
ಚಿಂತಾಮಣಿ: ನಗರದ ಬೆಂಗಳೂರು ರಸ್ತೆಯಲ್ಲಿರುವ ರಾಜೀವನಗರ ಬಡಾವಣೆಯ ಸಾರ್ವಜನಿಕ ಉದ್ಯಾನದಲ್ಲಿರುವ ಕುಡಿಯುವ ನೀರಿನ ನೆಲ ಅಂತಸ್ತಿನ ಟ್ಯಾಂಕ್ ಅವ್ಯವಸ್ಥೆಯ ಅಗರವಾಗಿದೆ. ಕೊಳವೆ ಬಾವಿಗಳಿಂದ ದೊರೆಯುವ ನೀರನ್ನು ಟ್ಯಾಂಕ್‌ಗೆ ತುಂಬಿಸಿಕೊಂಡು, ಅದರಿಂದ ಸಾರ್ವಜನಿಕರಿಗೆ ಕುಡಿಯುವ ನೀರನ್ನು ಪೂರೈಕೆ ಮಾಡಲಾಗುತ್ತಿದೆ.
ಹೊರಗಡೆಯಿಂದ ನೋಡಿದರೆ ಸುಮಾರು ವರ್ಷಗಳಿಂದ ದುರಸ್ತಿಯಾಗಿಲ್ಲ ಎಂದು ಕಂಡುಬರುತ್ತದೆ. ನಿರ್ವಹಣೆ ಕೊರತೆಯಿಂದ ಟ್ಯಾಂಕ್ ಅವ್ಯವಸ್ಥೆಯಿಂದ ಕೂಡಿದೆ. ಸಾವಿರಾರು ಮನೆಗೆ ಕುಡಿಯುವ ನೀರು ಪೂರೈಕೆ ಮಾಡುವ ನೆಲ ಅಂತಸ್ತಿನ ಟ್ಯಾಂಕ್ ಸುತ್ತಲೂ ಗಿಡಗಂಟಿಗಳಿಂದ ಕೂಡಿದ್ದು ಸ್ವಚ್ಛತೆ ಮರೀಚಿಕೆಯಾಗಿದೆ. ಟ್ಯಾಂಕ್‌ನ ಮುಚ್ಚಳವನ್ನು ಸದಾ ತೆಗೆದಿಡಲಾಗಿದೆ.
ಟ್ಯಾಂಕ್‌ನ ಸುತ್ತಮುತ್ತಲೂ ಸಂಚರಿಸುವ ಪ್ರಾಣಿ, ಹುಳ, ಹುಪ್ಪಟೆ ನೀರಿನಲ್ಲಿ ಮುಳುಗಿ ಕೊಳೆತು ನಾರುವ ಸ್ಥಿತಿ ಇರುತ್ತದೆ. ಅದೇ ನೀರನ್ನು ಸಾರ್ವಜನಿಕರಿಗೆ ಕುಡಿಯಲು ಪೂರೈಕೆ ಮಾಡಲಾಗುತ್ತಿದೆ. ಸಾರ್ವಜನಿಕರ ಆರೋಗ್ಯದ ಮೇಲೆ ತೀವ್ರ ದುಶ್ಪರಿಣಾಮ ಬೀರುತ್ತದೆ ಎಂಬುದು ಸ್ಥಳೀಯರ ಆತಂಕವಾಗಿದೆ.
ಟ್ಯಾಂಕ್‌ನ ಮತ್ತೊಂದು ಕಡೆ ರಂಧ್ರವಾಗಿದ್ದು ಸದಾ ನೀರು ಹೊರಗಡೆ ಹರಿಯುತ್ತಿರುತ್ತದೆ. ಇದರಿಂದ ಕುಡಿಯುವ ನೀರು ವ್ಯರ್ಥವಾಗುತ್ತಿದೆ. ಜತೆಗೆ ಆ ರಂಧ್ರದಿಂದಲೂ ಹುಳ, ಹುಪ್ಪಟೆಗಳು ಟ್ಯಾಂಕ್ ಒಳಗೆ ನುಗ್ಗಿ ಸತ್ತು ನೀರು ಕಲುಷಿತವಾಗುತ್ತದೆ.
ಟ್ಯಾಂಕ್‌ನಿಂದ ಪಂಪ್‌ಹೌಸ್‌ಗೆ ಸಂಪರ್ಕ ಕಲ್ಪಿಸುವ ಪೈಪ್ ಹಳೆಯದಾಗಿದ್ದು ತುಕ್ಕು ಹಿಡಿದಿದೆ. ಪೈಪ್ ಟ್ಯಾಂಕ್ ಒಳಗಡೆ ಬಿಟ್ಟಿರುವ ಸ್ಥಳದಲ್ಲೂ ರಂಧ್ರವಿದೆ. ಅಲ್ಲಿಂದಲೂ ಹುಳ ಹುಪ್ಪಟೆಗಳು ಟ್ಯಾಂಕ್‌ನಿಂದ ಒಳಗೆ ನುಗ್ಗುವ ಸಂಭವವಿರುತ್ತದೆ. ನೆಲ ಅಂತಸ್ತಿನ ಟ್ಯಾಂಕ್‌ನ ಸಣ್ಣಪುಟ್ಟ ದುರಸ್ತಿ ಮೇಲ್ನೋಟಕ್ಕೆ ಕಾಣುತ್ತಿದ್ದರೂ ನೌಕರರು ಮಾತ್ರ ಸರಿಪಡಿಸುವ ಗೋಜಿಗೆ ಹೋಗದೆ ಜಾಣ ನಿದ್ರೆಯಲ್ಲಿದ್ದಾರೆ.
ಕುಡಿಯುವ ನೀರು ಜನರ ಆರೋಗ್ಯದ ಮೇಲೆ ಗಾಢ ಪರಿಣಾಮ ಬೀರುತ್ತದೆ. ನಗರಸಭೆ ಅಧಿಕಾರಿಗಳು ಕೂಡಲೇ ಗಮನಹರಿಸಬೇಕು. ಟ್ಯಾಂಕ್ ಸುತ್ತಲೂ ಗಿಡಗಂಟಿಗಳನ್ನು ತೆಗೆದು ಸ್ವಚ್ಛತೆ ಕಾಪಾಡಬೇಕು. ಟ್ಯಾಂಕ್‌ನ ರಂಧ್ರಗಳನ್ನು ಮುಚ್ಚಿ ದುರಸ್ತಿ ಮಾಡಬೇಕು. ಮುಚ್ಚಳ ತೆಗೆದಿಡಬೇಕಾದರೆ ಯಾವುದೇ ಪ್ರಾಣಿ, ಹುಳಗಳು ಒಳಗೆ ಹೋಗದಂತೆ ಜಾಲರಿ ತಂತಿಯನ್ನಾದರೂ ಅಳವಡಿಸಬೇಕು. ತುಕ್ಕು ಹಿಡಿದಿರುವ ಪೈಪ್ ಬದಲಾಯಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಾರೆ.
ಪಾರ್ಕ್ ಚಿಕ್ಕದಾದರೂ ಉತ್ತಮವಾಗಿದೆ. ಅದರ ನಿರ್ವಹಣೆ ಶೌಚಾಲಯ ನೀರಿನ ಟ್ಯಾಂಕ್ ಸ್ವಚ್ಛಗೊಳಿಸುವುದು ಕಾಯುವುದು ಮತ್ತಿತರ ವ್ಯವಸ್ಥೆಗಳ ಮೇಲ್ವಿಚಾರಣೆ ಒಬ್ಬ ಕಾವಲುಗಾರನ ನೇಮಕ ಮಾಡುವುದು ಅಗತ್ಯ
-ಶ್ರೀನಿವಾಸ್ ಹಿರಿಯ ನಾಗರಿಕ
ಶೌಚಾಲಯ ಬಂದ್ ಸಾರ್ವಜನಿಕ ಉದ್ಯಾನಕ್ಕೆ ಬೆಳಿಗ್ಗೆ ಸಂಜೆ ಸಾರ್ವಜನಿಕರು ವಾಯುವಿಹಾರಕ್ಕೆ ಆಗಮಿಸುತ್ತಾರೆ. ಮಹಿಳೆಯರು ಮಕ್ಕಳು ಹಿರಿಯ ನಾಗರಿಕರು ಉದ್ಯಾನದಲ್ಲಿ ವಿಹಾರ ಮಾಡುತ್ತಾರೆ. ಅವರ ಅನುಕೂಲಕ್ಕಾಗಿ ₹11.5 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಶೌಚಾಲಯಕ್ಕೆ ಬೀಗ ಜಡಿಯಲಾಗಿದೆ. ವಾಯುವಿಹಾರಿಗಳ ಅನುಕೂಲಕ್ಕಾಗಿ ನಿರ್ಮಿಸಿರುವ ಶೌಚಾಲಯದ ಬೀಗ ತೆರೆದು ಬಳಕೆಗೆ ಅವಕಾಶ ಮಾಡಿಕೊಡಬೇಕು. ಹಿರಿಯ ನಾಗರಿಕರ ಜಿಮ್ ಪಾರ್ಕ್ ಆವರಣದಲ್ಲಿ ಹಿರಿಯ ನಾಗರಿಕರ ಜಿಮ್ ಸಂಕೀರ್ಣವಿದೆ. ಅದರಲ್ಲಿ ಕೇವಲ ಮೂರು ಪರಿಕರ ಮಾತ್ರ ಇದೆ. ಇನ್ನೂ ಸಾಕಷ್ಟು ಸ್ಥಳಾವಕಾಶವಿದೆ. ಇನ್ನೂ ಹೆಚ್ಚಿನ ಪರಿಕರಗಳನ್ನು ಸ್ಥಾಪಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.