ಗೌರಿಬಿದನೂರು: ಪೌರ ಕಾರ್ಮಿಕರ ಸೇವೆ ಅನನ್ಯವಾದದ್ದು. ಅವರೇ ನಿಜವಾದ ಕಾಯಕ ಯೋಗಿಗಳು ಎಂದು ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡ ಹೇಳಿದರು.
ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪೌರಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿದರು.
ಪೌರ ಕಾರ್ಮಿಕರಿಗೆ ಕೃತಜ್ಞತೆ ಹಾಗೂ ಗೌರವ ಸೂಚಿಸುವ ದಿನಾಚರಣೆ ಇದಾಗಿದೆ. ಇಂದು ಅನೇಕ ಇಲಾಖೆಗಳ ಕಾರ್ಮಿಕರು ನೌಕರರು ಸಾರ್ವಜನಿಕ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಪೌರ ಕಾರ್ಮಿಕ ಸೇವೆ ಶ್ರಮದಾಯಕ ಹಾಗೂ ಶ್ರೇಷ್ಠ ಸೇವೆ ಎಂದರು.
ಪೌರಾಯುಕ್ತ ರಮೇಶ್ ಮಾತನಾಡಿ, ನಗರದ 31 ವಾರ್ಡ್‌ಗಳಲ್ಲಿ 96 ಪೌರಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಕಾರ್ಯದೊತ್ತಡ ಹೆಚ್ಚಾಗುತ್ತಿದೆ, ಹೆಚ್ಚಿನ ಪೌರಕಾರ್ಮಿಕರ ಅಗತ್ಯವಿದೆ ಎಂದರು.
ತಹಶೀಲ್ದಾರ್ ಅರವಿಂದ್ ಮಾತನಾಡಿ, ಪೌರ ಕಾರ್ಮಿಕರು ಕಾರ್ಯದ ಒತ್ತಡಗಳಿಂದ ತಮ್ಮ ಆರೋಗ್ಯ ಕಡೆಗಣಿಸಬಾರದು. ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಕಾಲ ಕಾಲಕ್ಕೆ ಆರೋಗ್ಯ ತಪಾಸಣೆಗೆ ಒಳಗಾಗಬೇಕು ಎಂದರು.
ಅಧ್ಯಕ್ಷ ಲಕ್ಷ್ಮಿ ನಾರಾಯಣಪ್ಪ ಮಾತನಾಡಿ, ನಗರವನ್ನು ಸುಂದರ ಹಾಗೂ ಸ್ವಚ್ಛವಾಗಿ ಮಾಡುವ ಶಕ್ತಿ ಪೌರಕಾರ್ಮಿಕರಲ್ಲಿದೆ. ಪೌರಕಾರ್ಮಿಕರು ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಸಾರ್ವಜನಿಕರ ಆರೋಗ್ಯ ಕಾಪಾಡುವ ವೈದ್ಯರಾಗಿದ್ದಾರೆ ಎಂದರು.
ಪೌರ ಕಾರ್ಮಿಕರ ಕ್ರೀಡಾಕೂಟದಲ್ಲಿ ಗೆದ್ದವರಿಗೆ ಬಹುಮಾನ ವಿತರಿಸಲಾಯಿತು. ನಗರಸಭಾ ಉಪಾಧ್ಯಕ್ಷ ಫರೀದ್, ಕ್ಷೇತ್ರ ಶಿಕ್ಷಣಾಧಿಕಾರಿ ಗಂಗರೆಡ್ಡಿ, ನಗರಸಭಾ ಸದಸ್ಯ ವಿ.ರಮೇಶ್, ಸಪ್ತಗಿರಿ, ರಾಜಕುಮಾರ್, ಶ್ರೀಕಾಂತ್, ಖಲಿಮ್, ಡಿಜೆ ಚಂದ್ರಮೋಹನ್, ಬ್ಯಾಟರಿ ಜಯರಾಮ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.