಡ್ಡಮಾಲೂರು ಕೆರೆಯಲ್ಲಿ ಬೀಡು ಬಿಟ್ಟಿರುವ ವೈವಿಧ್ಯಮಯ ಪಕ್ಷಿಗಳ ಸಂಭ್ರಮವನ್ನು ಕಣ್ತುಂಬಿಕೊಳ್ಳುವುದು ಮತ್ತು ಚಿಲಿಪಿಲಿ ಕಲರವ ಕೇಳಿಸಿಕೊಳ್ಳುವುದೇ ಒಂದು ಹಬ್ಬ.
ಜಯಮಂಗಲಿ ನದಿಗೆ ಹೊಂದಿಕೊಂಡಂತಿರುವ ದೊಡ್ಡಮಾಲೂರು ಕೆರೆ ಪ್ರತಿ ಚಳಿಗಾಲ (ನವೆಂಬರ್‌ನಿಂದ ಜನವರಿವರೆಗೆ) ಹಕ್ಕಿಗಳ ಬಿಡಾರದ ಸೊಗಸಾದ ತಾಣ.
ಪ್ರತಿ ಚಳಿಗಾಲದಲ್ಲಿ ದೇಶ, ವಿದೇಶಗಳಿಂದ ಇಲ್ಲಿಗೆ ಸಡಗರದಿಂದ ಹಾರಿ ಬರುವ ಹಕ್ಕಿಗಳು ಮೂರ‍್ನಾಲ್ಕು ತಿಂಗಳು ತಂಗುತ್ತವೆ. ಸಂತಾನ ಪ್ರಕ್ರಿಯೆ ಮುಗಿಸಿ ಮರಳುತ್ತವೆ.
‘ತೊರೆಗಳೆಲ್ಲ ಬರಲಿ ಬಿಡು ಎದೆಯ ಕಡಲಿಗೆ’ ಎನ್ನುವಂತೆ ದೊಡ್ಡಮಾಲೂರು ಕೆರೆ ನೂರಾರು ಬಯಲು ಸೀಮೆಯ ಬಹುರೂಪಿ ಹಕ್ಕಿಗಳನ್ನು ತನ್ನ ಎದೆಯ ಕಡಲಿಗೆ ಬರಮಾಡಿಕೊಳ್ಳುತ್ತದೆ. ಸದಾ ಗುಂಪಿನಲ್ಲಿರುವ ಬಣ್ಣದ ಕೊಕ್ಕರೆ, ಕೆರೆಯ ನಡುವೆ ಅಲ್ಲಲ್ಲಿ ಎದ್ದಿರುವ ಮುಳ್ಳಕಂಟಿಗಳ ಮೇಲೆ ಬಂದಿಳಿಯುವ ಕೆಂಪು ಉಂಗುರದ ಬೆಳವ, ಬೂದು ಬೆಳವ, ಚುಕ್ಕೆ ಬೆಳವಗಳ ಹಾರಾಟ ನೋಡುವುದೇ ಆನಂದ.
ಕಪ್ಪು ಕೋಟು ಧರಿಸಿ ಕೊರಳಿಗೆ ಬಿಳಿಯ ಸ್ಕಾರ್ಫ್ ಧರಿಸಿ ವಕೀಲರಂತೆ ಕಾಣುವ ಸದಾ ಒಂಟಿಯಾಗಿಯೇ ಇರುವ ಬಿಳಿ ಕತ್ತಿನ ಕೊಕ್ಕರೆ, ನೀರಿನ ಮೇಲೆ ವಯ್ಯಾರದಿಂದ ನಡೆದುಹೋಗುವ ಹುಂಡು ಕೋಳಿ, ಕಳಿಂಗ, ದೊಡ್ಡ ಬೆಳ್ಳಕ್ಕಿ, ಬಾಯ್ಕಳಕ, ಬಳಿ ಸಿಪಿಲೆ, ನಸುಗೆಂಪು ಕಾಲಿನ ಬಿಳಿಯ ಮೆಟ್ಟುಗೋಲು, ನೀಲಿ ಮಿಂಚುಳ್ಳಿ, ಕಳ್ಳಿಪೀರ, ಸಣ್ಣಪುಟ್ಟ ಮೀನುಗಳಿಗಾಗಿ ಹೊಂಚು ಹಾಕುವ ನೀಲಕಂಠ, ಇವುಗಳ ಜೊತೆ ಕೆರೆ ಅಂಚಿನ ಹುಣಸೆ ಮರಗಳಲ್ಲಿ ಶಕುನ ನುಡಿಯುವ ಹಾಲಕ್ಕಿ, ಒಣ ಮರವನ್ನೇ ಮನೆಯನ್ನಾಗಿ ಮಾಡಿಕೊಂಡ ಗಿಳಿಗಳ ಹಿಂಡು... ಹೀಗೆ ನೂರಾರು ಪಕ್ಷಿಗಳು ತಮ್ಮ ವೈವಿಧ್ಯತೆಯ ನಡುವೆಯೂ ಸಾಮರಸ್ಯದಿಂದ ಬದುಕುತ್ತಿವೆ.
ಕೆಲವೇ ವರ್ಷಗಳ ಹಿಂದೆ ಕೊರಟಗೆರೆಯ ತಂಗನಹಳ್ಳಿಯಲ್ಲಿ ಇದೇ ರೀತಿಯ ಪಕ್ಷಿಗಳು ಬಂದಿಳಿಯುವ ತಂಗುದಾಣವೊಂದಿತ್ತು. ತಂಗನಹಳ್ಳಿ ಕೆರೆಗೆ ರೀವ್ ಹಕ್ಕಿಗಳು, ನೀರು ಕಾಗೆ, ಬೂದು ಬಕ, ಸಿಳ್ಳೆ ಬಾತು, ಕಪ್ಪು ತಲೆ ಕಂಚುಗಾರ ಬಕ ಮೊದಲಾದ ಅಪರೂಪದ ಬಯಲು ಸೀಮೆಯ ಹಕ್ಕಿಗಳು ಬಂದಿಳಿಯುತ್ತಿದ್ದವು. ಆದರೆ, ಈ ಕೆರೆ ಇದೀಗ ಅಡಕೆ ತೋಟಗಳಿಗೆ ಕೆರೆಯ ಗೋಡು ಹೊಡೆದುಕೊಳ್ಳುವವರ ದಾಹಕ್ಕೆ ಸಿಕ್ಕಿ ನಾಶವಾಗಿದೆ. ಹಾಗಾಗಿ ದೊಡ್ಡಮಾಲೂರು ಕೆರೆಯಲ್ಲಿ ಹಕ್ಕಿಗಳ ಜಾತ್ರೆ ನರೆದಿದೆ. ಜಿಲ್ಲೆಯ ವಿವಿಧೆಡೆಯಿಂದ ಪಕ್ಷಿ ವೀಕ್ಷಕರು, ಹವ್ಯಾಸಿ ವನ್ಯಜೀವಿ ಛಾಯಾಗ್ರಾಹಕರು ಪಕ್ಷಿಗಳ ಜಾತ್ರೆಗೆ ಸಾಕ್ಷಿಯಾಗಲು ಬರುತ್ತಿದ್ದಾರೆ. ಮಣ್ಣುಗಳ್ಳರ ಕಣ್ಣು ಈ ಕೆರೆಯ ಮೇಲೆ ಬೀಳದಿರಲಿ ಎನ್ನುತ್ತಾರೆ ಪರಿಸರ ಪ್ರೇಮಿಗಳು ಮತ್ತು ಪಕ್ಷಿ ವೀಕ್ಷಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.