
ಗೌರಿಬಿದನೂರು: ತಾಲ್ಲೂಕಿನ ನರಸಾಪುರ ಗ್ರಾಮದಲ್ಲಿ ನರೇಗಾ ಯೋಜನೆ ಅಡಿ ನಡೆಯುತ್ತಿರುವ ಕಾಲುವೆ ಹೂಳೆತ್ತುವ ಕಾಮಗಾರಿಯನ್ನು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜಿ.ಕೆ. ಹೊನ್ನಯ್ಯ ಗುರುವಾರ ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಹೂಳು ತುಂಬಿರುವ ಕಾಲುವೆಗಳಲ್ಲಿ ಹೂಳೆತ್ತುವ ಕಾಮಗಾರಿ ನಡೆಯುತ್ತಿದ್ದು, ಗುಣಮಟ್ಟ ಕಾಪಾಡುವುದು, ಕೆಲಸದಲ್ಲಿ ವೇಗ ಹೆಚ್ಚಿಸುವುದು ಮತ್ತು ಸುರಕ್ಷತೆ ಬಗ್ಗೆ ನರೇಗಾ ಕಾರ್ಮಿಕರಿಗೆ ತಿಳಿಸಿಕೊಡಲಾಗಿದೆ. ಕಾರ್ಮಿಕರಿಗೆ ಲಭಿಸುತ್ತಿರುವ ಮೂಲ ಸೌಲಭ್ಯಗಳು, ದಿನನಿತ್ಯದ ಕಾರ್ಯದಲ್ಲಿ ಎದುರಾಗುತ್ತಿರುವ ಅಡಚಣೆ, ವೇತನ ವಿತರಣೆ ಸಮಸ್ಯೆಗಳು, ಕೆಲಸಗಳ ಲಭ್ಯತೆ, ಬಗ್ಗೆ ಕೂಡ ನರೇಗಾ ಕಾರ್ಮಿಕರೊಂದಿಗೆ ಚರ್ಚೆ ನಡೆಸಲಾಯಿತು ಎಂದು ಹೇಳಿದರು.
ಕಾರ್ಮಿಕರು ಪ್ರಸ್ತಾಪಿಸಿದ ಕೆಲವು ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸಲಾಯಿತು. ಕಾನೂನಾತ್ಮಕ ಸಮಸ್ಯೆಗಳನ್ನು ಶೀಘ್ರ ಪರಿಹರಿಸಲಾಗುವುದು. ಈ ಕಾಮಗಾರಿಯಲ್ಲಿ ಒಟ್ಟು 48 ಜನ ನರೇಗಾ ಕೂಲಿ ಕಾರ್ಮಿಕರು ತೊಡಗಿದ್ದು, ನರೇಗಾ ಯೋಜನೆ ನೀಡುತ್ತಿರುವ ಅವಕಾಶಗಳನ್ನು ಬಳಸಿಕೊಳ್ಳುವಂತೆ ಕಾರ್ಮಿಕರಿಗೆ ತಿಳಿಸಲಾಗಿದೆ ಎಂದರು.
ಇದೇ ವೇಳೆ ಸಹಾಯಕ ನಿರ್ದೇಶಕ ಬಾಲಕೃಷ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷ ಪಾಪಣ್ಣ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಹಾಗೂ ನರೇಗಾ ಕೂಲಿ ಕಾರ್ಮಿಕರು ಹಾಜರಿದ್ದರು.