ADVERTISEMENT

ಶಿಡ್ಲಘಟ್ಟ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕುಸಿತ

60 ಶಾಲೆಗಳಲ್ಲಿ ಹತ್ತು ಮತ್ತು ಅದಕ್ಕಿಂತ ಕಡಿಮೆ ಮಕ್ಕಳ ಸಂಖ್ಯೆ

ಡಿ.ಜಿ.ಮಲ್ಲಿಕಾರ್ಜುನ
Published 24 ನವೆಂಬರ್ 2025, 5:06 IST
Last Updated 24 ನವೆಂಬರ್ 2025, 5:06 IST
ಶಿಡ್ಲಘಟ್ಟ ತಾಲ್ಲೂಕಿನ ಬಳುವನಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಮೂವರು ಮಕ್ಕಳು ಪಾಠ ಕಲಿಯುತ್ತಿರುವುದು
ಶಿಡ್ಲಘಟ್ಟ ತಾಲ್ಲೂಕಿನ ಬಳುವನಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಮೂವರು ಮಕ್ಕಳು ಪಾಠ ಕಲಿಯುತ್ತಿರುವುದು   

ಶಿಡ್ಲಘಟ್ಟ: ತಾಲ್ಲೂಕಿನ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕುಸಿತ ಕಾಣುತ್ತಿದೆ. ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಸಿದ್ಧವಾದ 2025-2026ರ ಅಂಕಿ ಅಂಶಗಳ ಪಟ್ಟಿಯಲ್ಲಿ 60 ಶಾಲೆಗಳು ಹತ್ತು ಮತ್ತು ಅದಕ್ಕಿಂತ ಕಡಿಮೆ ಮಕ್ಕಳ ಸಂಖ್ಯೆಯನ್ನು ಹೊಂದಿವೆ.

ತಾಲ್ಲೂಕಿನ ಅಂಬಿಗಾನಹಳ್ಳಿ, ಕೇಶವಪುರ ಮತ್ತು ಮಾರಲಪ್ಪನಹಳ್ಳಿಯಲ್ಲಿ ಮಕ್ಕಳ ಸಂಖ್ಯೆ ಕೇವಲ ಒಂದು. ಗುಡಿಹಳ್ಳಿ, ತೊಟ್ಲಿಗಾನಹಳ್ಳಿ, ಕೆ.ಜಿ.ಪುರ, ಬಸವನಪರ್ತಿ, ಕೊಮ್ಮಸಂದ್ರ, ಸಾದಲವಾರಹಳ್ಳಿ ಮತ್ತು ಸುಡ್ರಹಳ್ಳಿಯ ಶಾಲೆಯಲ್ಲಿ ಕೇವಲ ಇಬ್ಬರು ಮಕ್ಕಳಿದ್ದಾರೆ. ದೊಡ್ಡಗುಮ್ಮನಹಳ್ಳಿ, ಬಚ್ಚಹಳ್ಳಿ, ದೇವಗುಟ್ಟಹಳ್ಳಿ, ಸೋಮನಹಳ್ಳಿ ಮತ್ತು ವರದಗಾನಹಳ್ಳಿಯಲ್ಲಿನ ಮಕ್ಕಳ ಸಂಖ್ಯೆ 3. ತಾಲ್ಲೂಕಿನ ಏಳು ಸರ್ಕಾರಿ ಶಾಲೆಗಳಲ್ಲಿ ಕೇವಲ 4 ಮಕ್ಕಳಿದ್ದಾರೆ.

2023-2024 ರಲ್ಲಿ ಹತ್ತು ಮತ್ತು ಅದಕ್ಕಿಂತ ಕಡಿಮೆ ಮಕ್ಕಳ ಸಂಖ್ಯೆಯನ್ನು ಹೊಂದಿದ್ದ ಶಾಲೆಗಳ ಸಂಖ್ಯೆ 47 ಇತ್ತು. ಆದರೆ ಈ ವರ್ಷ 60ಕ್ಕೆ ಏರಿಕೆಯಾಗಿದೆ. ಇದು ಸಾಮಾಜಿಕ ಪರಿಸ್ಥಿತಿಯನ್ನು ಮತ್ತು ಶಿಕ್ಷಣ ವ್ಯವಸ್ಥೆಯ ಕುಸಿತವನ್ನು ಪ್ರತಿಧ್ವನಿಸುತ್ತಿದೆ.

ADVERTISEMENT

ತಾಲ್ಲೂಕಿನ ಬಳುವನಹಳ್ಳಿ ಗ್ರಾಮದಲ್ಲಿ, ಸುಸಜ್ಜಿತವಾದ ಕಟ್ಟಡವಿಲ್ಲದ ಕಾರಣ ಮಕ್ಕಳ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಕಳೆದ 15 ವರ್ಷಗಳ ಹಿಂದೆ ನೂರು ಮಂದಿ ಓದುತ್ತಿದ್ದ ಶಾಲೆಯಲ್ಲಿ ಈಗ ಮೂರು ಮಂದಿಗೆ ಇಳಿಕೆಯಾಗಿದೆ. ನಮ್ಮೂರಿನಲ್ಲಿ, ಸರ್ಕಾರಿ ಶಾಲೆಯ ಕಟ್ಟಡ ನಿರ್ಮಾಣಕ್ಕೆ ಎಲ್ಲೂ ಜಾಗ ಮೀಸಲಿಟ್ಟಿಲ್ಲ, ಈ ಕಾರಣದಿಂದ ದಾನಿಗಳು ಕೊಟ್ಟಿರುವ ಹಳೆ ಕಟ್ಟಡದಲ್ಲೆ ಪಾಠ ನಡೆಯುತ್ತಿವೆ. ಕಟ್ಟಡ ಸುಸಜ್ಜಿತವಾಗಿಲ್ಲದ ಕಾರಣ, ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯಪಟ್ಟು ಖಾಸಗಿ ಶಾಲೆಗಳಿಗೆ ದಾಖಲು ಮಾಡಿದ್ದಾರೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಾರೆ.

ಪೋಷಕರು ಖಾಸಗಿ ಶಾಲೆ ಕಡೆಗೆ ಆಕರ್ಷಿತರಾಗುತ್ತಿದ್ದಾರೆ. ಹಾಗಾಗಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಲೋಕಾರೂಢಿ ಹೇಳಿಕೆಯಿದೆಯಾದರೂ, ವಾಸ್ತವ ಬೇರೆಯೇ ಇದೆ. ಈಗಾಗಲೇ ತಾಲ್ಲೂಕಿನಲ್ಲಿ ಮುಚ್ಚಿರುವ ತಾಲ್ಲೂಕಿನ ಶಾಲೆಗಳಾಗಲೀ, ಒಂದೊಂದೇ ಮಕ್ಕಳು ಉಳಿದಿರುವ ಶಾಲೆಗಳ ಮಕ್ಕಳ ಪೋಷಕರನ್ನು ಮಾತನಾಡಿಸಿದಾಗ ಅವರು ಶಿಕ್ಷಕರೆಡೆಗೆ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ಕೆಲವು ಸರ್ಕಾರಿ ಶಾಲೆಗಳ ಮಕ್ಕಳು ಖಾಸಗಿ ಶಾಲೆಗೆ ಹೋಗಿ ಸೇರಿಲ್ಲ, ಬದಲಿಗೆ ಬೇರೆಡೆ ಸರ್ಕಾರಿ ಶಾಲೆಗೆ ಹೋಗಿ ಸೇರಿದ್ದಾರೆ.

ಸರ್ಕಾರಿ ಶಾಲೆಯಲ್ಲಿ ಶಿಕ್ಷಕರು ಸರಿಯಾಗಿ ಪಾಠ ಮಾಡುವುದಿಲ್ಲ, ಮೂಲಸೌಲಭ್ಯಗಳಿಲ್ಲ. ಕಟ್ಟಡ ಆಟದ ಮೈದಾನವಿಲ್ಲ, ಒಳ್ಳೆಯ ಶಿಕ್ಷಣ ಸಿಗುತ್ತಿಲ್ಲ, ಆಂಗ್ಲಮಾಧ್ಯಮ ಇಲ್ಲ ಎನ್ನುವ ಕಾರಣಕ್ಕೆ ಪೋಷಕರು ಅನಿವಾರ್ಯವಾಗಿ ತಮ್ಮ ಮಕ್ಕಳನ್ನು ಬೇರೆ ಶಾಲೆಗಳಿಗೆ ಸೇರಿಸುತ್ತಿದ್ದಾರೆಯಾದರೂ, ಈಗ ಮುಚ್ಚುವ ಹಂತದಲ್ಲಿರುವ ತಾಲ್ಲೂಕಿನ ಕೆಲವು ಸರ್ಕಾರಿ ಶಾಲೆಗಳ ಪೋಷಕರು ಬಹುತೇಕರು ಸ್ವಲ್ಪ ದೂರವಿದ್ದರೂ ಬೇರೆ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಿದ್ದಾರೆ. ಈ ಸಂಗತಿಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಶಿಕ್ಷಕರ ಲೋಪಗಳು ಎದ್ದು ಕಾಣುತ್ತವೆ.

ಹಳೆಯ ವಿದ್ಯಾರ್ಥಿಗಳ ಸಂಘ ಕಟ್ಟುವುದು, ದಾನಿಗಳನ್ನು ಸಂಪರ್ಕಿಸುವುದು, ಅಂಗನವಾಡಿಯನ್ನು ಶಾಲೆಯೊಂದಿಗೆ ಸಂಯೋಜಿಸುವುದು, ಮಕ್ಕಳಿಗೆ ಇಂಗ್ಲಿಷ್ ಕಲಿಸುವುದು, ಮುಂತಾದ ಚಟುವಟಿಕೆಗಳನ್ನು ಮಾಡುವ ಮೂಲಕ ಹಲವು ಮಂದಿ ಶಿಕ್ಷಕರು ಸರ್ಕಾರಿ ಶಾಲೆಗಳನ್ನು ಉತ್ತಮವಾಗಿಸಿ ಮಾದರಿಯಾಗಿದ್ದಾರೆ. ಆದರೆ ಕೆಲವು ಮಂದಿ ಶಿಕ್ಷಕರು ಶಾಲೆಯನ್ನು ಮುಚ್ಚುವ ಸ್ಥಿತಿಗೆ ತಂದು ನಿಲ್ಲಿಸಿದ್ದಾರೆ. ಇವರ ಮೇಲೆ ಕ್ರಮ ಕೈಗೊಳ್ಳಬೇಕು ಎಂಬುದು ಕೆಲ ಪೋಷಕರ ಅಭಿಪ್ರಾಯವಾಗಿದೆ.

ಕಳೆದ ಐದು ವರ್ಷಗಳಲ್ಲಿ ಉತ್ತಮವಾಗಿದ್ದ ಮಕ್ಕಳ ಸಂಖ್ಯೆ ಈಚಿನ ವರ್ಷಗಳಲ್ಲಿ ಕುಸಿದಿರುವುದು ಅಂಕಿ ಅಂಶಗಳಿಂದ ತಿಳಿಯುತ್ತದೆ. ದಿಢೀರನೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಲು ಕಾರಣಗಳೇನು ಎಂಬುದನ್ನು ಶಿಕ್ಷಣ ಇಲಾಖೆ ಗಂಭೀರವಾಗಿ ಪರಿಶಿಲಿಸಬೇಕಿದೆ. ಶಿಕ್ಷಕರ ಅಸಮರ್ಥತೆಯಿಂದ ಮುಚ್ಚಲ್ಪಟ್ಟ ಕೆಲವು ಸರ್ಕಾರಿ ಶಾಲೆಗಳನ್ನು ಗಮನಿಸಿಯೂ ಶಿಕ್ಷಣ ಇಲಾಖೆ ಇನ್ನೂ ಎಚ್ಚೆತ್ತುಕೊಂಡಿಲ್ಲದಿರುವುದು ಇನ್ನಷ್ಟು ದುರಂತಕ್ಕೆ ಕಾರಣವಾಗಲಿದೆ. ಮಕ್ಕಳು ತಮ್ಮ ಹಳ್ಳಿಯ ಸರ್ಕಾರಿ ಶಾಲೆಗೆ ಹೋಗದೇ ಕೆಲವು ಕಿ.ಮೀ ದೂರದ ಇನ್ನೊಂದು ಸರ್ಕಾರಿ ಶಾಲೆಗೆ ಹೋಗುತ್ತಿದ್ದಾರೆಂದರೆ ತಪ್ಪು ಯಾರದ್ದೆಂದು ಇಲಾಖೆ ಅರಿಯಬೇಕಿದೆ.

ಸರ್ಕಾರಿ ಶಾಲೆಗಳಲ್ಲಿ ಹತ್ತಕ್ಕಿಂತ ಕಡಿಮೆ ಮಕ್ಕಳ ಸಂಖ್ಯೆಯಿದ್ದರೆ ಒಬ್ಬ ಶಿಕ್ಷಕ ಇರುತ್ತಾರೆ. 40ಕ್ಕಿಂತ ಮಕ್ಕಳ ಸಂಖ್ಯೆಯಿದ್ದರೆ ಮೂರು ಜನ ಶಿಕ್ಷಕರಿರುತ್ತಾರೆ. ಒಬ್ಬೇ ಒಬ್ಬ ಶಿಕ್ಷಕ ಒಂದರಿಂದ ಏಳನೇ ತರಗತಿವರೆಗಿನ ಮಕ್ಕಳಿಗೆ ಹೇಗೆ ಕಲಿಸಲು ಸಾಧ್ಯ ಎಂಬುದೂ ಒಂದು ಯಕ್ಷ ಪ್ರಶ್ನೆಯೇ ಸರಿ.

ಶಿಡ್ಲಘಟ್ಟ ತಾಲ್ಲೂಕಿನ ಬಳುವನಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಮೂವರು ಮಕ್ಕಳು ಪಾಠ ಕಲಿಯುತ್ತಿರುವುದು

ತಾಲ್ಲೂಕಿನ ಸಮಸ್ಯೆ ಮಾತ್ರವಲ್ಲ

ಇದು ತಾಲ್ಲೂಕಿನ ಸಮಸ್ಯೆ ಮಾತ್ರವಲ್ಲ ಇಡೀ ರಾಜ್ಯದ ಸರ್ಕಾರಿ ಶಾಲೆಗಳ ಸಮಸ್ಯೆ. ಸರ್ಕಾರ ಈ ಬಗ್ಗೆ ಮಾಹಿತಿ ಪಡೆದಿದೆ. ಸರ್ಕಾರ ಗ್ರಾಮ ಪಂಚಾಯಿತಿಗೆ ಒಂದು ಅಥವಾ ಎರಡು ಆಕರ್ಷಕ (ಮ್ಯಾಗ್ನೆಟ್) ಶಾಲೆಗಳನ್ನು ತೆರೆಯಲು ಚಿಂತನೆ ನಡೆಸಿದೆ. 500 ಮಕ್ಕಳಿರುವ ಆ ಶಾಲೆಗಳಲ್ಲಿ 15ಕ್ಕೂ ಹೆಚ್ಚು ಮಂದಿ ಶಿಕ್ಷಕರಿರುತ್ತಾರೆ. ಮಕ್ಕಳಿಗೆ ಎಲ್ಲ ರೀತಿಯ ಅನುಕೂಲತೆಗಳೂ ಅಲ್ಲಿರುತ್ತವೆ. ಗ್ರಾಮದ ಮಕ್ಕಳನ್ನು ಬಸ್‌ನಲ್ಲಿ ಕರೆದುಕೊಂಡು ಹೋಗಿ ಬರುವ ವ್ಯವಸ್ಥೆ ಇರುತ್ತದೆ. ಮುಂದಿನ ವರ್ಷದಿಂದ ಈ ರೀತಿಯ ಶಾಲೆಗಳನ್ನು ಸರ್ಕಾರ ಮಾಡಲು ಚಿಂತನೆ ನಡೆಸಿದೆ. ನರೇಂದ್ರಕುಮಾರ್ ಕ್ಷೇತ್ರ ಶಿಕ್ಷಣಾಧಿಕಾರಿ ಶಿಡ್ಲಘಟ್ಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.