ಚಿಕ್ಕಬಳ್ಳಾಪುರ: 2025-26ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಹಂಗಾಮುಗಳ ಅವಧಿಗೆ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಅಡಿಯಲ್ಲಿ ವಿವಿಧ ತೋಟಗಾರಿಕೆ ಬೆಳೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಾವು, ದ್ರಾಕ್ಷಿ ಮತ್ತು ದಾಳಿಂಬೆ ಬೆಳೆಗಳನ್ನು ವಿಮೆ ಅಡಿ ಅಧಿಸೂಚಿಸಲಾಗಿದೆ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳು ಯೋಜನೆ ಅಡಿ ಬರುತ್ತದೆ.
ಈ ಬೆಳೆಗಳಿಗೆ ಸಾಲಪಡೆದ ಹಾಗೂ ಸಾಲಪಡೆಯದ ರೈತರು ವಿಮೆ ಪಾವತಿಸಬಹುದು.
ವಿಮೆ ಮಾಡಿಸುವ ಆಸಕ್ತ ರೈತರು ಕೂಡಲೇ ನಿಗದಿತ ಅರ್ಜಿಯೊಂದಿಗೆ ಪಹಣಿ, ಬ್ಯಾಂಕ್ ಖಾತೆ ಪಾಸ್‌ಬುಕ್, ಆಧಾರ್ ಕಾರ್ಡ್ ನಕಲು ಪ್ರತಿಗಳನ್ನು ಮತ್ತು ಸ್ವಯಂ ಘೋಷಿತ ಬೆಳೆ ವಿವರಗಳನ್ನು ಲಗತ್ತಿಸಿ ಆಯಾ ತಾಲ್ಲೂಕಿನ ತಮ್ಮ ವ್ಯಾಪ್ತಿಯ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ (ಖಾತೆ ಹೊಂದಿರುವ ಬ್ಯಾಂಕ್) ಹಾಗೂ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ನೋಂದಣಿ ಮಾಡಿಸಬಹುದು.
ಈ ಯೋಜನೆಯಡಿ ಆಲೀಕಲ್ಲು ಮಳೆ ಮತ್ತು ಮೇಘ ಸ್ಫೋಟ ಇವುಗಳಿಂದ ಉಂಟಾಗುವ ನಷ್ಟದ ನಿರ್ಧರಣೆಯನ್ನು ತಾಕುವಾರು ನಿರ್ಧರಿಸಿ ಬೆಳೆವಿಮಾ ನಷ್ಟ ಪರಿಹಾರ ನೀಡಲಾಗುತ್ತದೆ. ವಿಮೆ ಮಾಡಿಸಿರುವ ರೈತರು ಇಂತಹ ಸಂದರ್ಭಗಳಲ್ಲಿ ತಕ್ಷಣ ಈ ಬಗ್ಗೆ ಸಂಬಂಧಪಟ್ಟ ಬ್ಯಾಂಕ್ ಅಥವಾ ವಿಮಾ ಸಂಸ್ಥೆಯ ಕಚೇರಿಗಳಿಗೆ ವಿಮೆ ಮಾಡಿಸಿದ ಬೆಳೆಯ ವಿವರಗಳನ್ನು ಹಾನಿಯ ವ್ಯಾಪ್ತಿ ಹಾಗೂ ಹಾನಿಗೆ ಕಾರಣವನ್ನು 72 ಗಂಟೆಯೊಳಗೆ ತಿಳಿಸಬೇಕು.
ದ್ರಾಕ್ಷಿ, ಮಾವು ಮತ್ತು ದಾಳಿಂಬೆ ಬೆಳೆಗಳಿಗೆ ವಿಮೆ ನೋಂದಣಿಗೆ ಜು.31 ಅಂತಿಮ ದಿನವಾಗಿದೆ.
ಮಾಹಿತಿಗಾಗಿ ಸಂಬಂಧಿಸಿದ ತಾಲ್ಲೂಕು ತೋಟಗಾರಿಕೆ ಕಚೇರಿಗಳು ಹಾಗೂ ಹೋಬಳಿ ಮಟ್ಟದ ತೋಟಗಾರಿಕೆ ಅಧಿಕಾರಿಗಳು ಚಿಕ್ಕಬಳ್ಳಾಪುರ 9916375216, ಚಿಂತಾಮಣಿ 9353455389, ಗೌರಿಬಿದನೂರು ಮತ್ತು ಮಂಚೇನಹಳ್ಳಿ 7204462308, ಶಿಡ್ಲಘಟ್ಟ 9448825101, ಬಾಗೇಪಲ್ಲಿ ಮತ್ತು ಚೇಳೂರು 8088360992 ಮತ್ತು ಗುಡಿಬಂಡೆ 9844864957 ಸಂಪರ್ಕಿಸಬಹುದು ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.