ADVERTISEMENT

ಚಿಕ್ಕಬಳ್ಳಾಪುರ | ಆಹಾರ ಸುರಕ್ಷತೆ ಪರವಾನಗಿ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 6:04 IST
Last Updated 23 ಆಗಸ್ಟ್ 2025, 6:04 IST
ಚಿಕ್ಕಬಳ್ಳಾಪುರದಲ್ಲಿ ನಡೆದ ‘ಆಹಾರ ಸುರಕ್ಷತೆ ತರಬೇತಿ ಮತ್ತು ಪ್ರಮಾಣೀಕರಣ’  ಕಾರ್ಯಾಗಾರವನ್ನು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಉದ್ಘಾಟಿಸಿದರು 
ಚಿಕ್ಕಬಳ್ಳಾಪುರದಲ್ಲಿ ನಡೆದ ‘ಆಹಾರ ಸುರಕ್ಷತೆ ತರಬೇತಿ ಮತ್ತು ಪ್ರಮಾಣೀಕರಣ’  ಕಾರ್ಯಾಗಾರವನ್ನು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಉದ್ಘಾಟಿಸಿದರು    

ಚಿಕ್ಕಬಳ್ಳಾಪುರ: ಆಹಾರ ಉದ್ದಿಮೆದಾರರೆಲ್ಲರೂ ಆಹಾರ ಸುರಕ್ಷತೆ ಮತ್ತು ಔಷಧಿ ಆಡಳಿತ ಇಲಾಖೆಯಿಂದ ನೋಂದಣಿ ಅಥವಾ ವ್ಯಾಪಾರ ಪರವಾನಗಿಯನ್ನು ಕಡ್ಡಾಯವಾಗಿ ಪಡೆದು ಕಾಲಕಾಲಕ್ಕೆ ನವೀಕರಣ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ತಿಳಿಸಿದರು. 

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯಿಂದ ನಗರದಲ್ಲಿ ಬುಧವಾರ ನಡೆದ ‘ಆಹಾರ ಸುರಕ್ಷತೆ ತರಬೇತಿ ಮತ್ತು ಪ್ರಮಾಣೀಕರಣ’  ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯ ಎಲ್ಲಾ ಹೋಟೆಲ್‌ಗಳು, ರೆಸ್ಟೋರೆಂಟ್ ಗಳು, ಬೇಕರಿಗಳು, ಕೇಟರರ್ಸ್ ಹಾಗೂ ಬೀದಿಬದಿ ಆಹಾರ ಉದ್ದಿಮೆದಾರರು ಅಂಕಿತಾಧಿಕಾರಿಗಳ ಕಚೇರಿ, ಆಹಾರ ಸುರಕ್ಷತೆ ಮತ್ತು ಔಷಧಿ ಆಡಳಿತಯಿಂದ ನೋಂದಣಿ, ವ್ಯಾಪಾರ ಪರವಾನಗಿ ಹಾಗೂ ಟ್ರೇಡ್ ಪಡೆಯುವುದು ಕಡ್ಡಾಯ. ಕಾಲಕಾಲಕ್ಕೆ ನವೀಕರಣ ಮಾಡಿಕೊಳ್ಳಬೇಕು ಎಂದು ಹೇಳಿದರು.

ADVERTISEMENT

ತಪ್ಪಿದಲ್ಲಿ ಎಫ್‌ಎಸ್‌ಎಸ್‌ಎಐ ಕಾಯ್ದೆ 2006 ಪ್ರಕಾರ ದಂಡ ವಿಧಿಸಲಾಗುವುದು. ಹೋಟೆಲ್ ಉದ್ದಿಮೆದಾರರು ಹೋಟೆಲ್‌ನ ಒಳಗೆ, ಹೊರಗೆ ಮತ್ತು ಶೌಚಾಲಯಗಳಲ್ಲಿ ಶುಚಿತ್ವ  ಕಾಪಾಡುವ ವ್ಯವಸ್ಥೆಯ ಕುರಿತು ನಿರಂತರವಾಗಿ ನಿಗಾ ವಹಿಸಬೇಕು. ಅಡುಗೆ ಕೋಣೆಯಲ್ಲಿ ಕೆಲಸ ಮಾಡುವವರು, ಆಹಾರ ತಯಾರಕರು ಕಡ್ಡಾಯವಾಗಿ ತಲೆಗೆ ಕ್ಯಾಪ್,  ಕೈಗೆ  ಗ್ಲೌಸ್,  ಮಾಸ್ಕ್ ಧರಿಸಬೇಕು ಎಂದು ಹೇಳಿದರು.

ಆಹಾರದಲ್ಲಿ ಯಾವುದೇ ಕೃತಕ ಬಣ್ಣಗಳು ಹಾಗೂ ಟೇಸ್ಟಿಂಗ್ ಪೌಡರ್ ಬಳಸಬಾರದು. ಆಹಾರ ತಯಾರು ಮಾಡಲು ಉಪಯೋಗಿಸುವಂತಹ ತರಕಾರಿ ಹಾಗೂ ಆಹಾರ ಸಾಮಾಗ್ರಿಗಳ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕು ಎಂದು ಸೂಚಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಎನ್. ಭಾಸ್ಕರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಶ್ ಕುಮಾರ್, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತದ ಅಂಕಿತಾಧಿಕಾರಿ ಡಾ.ಕೆ.ಎಸ್. ಪ್ರಕಾಶ್, ಆಹಾರ ಸುರಕ್ಷತಾಧಿಕಾರಿಗಳಾದ  ಡಾ. ಕೆ. ಮಂಜುಳಾ, ಡಾ.ರಾಮಚಂದ್ರರೆಡ್ಡಿ, ಡಾ. ವೆಂಕಟೇಶ್ ಮೂರ್ತಿ, ಡಾ.ಹೇಮಾ, ಡಾ.ಅಕ್ಷಯ್ ಶ್ರೀನಿವಾಸ್, ಡಾ.ಸತ್ಯನಾರಾಯಣರೆಡ್ಡಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ, ಉದ್ದಿಮೆದಾರರು, ವ್ಯಾಪಾರಸ್ಥರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.