ADVERTISEMENT

ಚಿಕ್ಕಬಳ್ಳಾಪುರ: ಗುಡಿಬಂಡೆ ಗುಡ್ಡಗಳಲ್ಲಿ ಚಿನ್ನದ ನಿಕ್ಷೇಪ?

ಮೇ 31ರವರೆಗೆ ರೆಡಾರ್ ಸ್ಕ್ಯಾನರ್ ಬಳಸಿ ವೈಮಾನಿಕ ಸಮೀಕ್ಷೆ

ಡಿ.ಎಂ.ಕುರ್ಕೆ ಪ್ರಶಾಂತ
Published 3 ಫೆಬ್ರುವರಿ 2026, 0:51 IST
Last Updated 3 ಫೆಬ್ರುವರಿ 2026, 0:51 IST
ಗುಡಿಬಂಡೆ ತಾಲ್ಲೂಕಿನ ಬೀಚಗಾನಹಳ್ಳಿ ಬಳಿ ನಡೆಯುತ್ತಿರುವ ವೈಮಾನಿಕ ಸಮೀಕ್ಷೆ 
ಗುಡಿಬಂಡೆ ತಾಲ್ಲೂಕಿನ ಬೀಚಗಾನಹಳ್ಳಿ ಬಳಿ ನಡೆಯುತ್ತಿರುವ ವೈಮಾನಿಕ ಸಮೀಕ್ಷೆ    

ಚಿಕ್ಕಬಳ್ಳಾಪುರ: ಜಿಲ್ಲೆಯ ಗುಡಿಬಂಡೆ, ಬಾಗೇಪಲ್ಲಿ ತಾಲ್ಲೂಕುಗಳ ಬೆಟ್ಟ ಗುಡ್ಡಗಳಲ್ಲಿ ಚಿನ್ನದ ನಿಕ್ಷೇಪಗಳಿಗಾಗಿ ಮೂರು ದಿನಗಳಿಂದ ವೈಮಾನಿಕ ಸಮೀಕ್ಷೆ ನಡೆಸಲಾಗುತ್ತಿದೆ.

ಗುಡಿಬಂಡೆ ತಾಲ್ಲೂಕು ಬೀಚಗಾನಹಳ್ಳಿಯನ್ನು ಕೇಂದ್ರವಾಗಿಸಿಕೊಂಡು ಕೇಂದ್ರ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ (ಜಿಎಸ್‌ಐ) ಸಂಸ್ಥೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಹೆಲಿಕಾಪ್ಟರ್ ಮೂಲಕ ಸಮೀಕ್ಷೆ ನಡೆಸುತ್ತಿದ್ದಾರೆ.

ಬಾಗೇಪಲ್ಲಿಯಿಂದ 60 ಕಿ.ಮೀ ದೂರದಲ್ಲಿ, ನೆರೆಯ ಆಂಧ್ರದ ಕದರಿ ಬಳಿ ಚಿನ್ನದ ನಿಕ್ಷೇಪಗಳು ಪತ್ತೆಯಾಗಿವೆ. ಹಾಗಾಗಿ ಇಲ್ಲಿಯೂ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.  

ADVERTISEMENT

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಜಿಎಸ್‌ಐ ತಂಡ ಸಮೀಕ್ಷೆ ಪೂರ್ಣಗೊಳಿಸಿ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಪ್ರವೇಶಿಸಿದೆ. ಮೇ 31ರವರೆಗೆ ಜಿಲ್ಲೆಯಲ್ಲಿಈ ವೈಮಾನಿಕ ಸಮೀಕ್ಷೆ ನಡೆಯಲಿದೆ. ರೆಡಾರ್‌ ಸ್ಕ್ಯಾನರ್ ಬಳಸಿ ಸಮೀಕ್ಷೆ ನಡೆಯುತ್ತಿದೆ. 

ಗುಡಿಬಂಡೆ ತಾಲ್ಲೂಕಿನ ತಿರುಮಣಿ ಬಳಿ ಆದರ್ಶ ಶಾಲೆ ಆವರಣದಲ್ಲಿ ಹೆಲಿಪ್ಯಾಡ್ ನಿರ್ಮಿಸಲಾಗಿದೆ. ನಿತ್ಯ ಆರು ತಾಸು ವೈಮಾನಿನ ಸಮೀಕ್ಷೆ ನಡೆಸಲಾಗುತ್ತಿದೆ. ಇಬ್ಬರು ಪೈಲೆಟ್‌ ಸೇರಿದಂತೆ 15 ಸಿಬ್ಬಂದಿ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದೆ.  

‘2019–20ರಲ್ಲಿ ಕೇಂದ್ರ ಗಣಿ ಮತ್ತು ಭೂ ವಿಜ್ಞಾನ ಸಂಸ್ಥೆ ಇಲ್ಲಿ ಚಿನ್ನ, ಅಲ್ಯುಮಿನಿಯಂ, ತಾಮ್ರ ಸೇರಿದಂತೆ ಕೆಲವು ಖನಿಜ ನಿಕ್ಷೇಪಗಳ ಸರ್ವೆ ನಡೆಸಿತ್ತು. ಅದರ ಮುಂದುವರಿದ ಭಾಗವಾಗಿ ಈಗ ಆಳವಾದ ಮತ್ತು ವೈಜ್ಞಾನಿಕ ರೀತಿಯಲ್ಲಿ ಸರ್ವೆ ನಡೆಯುತ್ತಿದೆ’ ಎಂದು ಜಿಲ್ಲಾಧಿಕಾರಿ ಜಿ.ಪ್ರಭು ‘ಪ್ರಜಾವಾಣಿ’ಗೆ ತಿಳಿಸಿದರು.

ಎಲ್ಲ ತಾಲ್ಲೂಕಿನಲ್ಲಿ ಸರ್ವೆ: ‘ಖನಿಜ ನಿಕ್ಷೇಪಗಳಿಗೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲ ತಾಲ್ಲೂಕಿನಲ್ಲಿ ಸರ್ವೆ ನಡೆಯಲಿದೆ. ಜನರು ಆಂತಕಕ್ಕೆ ಒಳಗಾಗಬೇಕಾಗಿಲ್ಲ. ವೈಜ್ಞಾನಿಕ ಪರಿಶೀಲನೆ ನಂತರ ನಿಖರ ಮಾಹಿತಿ ಸಿಗಲಿದೆ’ ಎಂದು ತಿಳಿಸಿದ್ದಾರೆ. 

ಚಿಂತಾಮಣಿಯಲ್ಲಿ ಚಿನ್ನ?
ಚಿಂತಾಮಣಿ ಭಾಗದಲ್ಲೂ ಖನಿಜ ನಿಕ್ಷೇಪಗಳು ಇದ್ದು ಈ ಭಾಗದಲ್ಲಿ ಪ್ರತ್ಯೇಕವಾಗಿ ವೈಮಾನಿಕ ಸಮೀಕ್ಷೆ ನಡೆಯುವ ಸಾಧ್ಯತೆ ಇದೆ. ‘ಈಗ ಗುಡಿಬಂಡೆ ಭಾಗದಲ್ಲಿ ಸಮೀಕ್ಷೆ ಹೆಲಿಪ್ಯಾಡ್‌ ನಿರ್ಮಿಸಲು ಅನುಮತಿ ನೀಡಲಾಗಿದೆ. ಮುಂದೆ ಚಿಂತಾಮಣಿ ಭಾಗದಲ್ಲಿ ಸಮೀಕ್ಷೆಗೆ ಅನುಮತಿ ಕೋರುವ ಸಾಧ್ಯತೆ ಇದೆ’ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸುತ್ತವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.