ADVERTISEMENT

ಸೌಹಾರ್ದಕ್ಕಾಗಿ ವಂಕಲ ದ್ಯಾವರ ಆಚರಣೆ

ತೊಂಡೇಬಾವಿ ಹೋಬಳಿಯ ‌ಬಂದಾರ್ಲಹಳ್ಳಿ ಗ್ರಾಮದಲ್ಲಿ‌ ವಿಶೇಷ ಆಚರಣೆ

ಎ.ಎಸ್.ಜಗನ್ನಾಥ್
Published 25 ಜೂನ್ 2019, 19:45 IST
Last Updated 25 ಜೂನ್ 2019, 19:45 IST
ಆಹಾರ ಪದಾರ್ಥಗಳನ್ನು ಹೊತ್ತು ಸಾಗಿದ ಮಹಿಳೆಯರು
ಆಹಾರ ಪದಾರ್ಥಗಳನ್ನು ಹೊತ್ತು ಸಾಗಿದ ಮಹಿಳೆಯರು   

ಗೌರಿಬಿದನೂರು: ಮುಂಗಾರಿನ ಆರಂಭದಲ್ಲಿ‌ ಬರುವ ಮಳೆಗಾಗಿ ಇಡೀ ಧರಣಿಯೇ ಕಾದು ಕುಳಿತಿರುತ್ತದೆ. ಇದರೊಂದಿಗೆ ಜನ ಜಾನುವಾರುಗಳು ಸೇರಿದಂತೆ ನೀರಿನ ಮೂಲಗಳು ಮಳೆಗಾಗಿ‌ ಕಾತರದಿಂದ ಕಾಯುತ್ತವೆ.

ಜೂನ್‌ನಲ್ಲಿ ಮುಂಗಾರಿನ ಮಳೆಯಿಂದ ತುಂಬಿ ಹರಿಯುವ ಹಳ್ಳ ಕೊಳ್ಳ ನದಿ ನಾಲೆಗಳಿಗೆ ವಿಶೇಷ ಪೂಜೆ ಮಾಡುವುದಲ್ಲದೆ ನದಿ ದಡದಲ್ಲಿಯೇ ಹಬ್ಬದ ಅಡುಗೆ ಮಾಡಿ ಊಟ ಮಾಡಿ‌ ಸಂಭ್ರಮಿಸುವ ವಿಶಿಷ್ಟ ಆಚರಣೆಯಾದ ವಂಕಲ ದ್ಯಾವರ (ನದಿ ಹಬ್ಬ) ವನ್ನು ತಾಲ್ಲೂಕಿನ ‌ತೊಂಡೇಬಾವಿ ಹೋಬಳಿಯ ‌ಬಂದಾರ್ಲಹಳ್ಳಿ ಗ್ರಾಮದಲ್ಲಿ‌ ವಿಶೇಷವಾಗಿ ಆಚರಿಸುತ್ತಾರೆ.

ಜೂನ್ ತಿಂಗಳಿನಲ್ಲಿ‌ ಮುಂಗಾರು ಆರಂಭವಾಗಿ ಉತ್ತಮ ಮಳೆಯಾಗಿ ಕೆರೆಗೆ ಹೊಸ ನೀರು‌ ಹರಿದು ಬೆಟ್ಟಗುಡ್ಡಗಳಲ್ಲಿ ಬಿದ್ದ ಮಳೆ ನೀರು ನದಿ ಹಳ್ಳಗಳ‌ ಮೂಲಕ ಹರಿಯುತ್ತವೆ. ಇಳೆ ತಂಪೆರೆದು ರೈತರು ಸಂತಸದಿಂದ ಕೃಷಿ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. ಇದೇ ಸಂದರ್ಭದಲ್ಲಿ ಈ ಗ್ರಾಮದವರು ಬೆಳಿಗ್ಗೆಯೇ ಮನೆಯಂಗಳವನ್ನು ಶುಭ್ರಗೊಳಿಸಿ, ಚಿತ್ತಾಕಾರದ ರಂಗೋಲಿ ಬಿಡಿಸಿ, ತಳಿರು ತೋರಣಗಳಿಂದ ಸಿಂಗರಿಸಿ ಹಬ್ಬದ ವಾತಾವರಣವನ್ನು ನಿರ್ಮಾಣ ಮಾಡಿರುತ್ತಾರೆ.

ADVERTISEMENT

ಬಳಿಕ ಪೂಜಾ ಹಾಗೂ ಅಡುಗೆಗೆ ಅವಶ್ಯಕವಾದ ವಸ್ತುಗಳನ್ನು ಹೊತ್ತು ಗ್ರಾಮದ ಹೊರವಲಯದಲ್ಲಿರುವ ನದಿಯ ಬಳಿ ತೆರಳಿ ದಡದಲ್ಲಿಯೇ ಅಡುಗೆ ಮಾಡಲು‌ ಅಣಿಗೊಳಿಸಿಕೊಳ್ಳುತ್ತಾರೆ. ಸ್ಥಳೀಯವಾಗಿ ಸಿಗುವ ಕಲ್ಲುಗಳನ್ನು ಇಟ್ಟು ಓಲೆ ನಿರ್ಮಾಣ ಮಾಡುತ್ತಾರೆ. ಮರದ ರೆಂಬೆಕೊಂಬೆಗಳಿಂದ ಗುಡಿಯನ್ನು ನಿರ್ಮಾಣ ಮಾಡಿ ಪೂಜೆಗೆ ಸಿದ್ಧಗೊಳಿಸುತ್ತಾರೆ.

ಎಲ್ಲರೂ‌ ಸೇರಿ ಸಾಮೂಹಿಕವಾಗಿ ಪ್ರಕೃತಿ ದೇವತೆಗೆ ಪೂಜೆ ಸಲ್ಲಿಸಿ ಈ ವರ್ಷದಲ್ಲಿ ಮಳೆ‌ ಮತ್ತು ಬೆಳೆಗಳು ಸಂತೃಷ್ಟಿಯಿಂದ ಆಗಲಿ. ಮಕ್ಕಳು ಮತ್ತು‌ ಜನಜಾನುವಾರುಗಳಿಗೆ ಯಾವುದೇ ರೋಗರುಜಿನಗಳು ಬರದಂತೆ ಕಾಪಾಡಲಿ ಎಂದು ವಿಶೇಷ ಪೂಜೆ ಸಲ್ಲಿಸಿ ಅಲ್ಲಿಯೇ ಕೋಳಿಯನ್ನು ಬಲಿ‌ ನೀಡಿ ಶಾಂತಿ ಮಾಡುತ್ತಾರೆ. ನಂತರ ಊಟ ಮಾಡಿ ಎಲ್ಲರೂ ಒಟ್ಟಿಗೆ ಗ್ರಾಮದ ಕಡೆಗೆ ಹೆಜ್ಜೆ ಹಾಕುತ್ತಾರೆ.

ಗ್ರಾಮದಲ್ಲಿ ಶಾಂತಿ ಮತ್ತು ನೆಮ್ಮದಿ ನೆಲೆಸಿ‌ ಕಾಲಕಾಲಕ್ಕೆ ಮಳೆ ಮತ್ತು‌ ಬೆಳೆಗಳು ಸಂತೃಷ್ಟಿಯಿಂದ ಆಗಲೆಂದು ಹಾಗೂ ಜನಜಾನುವಾರುಗಳಿಗೆ ಯಾವುದೇ ರೋಗರುಜಿನಗಳು‌ ಬಾರದಿರಲಿ ಎಂಬ ನಂಬಿಕೆಯಿಂದ ಪ್ರತೀ ವರ್ಷ ವಂಕಲ ದ್ಯಾವರ (ನದಿ ಹಬ್ಬ) ಆಚರಿಸುತ್ತೇವೆ. ಇಡೀ ಗ್ರಾಮದಲ್ಲಿ ಸೌಹಾರ್ದಯುತ ವಾತಾವರಣ ನಿರ್ಮಾಣವಾಗಿ ಜನರು ನೆಮ್ಮದಿಯಿಂದ ವರ್ಷ ಪೂರ್ಣ ಇರುತ್ತಾರೆ ಎಂಬ ಪ್ರತೀತಿ ನಮ್ಮಲ್ಲಿದೆ ಎಂದು ಗ್ರಾಮದ ಹಿರಿಯರಾದ ಬಿ.ಆರ್.ಮಹದೇವ್ ನುಡಿದರು.

ಯುವಪೀಳಿಕೆಯಿಂದ ಆಚರಣೆ; ಸಂತಸ
ದಶಕಗಳಿಂದ ಗ್ರಾಮದಲ್ಲಿ‌ ಮಾಡಿಕೊಂಡು‌ ಬಂದಿರುವ ಈ ಆಚರಣೆಯು ಇಂದಿಗೂ ಶ್ರದ್ಧಾ ಭಕ್ತಿಯಿಂದ ಮುಂದುವರಿಸಿಕೊಂಡು ಬರಲಾಗಿದೆ. ಇದರಿಂದ ಇಡೀ ಗ್ರಾಮದ ಜನರು ನೆಮ್ಮದಿಯಿಂದ ಬಾಳಲು ಸಹಕಾರಿಯಾಗಿದೆ. ಹಿರಿಯರು ರೂಢಿಸಿಕೊಂಡು ಬಂದಿರುವ ಆಚರಣೆಯನ್ನು ಇಂದಿನ ಯುವ ಪೀಳಿಗೆ ಕೂಡ ಮುಂದುವರಿಸಿಕೊಂಡು‌ ಬಂರುತ್ತಿರುವುದು ಸಂತಸದ ವಿಚಾರವಾಗಿದೆ. ಸುತ್ತಲಿನ ಪ್ರಕೃತಿ ನಮಗೆ ಆಸರೆಯಾಗಿರುವವರೆಗೂ ನಾವುಗಳು ಈ ಹಬ್ಬದ ಆಚರಣೆಯನ್ನು ಮಾಡಬೇಕಾಗಿದೆ ಎನ್ನುತ್ತಾರೆ ಗ್ರಾಮದ ಹಿರಿಯ ಅಜ್ಜಿ ಯಶೋದಮ್ಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.