ADVERTISEMENT

ಮೀನು ಹಿಡಿಯಲು ಸಮಯ ನೀಡಿ: ಮೀನುಗಾರರಿಂದ ಸರ್ಕಾರಕ್ಕೆ ಮನವಿ

ಪಿ.ಎಸ್.ರಾಜೇಶ್
Published 27 ಜೂನ್ 2022, 4:38 IST
Last Updated 27 ಜೂನ್ 2022, 4:38 IST
ಬಾಗೇಪಲ್ಲಿ ತಾಲ್ಲೂಕಿನ ಯಲ್ಲಂಪಲ್ಲಿ ಗ್ರಾಮದ ಕೆರೆಯಲ್ಲಿ ಅಕಾಲಿಕ ಮಳೆಯಿಂದ ನೀರು ತುಂಬಿರುವುದು
ಬಾಗೇಪಲ್ಲಿ ತಾಲ್ಲೂಕಿನ ಯಲ್ಲಂಪಲ್ಲಿ ಗ್ರಾಮದ ಕೆರೆಯಲ್ಲಿ ಅಕಾಲಿಕ ಮಳೆಯಿಂದ ನೀರು ತುಂಬಿರುವುದು   

ಬಾಗೇಪಲ್ಲಿ: ಮೀನುಗಾರಿಕೆ ಇಲಾಖೆಯ ಅವೈಜ್ಞಾನಿಕ, ಏಕಪಕ್ಷೀಯ ನಿರ್ಧಾರದ ಆದೇಶದಿಂದ ಮೀನುಕೃಷಿಕರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುವಂತಾಗಿದೆ. ಈ ಎಲ್ಲಾ ವಿಚಾರಗಳಿಗೆ ಸರ್ಕಾರದತ್ತ ಬೊಟ್ಟು ಮಾಡುವ ಅಧಿಕಾರಿಗಳ ವರ್ತನೆಯಿಂದ ಮೀನುಪಾಲಕರು ದಿಕ್ಕುಕಾಣದಂತಾಗಿದ್ದಾರೆ.

ಕಳೆದ ಅಕ್ಟೋಬರ್ ಹಾಗೂ ನವೆಂಬರ್‌ನಲ್ಲಿ ತಾಲ್ಲೂಕಿನಲ್ಲಿ ಮಳೆ ಆಗಿದ್ದರಿಂದ ತಾಲ್ಲೂಕಿನ ಗುತ್ತಿಗೆದಾರರು ಪಕ್ಕದ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಸೇರಿದಂತೆ ಹೊರವಲಯದ ಕೆರೆ ಮತ್ತು ಅಣೆಕಟ್ಟುಗಳಿಂದ ಮೀನು ಮರಿಗಳನ್ನು ತಂದು ಕೆರೆಗಳಲ್ಲಿ ಬಿಟ್ಟಿದ್ದಾರೆ. ನಂತರ ಆದ ಮಳೆಯಿಂದ ಕೆರೆಗಳು ತುಂಬಿ,ಕೊಡಿ ಬಿದ್ದಿವೆ. ಇದರಿಂದ ಶೇ 75 ರಷ್ಟು ಮೀನುಗಳು ಹೊರಕ್ಕೆ ಹರಿಯುವ ನೀರಿನ ಜತೆ ಸೇರಿ ಹರಿದು ಹೋಗಿವೆ. ಕೆರೆ ಸಂರ್ಪೂಣ ತುಂಬಿರುವ ಕಾರಣ ಉಳಿದ ಶೇ 25 ರಷ್ಟು ಮೀನುಗಳನ್ನು ಹಿಡಿಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಇನ್ನೂ ಹೆಚ್ಚುವರಿಯಾಗಿ ಸಮಯಾವಕಾಶ ನೀಡಬೇಕೆಂಬುದು ಮೀನಗಾರರ ಮನವಿ ಮಾಡಿದ್ದಾರೆ.

ಇದೀಗ ಕಳೆದ 2016-17 ನೇ ಸಾಲಿನಿಂದ 2022 ರವರಿಗೂ 5 ವರ್ಷಗಳ ಟೆಂಡರ್, ಗುತ್ತಿಗೆಯ ಜೊತೆಗೆ ಸರ್ಕಾರ ಶೇ 25 ರಷ್ಟು ರಿಯಾಯಿತಿ ನೀಡಿ ಟೆಂಡರ್ ಹಾಗೂ ಗುತ್ತಿಗೆ ಮುಂದುವರೆಸಿದೆ. ಟೆಂಡರ್, ಗುತ್ತಿಗೆಯ ಅವಧಿ ಈ ಜೂನ್ ಅಂತ್ಯಕ್ಕೆ ಮುಗಿಯಲಿದೆ. ಆದರೆ ಮೀನುಗಾರರು ಕೋಟ್ಯಾಂತರ ರೂಪಾಯಿಗಳು ಸಾಲ ಮಾಡಿ, ಮನೆಯಲ್ಲಿದ್ದ ಒಡವೆ, ನಿವೇಶನ ಮಾರಿ ಮೀನುಮರಿಗಳನ್ನು ಕೆರೆಯಲ್ಲಿ ಬಿಟ್ಟಿದ್ದಾರೆ. ಕೆರೆಯಲ್ಲಿ ಉಳಿದ ಮೀನುಗಳನ್ನಾದರೂ ಹಿಡಿದುಕೊಳ್ಳಲು ಆರು ತಿಂಗಳು ಸಮಯವಾಕಾಶ ನೀಡುವಂತೆ ಮೀನುಗಾರರು, ಮೀನುಗಾರಿಕೆ ನಿರ್ದೇಶಾನಾಲಯದ ನಿರ್ದೇಶಕರಿಗೆ ಮನವಿ ಮಾಡಿದ್ದಾರೆ.

ADVERTISEMENT

ಆದರೆ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಸಮಯ ಅವಕಾಶ ನೀಡಲು ಹಿಂದೇಟು ಹಾಕುತ್ತಿದ್ದು, ಮೀನುಗಾರರು ಮಾಡಿರುವ ಸಾಲ ತೀರಿಸಿಕೊಳ್ಳಲು ಪರದಾಡುತ್ತಿದ್ದಾರೆ. ಪ್ರಸ್ತುತ ಇರುವ ಗುತ್ತಿಗೆದಾರರ ಅವಧಿ ಜೂನ್ ಅಂತ್ಯಕ್ಕೆ ಮುಗಿಯಲಿದೆ.

ಈಗಿನ ಗುತ್ತಿಗೆದಾರರು 3 ತಿಂಗಳ ಅವಧಿಯೊಳಗೆ ಮೀನುಗಳನ್ನು ಹಿಡಿಯಲು ಅವಕಾಶ ನೀಡಬೇಕು. ಇಲ್ಲವಾದರೆ, ಮೀನುಗಾರರು, ಸಂಘಟನೆಗಳ ನೇತೃತ್ವದಲ್ಲಿ ಮೀನುಗಾರಿಕೆ ಕಚೇರಿಗಳ ಮುಂದೆ ಬೇಡಿಕೆ ಈಡೇರಿಕೆ ಆಗುವವರಿಗೂ ಅನಿರ್ದಿಷ್ಟ ಪ್ರತಿಭಟನೆ ಮಾಡಲಾಗುವುದು ಎಂದು ಮೀನುಗಾರರು ಎಚ್ಚರಿಕೆ ನೀಡಿದ್ದಾರೆ.

ಸರ್ಕಾರವೇ ಪರಿಹಾರ ನೀಡಬೇಕು
‘ಈಗಿನ ಗುತ್ತಿಗೆದಾರರಿಗೆ ಬರಗಾಲ ಎಂದು ಎರಡು ಬಾರಿ ಹಾಗೂ ಕೋವಿಡ್ ಸೋಂಕು ಹರಡುವಿಕೆ ಎಂದು 3 ಭಾರಿ ಗುತ್ತಿಗೆಯ ಅವಧಿಯನ್ನು 3 ವರ್ಷಗಳ ಕಾಲ ಹೆಚ್ಚುವರಿ ಗುತ್ತಿಗೆ ನೀಡಲಾಗಿದೆ. ಇದೀಗ ಹಾಲಿ ಇರುವ ಗುತ್ತಿಗೆದಾರರ ಅವಧಿ ಜೂನ್ ಅಂತ್ಯಕ್ಕೆ ಮುಗಿಯಲಿದೆ. ಮಳೆ ಇರುವುದರಿಂದ ಮೀನುಗಾರರು ಹಿಡಿಯಲು ಮೀನುಗಳು ಆಗುವುದಿಲ್ಲ. ಆದರೆ ಸರ್ಕಾರದ ಆದೇಶ ಪಾಲಿಸಬೇಕಾಗಿದೆ. ಹಾಲಿ ಇರುವ ಮೀನುಗಾರರ ಸಂಕಷ್ಟಕ್ಕೆ ಸರ್ಕಾರವೇ ಪರಿಹಾರ ನೀಡಬೇಕ’ ಎಂದು ಮೀನುಗಾರಿಕೆ ಇಲಾಖೆಯ ಪ್ರಭಾರಿ ಸಹಾಯಕ ನಿರ್ದೇಶಕ ವಿ.ಭರತ್ ಕುಮಾರ್ ತಿಳಿಸಿದ್ದಾರೆ.

*

ಬಾಗೇಪಲ್ಲಿ ತಾಲ್ಲೂಕಿನಲ್ಲಿರುವ ಕೆರೆಗಳು: 38
ಹೆಕ್ಟರ್ ಪ್ರದೇಶದಷ್ಟು ವಿಸ್ತೀರ್ಣ: 1788.39
ಹೆಕ್ಟರ್‌ನಷ್ಟು ಅಚ್ಚುಕಟ್ಟು ಪ್ರದೇಶ 2517.2

*

ಕೆರೆಯಲ್ಲಿ ನೀರು ತುಂಬಿದೆ. ಮೀನುಗಳು ಹಿಡಿಯಲು ಆಗುತ್ತಿಲ್ಲ. ಇದೀಗ ಜೂನ್ ಅಂತ್ಯಕ್ಕೆ ನಮ್ಮ ಗುತ್ತಿಗೆ ಮುಗಿಯುತ್ತದೆ. ನಾವು ಬಿಟ್ಟಿರುವ ಮೀನುಗಳನ್ನು ನಾವೇ ಹಿಡಿಯಲು ಇನ್ನುಷ್ಟು ಸಮಯ ನೀಡಬೇಕು.
–ಸಂತೋಷ್, ಮೀನುಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.