ADVERTISEMENT

ಹೋರಾಟದಿಂದ ಮುಖ್ಯವಾಹಿನಿಗೆ: ಮಾಜಿ ಸಚಿವ ಎಚ್.ಎಂ.ರೇವಣ್ಣ

​ಪ್ರಜಾವಾಣಿ ವಾರ್ತೆ
Published 28 ಜನವರಿ 2021, 2:52 IST
Last Updated 28 ಜನವರಿ 2021, 2:52 IST
ಗೌರಿಬಿದನೂರಿನಲ್ಲಿ ಶ್ರೀಭೀರೇಶ್ವರ ಸಹಕಾರ ಬ್ಯಾಂಕ್ ನ ವಾರ್ಷಿಕೋತ್ಸವ ಉದ್ಘಾಟನೆ ಕಾರ್ಯಕ್ರಮದಲ್ಲಿ ಗಣ್ಯರು
ಗೌರಿಬಿದನೂರಿನಲ್ಲಿ ಶ್ರೀಭೀರೇಶ್ವರ ಸಹಕಾರ ಬ್ಯಾಂಕ್ ನ ವಾರ್ಷಿಕೋತ್ಸವ ಉದ್ಘಾಟನೆ ಕಾರ್ಯಕ್ರಮದಲ್ಲಿ ಗಣ್ಯರು   

ಗೌರಿಬಿದನೂರು: ‘ಹಿಂದುಳಿದ ಸಮುದಾಯವಾದ ಕುರುಬ ಜನಾಂಗವು ಆರ್ಥಿಕ, ಶೈಕ್ಷಣಿಕ, ರಾಜಕೀಯವಾಗಿ ಹಿಂದುಳಿದಿದ್ದು ಸಂಘಟನೆ ಮತ್ತು ಹೋರಾಟದಿಂದ ಮಾತ್ರ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ’ ಎಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ತಿಳಿಸಿದರು.

ನಗರದ ಎನ್.ವಿ.ಆರ್ ಫಂಕ್ಷನ್ ಹಾಲ್ ನಲ್ಲಿ ಆಯೋಜಿಸಿದ್ದ ಶ್ರೀ ಬೀರೇಶ್ವರ ಸೌಹಾರ್ದ ಸಹಕಾರಿ ನಿಯಮಿತದ 1ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಹಿಂದುಳಿದ ಕುರುಬ ಸಮುದಾಯದ ಅಭಿವೃದ್ಧಿಗೆ ಸಹಕಾರಿ ಬ್ಯಾಂಕ್ ಮತ್ತು ವಿದ್ಯಾರ್ಥಿ ನಿಲಯಗಳ ಸ್ಥಾಪನೆಯಿಂದ ಹೆಚ್ಚು ಸಹಕಾರಿಯಾಗುತ್ತದೆ‌. ಇದರಿಂದ ಆರ್ಥಿಕವಾಗಿ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ. ಸಮುದಾಯದ ಸಹಕಾರಿ ಬ್ಯಾಂಕ್ ಗಳಲ್ಲಿ ಹೆಚ್ಚಿನ ಠೇವಣಿ ಇಟ್ಟು ಅದರ ಅಭಿವೃದ್ಧಿಗೆ ಶ್ರಮಿಸಲು ಸಮುದಾಯದ ಮುಖಂಡರು ಮುಂದಾಗಬೇಕಿದೆ. ಸಾಲ ಸೌಲಭ್ಯಗಳನ್ನು ಪಡೆದು ಸಕಾಲದಲ್ಲಿ ಮರುಪಾವತಿ ಮಾಡಿದಾಗ ಮಾತ್ರ ಸಹಕಾರಿ ಬ್ಯಾಂಕ್ ಉಳಿಯಲು ಸಾಧ್ಯವಾಗುತ್ತದೆ’ ಎಂದರು.

ADVERTISEMENT

ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಮಾತನಾಡಿ, ‘ಸಹಕಾರಿ ಬ್ಯಾಂಕ್‍ಗಳ ಮೂಲ ಉದ್ದೇಶ ರೈತರ ಮತ್ತು ಬಡವರ ಕಲ್ಯಾಣ. ಇತ್ತೀಚಿನ ದಿನಗಳಲ್ಲಿ ಕೇವಲ ಬ್ಯಾಂಕ್‍ಗಳು ಕಾರ್ಪೋರೇಟ್ ಕಂಪನಿಗಳ ಪರವಾಗಿದ್ದು, ಜನ ಸಾಮಾನ್ಯರಿಗೆ ಅದು ಅಲಭ್ಯವಾಗಿರುವುದು ವಿಷಾದನೀಯ’ ಎಂದರು.

ಜಿ.ಪಂ ಸದಸ್ಯ ಕೆ.ಕೆಂಪರಾಜು ಮಾತನಾಡಿ, ‘ತಾಲ್ಲೂಕಿನಲ್ಲಿ ಕುರುಬ ಸಮುದಾಯದ ಏಳಿಗೆಗಾಗಿ ಹೋರಾಟ ಮತ್ತು ಸಂಘಟನೆಯಿಂದ ಎಲ್ಲರೂ ಒಂದಾಗಬೇಕಿದೆ’ ಎಂದರು.

ಸಹಕಾರಿ ನಿಯಮಿತ ಬ್ಯಾಂಕ್ ಅಧ್ಯಕ್ಷ ಬಿ.ಲಿಂಗಪ್ಪ, ಕೋಚಿ ಸೌಹಾರ್ದ ಸಹಕಾರಿ ಸಂಘಗಳ ಸಂಯೋಜಕರಾದ ಗಂಗಾಧರಪ್ಪ, ಮುಖಂಡರಾದ ವೆಂಕಟೇಶ್, ಆನಂದ್, ಲಿಂಗಣ್ಣ, ವೇದಲವೇಣಿ ರಾಮು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.