ಸಾಂದರ್ಭಿಕ ಚಿತ್ರ
ಚಿಕ್ಕಬಳ್ಳಾಪುರ: ಪಡಿತರ ವಿತರಣೆ ಕೇಂದ್ರಗಳಿಂದ ಫಲಾನುಭವಿಗಳು ಪಡಿತರ ಪಡೆಯಲು ಬೆರಳಚ್ಚು ನೀಡುವುದು ಕಡ್ಡಾಯ. ಈ ಹಿಂದೆ ಪಡಿತರ ಚೀಟಿದಾರರು ಒನ್ ಟೈಮ್ ಪಾಸ್‌ವರ್ಡ್ (ಒಟಿಪಿ) ನೀಡಿ ಪಡಿತರ ಪಡೆಯುತ್ತಿದ್ದರು. ಆದರೆ, ಈಗ ಪಡಿತರ ಚೀಟಿಯಲ್ಲಿ ಹೆಸರು ಇರುವ ಕುಟುಂಬದ ಒಬ್ಬ ಸದಸ್ಯ ಬೆರಳಚ್ಚು ನೀಡಿದರೆ ಮಾತ್ರ ಪಡಿತರ ಪಡೆಯಲು ಸಾಧ್ಯವಾಗಲಿದೆ.
ಆದರೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬೆರಳಚ್ಚು ನೀಡಲು ಸಾಧ್ಯವಾಗದ ಕಾರಣ 2,690 ಫಲಾನುಭವಿಗಳು ಪಡಿತರ ಪಡೆಯಲು ಸಾಧ್ಯವಾಗಿಲ್ಲ. ವಯಸ್ಸಾದ ಕಾರಣ ಕೆಲವರಲ್ಲಿ ಬೆರಳಚ್ಚು ಸವೆದಿರುತ್ತದೆ. ಕುಷ್ಠ ರೋಗದ ಕಾರಣ ಬೆರಳಚ್ಚು ನೀಡಲು ಸಾಧ್ಯವಾಗುವುದಿಲ್ಲ. ವಯಸ್ಸಾದ ಕಾರಣ ಕೈಗಳು ನಡುಗುವಿಕೆಯಿಂದಲೂ ಬೆರಳಚ್ಚು ನೀಡಲು ಸಾಧ್ಯವಿಲ್ಲ.
ಹೀಗೆ ವಯಸ್ಸಾದವರು, ಅನಾರೋಗ್ಯಕ್ಕೆ ಒಳಗಾದವರೇ ಪಡಿತರದಿಂದ ವಂಚಿತರಾಗುತ್ತಿದ್ದಾರೆ. ಯಾರಿಗೆ ಸರ್ಕಾರದ ಯೋಜನೆಗಳು ಅತ್ಯಗತ್ಯವಾಗಿ ತಲುಪಬೇಕೊ ಅಂತಹ ಜನರೇ ಬೆರಳಚ್ಚಿನ ಮಾನದಂಡದ ಕಾರಣ ಪಡಿತರದಿಂದ ವಂಚಿತರಾಗುತ್ತಿದ್ದಾರೆ. ಸಾಮಾನ್ಯವಾಗಿ ಒಂದು ಕುಟುಂಬದಲ್ಲಿ ಬೆರಳಚ್ಚು ನೀಡುವಷ್ಟು ಆರೋಗ್ಯವಂತರು ಇದ್ದರೆ ಅವರಿಗೆ ಪಡಿತರ ಪಡೆಯಲು ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಅದೇ ತೀರಾ ವಯಸ್ಸಾದವರು ಮತ್ತು ಪಡಿತರ ಕೇಂದ್ರಗಳಿಗೆ ತೆರಳಿ ಪಡಿತರ ಪಡೆಯಲು ಸಾಧ್ಯವಿಲ್ಲ ಎನ್ನುವ ಸ್ಥಿತಿಯಲ್ಲಿ ಇರುವವರಿಗೆ ಈ ಬೆರಳಚ್ಚು ಸಮಸ್ಯೆ ತೀವ್ರವಾಗಿ ಬಾಧಿಸುತ್ತಿದೆ.
ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನಲ್ಲಿ 103, ಚಿಕ್ಕಬಳ್ಳಾಪುರ 93, ಚಿಂತಾಮಣಿ 124, ಗೌರಿಬಿದನೂರು 113, ಗುಡಿಬಂಡೆ 27, ಶಿಡ್ಲಘಟ್ಟ ತಾಲ್ಲೂಕಿನಲ್ಲಿ 85 ಪಡಿತರ ವಿತರಣೆಯ ಅಂಗಡಿಗಳಿವೆ. ಹೀಗೆ ಜಿಲ್ಲೆಯಲ್ಲಿ 540ಕ್ಕೂ ಹೆಚ್ಚು ಪಡಿತರ ವಿತರಣೆ ಅಂಗಡಿಗಳು ಇವೆ. ಬೆರಳಚ್ಚು ನೀಡದ ಕಾರಣ ಈ ಎಲ್ಲ ಪಡಿತರ ಅಂಗಡಿಗಳಿಂದ ಒಟ್ಟು 2,600ಕ್ಕೂ ಹೆಚ್ಚು ಫಲಾನುಭವಿಗಳು ಪಡಿತರವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ.
ಪಡಿತರ ವಿತರಣೆಗೆ ಸಂಬಂಧಿಸಿದಂತೆ ಹೊಸ ಸರ್ವರ್ ಬಳಸಲಾಗುತ್ತಿದೆ. ಒಟಿಪಿಯಿಂದ ಬೆರಳಚ್ಚು ನೀಡುವ ಪ್ರಕ್ರಿಯೆಗೆ ಬದಲಾಗಿದ್ದೇವೆ. ಹೀಗೆ ಬೆರಳಚ್ಚು ನೀಡಿದ ನಂತರ ಈ ಸಮಸ್ಯೆ ಎದುರಾಗಿದೆ. ಕಣ್ಣಿನ ಪಾಪೆಯ ಸ್ಕ್ಯಾನ್ ಮಾಡಿ ಪಡಿತರ ಪಡೆಯಲು ಅವಕಾಶವಿದೆ. ಮುಂದಿನ ದಿನಗಳಲ್ಲಿ ಈ ಯೋಜನೆ ಜಾರಿ ಆಗುತ್ತದೆ ಎಂದು ಜಿಲ್ಲಾ ಆಹಾರ ಇಲಾಖೆ ಮೂಲಗಳು ತಿಳಿಸುತ್ತವೆ.
‘ಎರಡು ತಿಂಗಳಿನಿಂದ ಈ ಸಮಸ್ಯೆ ಆಗಿದೆ. ಜನವರಿಯಿಂದ ಸರಿಪಡಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಬೆರಳಚ್ಚು ದೊರೆಯದಿದ್ದರೆ ಅವರ ಕಾರ್ಡ್‌ಗಳ ಸಂಖ್ಯೆ ದಾಖಲಿಸಿಕೊಂಡು ಪಡಿತರ ನೀಡುವ ವ್ಯವಸ್ಥೆ ಜಾರಿ ಆಗಬಹುದು’ ಎಂದು ಪಡಿತರ ವಿತರಣೆ ಕೇಂದ್ರದ ವ್ಯವಸ್ಥಾಪಕರೊಬ್ಬರು ತಿಳಿಸಿದರು.
ಸರ್ಕಾರದ ಗಮನ ಸೆಳೆದ ಸುಬ್ಬಾರೆಡ್ಡಿ
‘ಬೆರಳಚ್ಚು ನೀಡಲು ಸಾಧ್ಯವಾಗದ ಕಾರಣ ನನ್ನ ಮತಕ್ಷೇತ್ರದಲ್ಲಿ 847 ಮಂದಿ ಪಿಂಚಣಿ ಮತ್ತು ಪಡಿತರದಿಂದ ವಂಚಿತರಾಗಿದ್ದಾರೆ’ ಎಂದು ಬೆಳಗಾವಿ ಅಧಿವೇಶನದಲ್ಲಿ ನಿಯಮ 73ರ ಅಡಿಯಲ್ಲಿ ಬಾಗೇಪಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಸರ್ಕಾರದ ಗಮನ ಸೆಳೆದರು.
ಬೆರಳಚ್ಚು ಕಾರಣದಿಂದ ಪಡಿತರ ಮತ್ತು ಪಿಂಚಣಿ ತೆಗೆದುಕೊಳ್ಳಲು 847 ಜನರಿಗೆ ಸಾಧ್ಯವಾಗುತ್ತಿಲ್ಲ. ಅಂಚೆ ಕಚೇರಿಯಲ್ಲಿ ಪಿಂಚಣಿ ಪಡೆಯಬಹುದು. ಆದರೆ ಪಡಿತರ ಪಡೆಯಲು ಕಷ್ಟವಾಗಿದೆ ಎಂದು ಗಮನ ಸೆಳೆದರು.
ಆಗ ಪಿಂಚಣಿ ಕುರಿತು ಉತ್ತರಿಸಿದ ಕಂದಾಯ ಸಚಿವ ಕೃಷ್ಣಬೈರೇಗೌಡ ಹೆಬ್ಬೆಟ್ಟು ಗುರುತಿನ ಬದಲಾಗಿ ಕಣ್ಣಿನ ಪಾಪೆ ಮತ್ತು ಮುಖ ಚಹರೆಯ ಗುರುತು ಪಡೆದು ಪಿಂಚಣಿ ನೀಡಬಹುದು. ಅಂಚೆ ಕಚೇರಿ ಮೂಲಕ ಪಿಂಚಣಿ ಪಡೆಯಬಹುದು ಎಂದರು. ಕಷ್ಟದಲ್ಲಿ ಇರುವವರನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ಹೋಬಳಿವಾರು ಅದಾಲತ್ ಮಾಡುವಂತೆ ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರರಿಗೆ ಸೂಚನೆ ನೀಡಲಾಗುವುದು. ಸೌಲಭ್ಯದಿಂದ ವಂಚನೆಯಾಗದ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಸಚಿವರ ಕ್ಷೇತ್ರ ಚಿಂತಾಮಣಿಯಲ್ಲಿಯೇ ಗರಿಷ್ಠ
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರ ಸ್ವಕ್ಷೇತ್ರ ಚಿಂತಾಮಣಿಯಲ್ಲಿಯೇ ಬೆರಳಚ್ಚಿನ ಕಾರಣ ಪಡಿತರದಿಂದ ವಂಚಿತರಾದ ಫಲಾನುಭವಿಗಳು ಜಿಲ್ಲೆಯಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಇದ್ದಾರೆ. ಚಿಂತಾಮಣಿ ತಾಲ್ಲೂಕಿನಲ್ಲಿ 965 ಮಂದಿ ಪಡಿತರದಿಂದ ವಂಚಿತರಿದ್ದಾರೆ. ಈ ಪಟ್ಟಿಯಲ್ಲಿ ವೃದ್ಧರು ರೋಗಿಗಳು ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.