(ಸಾಂದರ್ಭಿಕ ಚಿತ್ರ)
ಪ್ರಜಾವಾಣಿ ವಾರ್ತೆ
ಗೌರಿಬಿದನೂರು: ಮದ್ಯ ಕುಡಿಯಲು ಹಣ ಕೇಳಿದ ತಂದೆಯನ್ನು ನನ್ನ ಸಹೋದರ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ಕೊಲೆಗೀಡಾದ ವ್ಯಕ್ತಿಯ ಮಗಳು ದೂರು ಸಲ್ಲಿಸಿದ್ದಾರೆ.
ನಗರದ ನೆಹರೂ ಕಾಲೊನಿಯಲ್ಲಿ ಭಾನುವಾರ ಈ ಘಟನೆ ನಡೆದಿದೆ.
ಗಂಗಣ್ಣ (55) ಕೊಲೆಗೀಡಾದವರು. ಈ ಕೃತ್ಯ ಎಸಗಿದ ಆರೋಪದ ಮೇರೆಗೆ ಅವರ ಮಗ ಸಂಜಯ್ ನನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಗಂಗಣ್ಣ ಅವರ ಮಗಳು ಸ್ವಾತಿ, ‘ನನ್ನ ತಂದೆಗೆ ಮದ್ಯಪಾನ ಮಾಡುವ ಅಭ್ಯಾಸವಿದ್ದು, ನನ್ನ ಸಹೋದರ ಸಂಜಯ್ ಪ್ರತಿನಿತ್ಯವೂ ಮದ್ಯವನ್ನು ತಂದು ಕೊಡುತ್ತಿದ್ದ. ಅದೇ ರೀತಿ ಭಾನುವಾರವೂ ನನ್ನ ಸಹೋದರ ಮದ್ಯ ತಂದು ಕೊಟ್ಟಿದ್ದಾನೆ. ಇಷ್ಟಾದರೂ, ಮತ್ತೆ ಮದ್ಯ ತಂದು ಕೊಡುವಂತೆ ನನ್ನ ತಂದೆ ಪೀಡಿಸಿದ್ದಾರೆ. ಕುಡಿದದ್ದು ಸಾಕು ಎಂದು ನನ್ನ ಸಹೋದರ ನನ್ನ ಅಪ್ಪನಿಗೆ ಹೇಳಿದ್ದಾರೆ. ಆದರೆ, ಮದ್ಯ ತಂದು ಕೊಡದಿದ್ದರೆ, ನಿನಗೆ ಹೊಡೆಯುತ್ತೇನೆ ಎಂದು ಅಪ್ಪ ಬೆದರಿಸಿದ್ದಾರೆ. ನೀನೇನು ನನಗೆ ಹೊಡೆಯುವುದು, ನಾನೇ ಹೊಡೆದು ಕೊಲ್ಲುವುದಾಗಿ ಹೇಳಿದ ನನ್ನ ಸಹೋದರ, ಮರದ ಪೀಸ್‌ನಿಂದ ನನ್ನ ತಂದೆಯ ಮೇಲೆ ಹಲ್ಲೆ ನಡೆಸಿದ್ದಾರೆ’ ಎಂದು ಹೇಳಿದ್ದಾರೆ.
‘ಸಂಜಯ್ ನಡೆಸಿದ ಹಲ್ಲೆಯಿಂದ ಗಂಗಣ್ಣ ಅವರ ಕಣ್ಣಿನ ಹುಬ್ಬಿಗೆ ಪೆಟ್ಟು ಬಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆ ಬಳಿಕ ನನ್ನ ತಂದೆಯ ಮೃತದೇಹವನ್ನು ಬಿಳಿ ಬಟ್ಟೆಯಲ್ಲಿ ಸುತ್ತಿ, ನೆಲದ ಮೇಲೆ ಹರಡಿದ್ದ ರಕ್ತದ ಕಲೆಗಳನ್ನು ನನ್ನ ಸಹೋದರ ಸಂಜಯ್ ಒರೆಸುವುದನ್ನು ನಾನು ನೋಡಿದ್ದೇನೆ’ ಎಂದು ಸ್ವಾತಿ ಅವರು ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.