
ಗೌರಿಬಿದನೂರು: ಎಂ. ಗೊಲ್ಲಹಳ್ಳಿ ಗ್ರಾಮದಲ್ಲಿರುವ ಕೋಳಿ ಫಾರ್ಮ್‌ನ ಅಸಮರ್ಪಕ ನಿರ್ವಹಣೆ ಮತ್ತು ಸ್ವಚ್ಛತೆ ಕೊರತೆಯಿಂದಾಗಿ ನೊಣಗಳ ಹಾವಳಿ ಹೆಚ್ಚಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ನೊಣಗಳ ಕಾಟದಿಂದ ಬೇಸರಗೊಂಡಿರುವ ಗ್ರಾಮಸ್ಥರು, ಶನಿವಾರ ಎಂ. ಗೊಲ್ಲಹಳ್ಳಿ ಗ್ರಾಮದಲ್ಲಿರುವ ಕೋಳಿ ಫಾರ್ಮ್‌ಗೆ ಮುತ್ತಿಗೆ ಹಾಕಿ ಮಾಲೀಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಕೋಳಿ ಫಾರ್ಮ್‌ನಲ್ಲಿ ಸ್ವಚ್ಛತೆ ಇಲ್ಲದಿರುವುದು ಹಾಗೂ ಅಸಮರ್ಪಕ ನಿರ್ವಹಣೆಯಿಂದಾಗಿ ನೊಣಗಳ ಹಾವಳಿ ಹೆಚ್ಚಾಗಿದೆ. ಇದರಿಂದ ಸಮೀಪದಲ್ಲಿರುವ ಗ್ರಾಮಕ್ಕೆ ನೊಣಗಳು ಲಗ್ಗೆ ಇಡುತ್ತಿವೆ ಎಂದು ಗ್ರಾಮಸ್ಥರು ದೂರಿದರು.
ಈ ಕುರಿತು ಮಾತನಾಡಿದ ಗ್ರಾಮಸ್ಥ ರಾಮಾಂಜಿ, ಗ್ರಾಮದಲ್ಲಿ ಕಳೆದ ಒಂದು ತಿಂಗಳಿನಿಂದ ಜನರು ನೊಣಗಳ ಕಾಟಕ್ಕೆ ಬೇಸತ್ತು ಹೋಗಿದ್ದಾರೆ. ಊಟ ಮಾಡಲು ಸಹ ಸಾಧ್ಯವಾಗುತ್ತಿಲ್ಲ. ಗ್ರಾಮದ ಪ್ರತಿ ಮನೆ, ಅಂಗಡಿ ಹೀಗೆ ಎಲ್ಲೆಂದರಲ್ಲಿ ರಾಸಾಯನಿಕಗಳ ಮೇಲೆ ಕುಳಿತುಕೊಳ್ಳುವ ನೊಣಗಳು ಆಹಾರ ಪದಾರ್ಥಗಳ ಮೇಲೆ ಕೂರುತ್ತಿವೆ. ಇದರಿಂದ ಗ್ರಾಮಸ್ಥರಲ್ಲಿ ರೋಗ ರುಜಿನಗಳ ಭಯ ಉಂಟಾಗಿದೆ. ರೈತರು ಬೆಳಗ್ಗೆ ಮತ್ತು ಸಂಜೆ ಹಾಲು ಕರೆಯಲು ಸಾಧ್ಯವಾಗುತ್ತಿಲ್ಲ. ನೊಣಗಳ ಕಾಟಕ್ಕೆ ಹಸುಗಳಿಗೆ ಗಾಯಗಳಾಗುತ್ತಿವೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಆದರೆ, ಏನೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೋಳಿ ಫಾರ್ಮ್‌ನಿಂದ ಬರುವ ನೊಣಗಳು ಅಡುಗೆ ಮನೆ, ಆಹಾರ ಪದಾರ್ಥಗಳು ಮತ್ತು ಪಾತ್ರೆಗಳ ಮೇಲೆ ಕುಳಿತುಕೊಳ್ಳುತ್ತಿವೆ. ಇದರಿಂದ ಗ್ರಾಮದಲ್ಲಿ ರೋಗ ಬಾಧೆ ಪ್ರಾರಂಭವಾಗಿದೆ. ಇತ್ತೀಚೆಗೆ ಮನೆಯಲ್ಲಿ ನೊಣಗಳನ್ನು ಓಡಿಸಲು ಅಂಗಡಿಯಿಂದ ರಾಸಾಯನಿಕ ಓಷಧಿ ತಂದು ಮನೆಯಲ್ಲಿ ಸಿಂಪಡಣೆ ಮಾಡಲಾಯಿತು, ಆದರೆ ನನ್ನ ಮಗ ಅದೇ ಔಷಧಿ ಬಾಯಲ್ಲಿ ಇಟ್ಟುಕೊಂಡು, ಆಸ್ಪತ್ರೆಗೆ ದಾಖಲಿಸುವಂತಾಗಿತ್ತು ಎಂದು ಗ್ರಾಮದ ಪ್ರವೀಣ್ ಕುಮಾರ್ ಹೇಳಿದರು.
ನೊಣಗಳ ನಿಯಂತ್ರಣಕ್ಕೆ ಪಶು ವೈದ್ಯರನ್ನು ಸ್ಥಳಕ್ಕೆ ಕರೆಸಿ ಸಲಹೆ ಕೇಳಲಾಗಿದೆ. ಅವರು ನೊಣಗಳ ನಿಯಂತ್ರಣಕ್ಕೆ ಏನೆಲ್ಲಾ ಕ್ರಮ ಕೈಗೊಳ್ಳಬೇಕು ಎಂಬುದನ್ನು ತಿಳಿಸಿಕೊಟ್ಟಿದ್ದಾರೆಬಾಲಕೃಷ್ಣ ಪಿಡಿಒ ಮುದಲೋಡು ಪಂಚಾಯಿತಿ
ಅಗತ್ಯ ಕ್ರಮ ಕೈಗೊಂಡಿದ್ದೇವೆ
ಕೋಳಿ ಫಾರ್ಮ್‌ನಲ್ಲಿ ನೊಣಗಳ ಹಾವಳಿ ಜಾಸ್ತಿಯಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ನೊಣಗಳ ನಿಯಂತ್ರಣಕ್ಕೆ ಔಷಧಿ ಸಿಂಪಡಣೆ ಮಾಡಲಾಗಿದೆ. ನೊಣಗಳ ನಿಯಂತ್ರಣಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಂದ ಸಲಹೆ ಮತ್ತು ಸೂಚನೆಗಳನ್ನು ಪಡೆದು ಕಾರ್ಯರೂಪಕ್ಕೆ ತರಲಾಗುವುದು ಎಂದು ಕೋಳಿ ಫಾರ್ಮ್ ಮಾಲೀಕ ರಾಜಶೇಖರ್ ರೆಡ್ಡಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.