
ಚಿಂತಾಮಣಿ: ಬಯಲುಸೀಮೆ ವ್ಯಾಪ್ತಿಯ ತಾಲ್ಲೂಕಿನಲ್ಲಿ ಮಳೆ ಕೊರತೆ, ಅಂತರ್ಜಲ ಮಟ್ಟ ಕುಸಿತ ಹಾಗೂ ವಿದ್ಯುತ್ ಕೊರತೆ ಸಂದರ್ಭಗಳಲ್ಲಿ ಕೃಷಿಭಾಗ್ಯ ಯೋಜನೆ ರೈತರ ಪಾಲಿಗೆ ವರದಾನವಾಗಿದೆ. ರೈತರು ಕೃಷಿ ಹೊಂಡಗಳ ನಿರ್ಮಾಣದತ್ತ ಹೆಚ್ಚಿನ ಒಲವು ತೋರುತ್ತಿದ್ದಾರೆ.
ತಾಲ್ಲೂಕಿನಲ್ಲಿ ಕೊಳವೆ ಬಾವಿಗಳ ಆಶ್ರಯದಲ್ಲಿ ಕೃಷಿ ಮಾಡುತ್ತಿರುವ ರೈತರು ಹಾಗೂ ಮಳೆಯಾಶ್ರಿತ ಕೃಷಿ ಮಾಡುತ್ತಿರುವ ರೈತರು ಸಹ ಕೃಷಿ ಹೊಂಡಗಳ ನಿರ್ಮಾಣಕ್ಕೆ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಈವರೆಗೆ ತಾಲ್ಲೂಕಿನಲ್ಲಿ ಕೃಷಿ ಇಲಾಖೆ ಅಡಿಯಲ್ಲಿ 1948 ಕೃಷಿ ಹೊಂಡಗಳು ನಿರ್ಮಾಣವಾಗಿವೆ. 2025-26ನೇ ಸಾಲಿಗೆ 90 ಹೊಂಡಗಳ ಗುರಿ ನಿಗದಿಯಾಗಿತ್ತು. ಅದರಲ್ಲಿ 45 ನಿರ್ಮಾಣವಾಗಿವೆ. ಉಳಿದವು ನಿರ್ಮಾಣ ಹಂತದಲ್ಲಿವೆ ಎಂದು ಸಹಾಯಕ ಕೃಷಿ ನಿರ್ದೇಶಕ ಅಮರನಾರಾಯಣರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಸಕ್ತ ಸಾಲಿಗೆ 62 ಕೃಷಿ ಹೊಂಡ ನಿರ್ಮಿಸುವ ಗುರಿ ಇತ್ತು. ಯೋಜನೆ ಲಾಭ ಪಡೆಯಲು ರೈತರಿಂದ ನಿರೀಕ್ಷೆಗೂ ಮೀರಿದ ಬೇಡಿಕೆ ಬಂದ ಪರಿಣಾಮ ಮತ್ತೊಂದು ಯೋಜನೆಯಲ್ಲಿ ಹೆಚ್ಚುವರಿಯಾಗಿ 28 ಹೊಂಡಗಳ ನಿರ್ಮಾಣಕ್ಕೆ ಸರ್ಕಾರದ ಮಂಜೂರಾತಿ ದೊರೆತಿದೆ. ತಾಲ್ಲೂಕಿನ ಕೈವಾರ ಮತ್ತು ಕಸಬಾ ಹೋಬಳಿಗಳಲ್ಲಿ ಅತ್ಯಧಿಕ ಕೃಷಿ ಹೊಂಡಗಳು ನಿರ್ಮಾಣವಾಗಿವೆ ಎನ್ನುತ್ತಾರೆ ಅಧಿಕಾರಿಗಳು.
ತಾಲ್ಲೂಕಿನಲ್ಲಿ ಮಳೆ ಅನಿಶ್ಚಿತತೆಯಿಂದ ಕೃಷಿ ಮಾಡುವುದು ಸವಾಲಾಗಿದೆ. ರೈತರು ನೀರಿನ ಲಭ್ಯತೆ ಆಧರಿಸಿ ಬೆಳೆ ಬೆಳೆಯುತ್ತಾರೆ. ಮಳೆಯಾಶ್ರಿತವಾಗಿ ರಾಗಿ, ನೆಲಗಡಲೆ, ತೊಗರಿ, ಮೆಕ್ಕೆಜೋಳ, ನೀರಾವರಿ ಆಶ್ರಯದಲ್ಲಿ ಟೊಮೆಟೊ, ತರಕಾರಿ, ಹೂ, ಹಿಪ್ಪನೇರಳೆ ಸೊಪ್ಪು ಅತ್ಯಧಿಕವಾಗಿ ಬೆಳೆಯುತ್ತಾರೆ. ಮಳೆ ನೀರನ್ನು ಕೃಷಿ ಹೊಂಡಗಳಲ್ಲಿ ಸಂಗ್ರಹಿಸಿಟ್ಟು ಮಳೆ ದೂರವಾದಾಗ ಬೆಳೆಗೆ ಹಾಯಿಸಿಕೊಳ್ಳುತ್ತಾರೆ. ಕೊಳವೆ ಬಾವಿ ನೀರಿನ ಒರತೆ ಹೆಚ್ಚಾಗಿದ್ದಾಗ ಕೃಷಿ ಹೊಂಡಗಳಿಗೆ ತುಂಬಿಸಿ ಅವಶ್ಯಕತೆ ಇದ್ದಾಗ, ವಿದ್ಯುತ್ ಕೈಕೊಟ್ಟಾಗ ಬೆಳೆಗಳಿಗೆ ಹರಿಸುತ್ತಾರೆ.
ಸಣ್ಣ ಕೃಷಿ ಭೂಮಿ ಹಿಡುವಳಿದಾರರು ಕನಿಷ್ಠ 10 ಮೀ ಉದ್ದ 10 ಮೀ ಅಗಲ ಹಾಗೂ 3 ಮೀ ಆಳದ ಕೃಷಿ ಹೊಂಡ ನಿರ್ಮಾಣ ಮಾಡಿಕೊಳ್ಳಬಹುದು. 12 ಮೀ ಉದ್ದ, 12 ಮೀ ಅಗಲ, 15 ಮೀ ಉದ್ದ, 15 ಮೀ ಅಗಲ, 18 ಮೀ ಉದ್ದ, 18 ಮೀ ಅಗಲ, ಗರಿಷ್ಠ 21 ಮೀ ಉದ್ದ, 21 ಮೀ ಅಗಲ, 3 ಮೀ ಆಳದ ಕೃಷಿ ಹೊಂಡ ನಿರ್ಮಿಸಿಕೊಳ್ಳಲು ಅವಕಾಶವಿದೆ. ಕನಿಷ್ಠ 10*10*3 ಮೀ ಕೃಷಿ ಹೊಂಡದಲ್ಲಿ 3 ಲಕ್ಷ ಲೀಟರ್ ನೀರು, ಗರಿಷ್ಠ 21*21*3 ಮೀ ಕೃಷಿ ಹೊಂಡದಲ್ಲಿ 9 ಲಕ್ಷ ಲೀಟರ್ ನೀರು ಸಂಗ್ರಹ ಮಾಡಿಕೊಳ್ಳಬಹುದು ಎಂದು ಕೃಷಿ ಅಧಿಕಾರಿ ಪ್ರಸನ್ನ ತಿಳಿಸಿದರು.
ರೈತರಿಗೆ ವರದಾನವಾದ
ಸಬ್ಸಿಡಿ ಕೃಷಿ ಹೊಂಡಗಳ ನಿರ್ಮಾಣಕ್ಕೆ ಸಾಮಾನ್ಯ ರೈತರಿಗೆ ಶೇ 80 ಮತ್ತು ಪರಿಶಿಷ್ಟ ಜಾತಿ ಪಂಗಡದವರಿಗೆ ಶೇ 90ರಷ್ಟು ಸಹಾಯಧನ ದೊರೆಯುತ್ತದೆ. ಹೊಂಡದ ಸುತ್ತಲೂ ಫೆನ್ಸಿಂಗ್ ನಿರ್ಮಿಸಲು ಸಾಮಾನ್ಯ ರೈತರಿಗೆ ಶೇ 40 ಪರಿಶಿಷ್ಟ ಜಾತಿ ಪಂಗಡದವರಿಗೆ ಶೇ 50 ಸಹಾಯಧನ ಇದೆ. ಡೀಸೆಲ್ ಪಂಪ್‌ಸೆಟ್‌ಗೆ ಸಾಮಾನ್ಯರಿಗೆ ಶೇ 50 ಪರಿಶಿಷ್ಟಜಾತಿ/ಪಂಗಡದವರಿಗೆ ಶೇ 90ರಷ್ಟು ಸಹಾಯಧನ ನೀಡಲಾಗುತ್ತದೆ. ಕೃಷಿ ಹೊಂಡದ ಜತೆಗೆ ಸುತ್ತಲೂ ಬದು ನಿರ್ಮಾಣ ಮಾಡಿಕೊಳ್ಳುವ ಮೂಲಕವೂ ಮಳೆ ನೀರು ಸಂಗ್ರಹ ಮಾಡಿಕೊಳ್ಳಬಹುದು. ಹೊಂಡಗಳಿಂದ ಹೆಚ್ಚು ಅನುಕೂಲವಾಗಿದ್ದು ಜಮೀನಿನ ಸುತ್ತಮುತ್ತ ಕೊಳವೆ ಬಾವಿಗಳ ಅಂತರ್ಜಲ ಮಟ್ಟ ವೃದ್ಧಿಗೂ ಸಹಕಾರಿಯಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.