ADVERTISEMENT

ಶಿಡ್ಲಘಟ್ಟ: ಹಳೆಯ ವಿದ್ಯಾರ್ಥಿಗಳಿಂದ ದ್ರಾಕ್ಷಿ ಖರೀದಿ

ರೈತರ ಆತಂಕ ದೂರ ಮಾಡುವ ಪ್ರಯತ್ನ, ಗ್ರಾಹಕರಿಗೆ ನೇರ ಮಾರಾಟ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2020, 17:01 IST
Last Updated 7 ಏಪ್ರಿಲ್ 2020, 17:01 IST
ಭಕ್ತರಹಳ್ಳಿ ಮೂಲದ ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದ ಹಳೆಯ ವಿದ್ಯಾರ್ಥಿಗಳು ಜಿಲ್ಲೆಯ ರೈತರು ಬೆಳೆದ ದ್ರಾಕ್ಷಿ ಖರೀದಿಸಿರುವುದು
ಭಕ್ತರಹಳ್ಳಿ ಮೂಲದ ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದ ಹಳೆಯ ವಿದ್ಯಾರ್ಥಿಗಳು ಜಿಲ್ಲೆಯ ರೈತರು ಬೆಳೆದ ದ್ರಾಕ್ಷಿ ಖರೀದಿಸಿರುವುದು   

ಶಿಡ್ಲಘಟ್ಟ: ದ್ರಾಕ್ಷಿ ಕೊಳ್ಳುವವರಿಲ್ಲದೆ ಕಂಗಾಲಾದ ರೈತರ ನೆರವಿಗೆ ತಾಲ್ಲೂಕಿನ ಭಕ್ತರಹಳ್ಳಿ ಮೂಲದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳು ಧಾವಿಸಿದ್ದಾರೆ.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ರೈತರಿಗೆ ಗ್ರಾಹಕರೊಡನೆ ನೇರ ಸಂಪರ್ಕವಿಲ್ಲ. ಹೀಗಾಗಿ ದಲ್ಲಾಳಿಗಳ ಮೇಲೆ ಅವಲಂಭಿತರಾಗಿದ್ದ ರೈತರು ದಿಕ್ಕು ತೋಚದಂತಾಗಿದ್ದರು. ಈ ಸಮಸ್ಯೆಗೆ ಪರಿಹಾರ ದೊರಕಿಸಿಕೊಡಲು ಹಳೆಯ ವಿದ್ಯಾರ್ಥಿಗಳು ಪ್ರಯತ್ನಿಸಿದ್ದಾರೆ.

‘ಆರಂಭದಲ್ಲಿ ಬೆಂಗಳೂರಿನ ವಿವಿಧ ಬಡಾವಣೆ ನಿವಾಸಿಗಳ ಸಂಘಗಳೊಂದಿಗೆ ಮಾತುಕತೆ ನಡೆಸಿ ರೈತರಿಗೆ ನೆರವಾಗುವಂತೆ ಮನವಿ ಮಾಡಿದೆವು. ಅದೇ ರೀತಿ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರೊಡನೆ ಚರ್ಚಿಸಿ ಅವರಿಗೂ ನಷ್ಟವಾಗದಂತೆ ಗ್ರಾಹಕರಿಗೂ ಕೈಗೆಟಕುವ ಬೆಲೆಯಲ್ಲಿ ಲಭ್ಯವಾಗುವಂತೆ ಪ್ರತಿ ಕೆ.ಜಿ. ಶರದ್ ತಳಿಯ ದ್ರಾಕ್ಷಿಗೆ ₹55 ರೂಪಾಯಿಯಂತೆ ಮಾರಾಟ ಮಾಡಲು ವ್ಯವಸ್ಥೆಗೊಳಿಸಿದೆವು’ ಎಂದು ಅಂಬರೀಷ್ ತಿಳಿಸಿದರು.

ADVERTISEMENT

ಹಳೆಯ ವಿದ್ಯಾರ್ಥಿಗಳು ಕೊರೊನಾ ಸೋಂಕು ತಡೆಗಟ್ಟಲು ಗ್ರಾಹಕರು ಸಾಮಾಜಿಕ ಅಂತರವನ್ನೂ ಕಾಪಾಡುವಲ್ಲಿ ಜಾಗ್ರತೆ ವಹಿಸಿದ್ದಾರೆ. ಈ ವ್ಯವಸ್ಥೆಯು ಲಾಕ್ ಡೌನ್ ಮುಗಿಯುವವರೆಗೂ ಮುಂದುವರೆಯಲಿದೆ. ಈ ಮೊದಲು ಹೆಚ್ಚಿನ ಲಾಭ ಮಧ್ಯವರ್ತಿಗಳ ಪಾಲಾಗುತ್ತಿತ್ತು. ನೇರ ಮಾರಾಟದಿಂದ ಕಡಿಮೆ ಬೆಲೆಯಲ್ಲಿ ತಾಜಾ ಹಣ್ಣುಗಳು ಸಿಗುತ್ತಿರುವುದರಿಂದ ಗ್ರಾಹಕರು ಸಹ ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಇದೇ ರೀತಿ ಹೆಬ್ಬಾಳ ಕೆಂಪಾಪುರ ಬಡಾವಣೆ ನಿವಾಸಿಗಳೊಂದಿಗೂ ಮಾತುಕತೆಯಾಗಿದೆ. ವಿವಿಧ ಬಡಾವಣೆ ನಿವಾಸಿಗಳು ಈ ವ್ಯವಸ್ಥೆಗೆ ಕೈ ಜೋಡಿಸುವುದಾಗಿ ಹಳೆಯ ವಿದ್ಯಾರ್ಥಿಗಳಿಗೆ ಭರವಸೆ ನೀಡಿದ್ದಾರೆ. ಹಾಗಾಗಿ ಬುಧವಾರದಿಂದ ಅಲ್ಲಿಯೂ ಮಾರಾಟಕ್ಕೆ ವ್ಯವಸ್ಥೆಗೊಳಿಸಲಾಗಿದೆ ಎಂದು ತಿಳಿಸಿದರು.

ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಡಾ. ಕೆ. ನಾರಾಯಣ ಗೌಡ, ಸದಸ್ಯರಾದ ಡಾ. ಬಿ.ಕೆ. ಕೃಷ್ಣಮೂರ್ತಿ, ಡಾ.ಗೋಪಾಲ್, ಡಾ. ಕುಮಾರ್, ಭಕ್ತರಹಳ್ಳಿ ಅಂಬರೀಷ್ ಹಾಗೂ ನಿವಾಸಿಗಳ ಸಂಘದ ಸಂತೋಷ್, ಸಂತೆ ನಾರಾಯಣಸ್ವಾಮಿ ಹಾಜರಿದ್ದರು.

ಕಡಿಮೆ ಬೆಲೆಗೆ ಮಾರಾಟ
ಮೊದಲ ಪ್ರಯತ್ನವಾಗಿ ಮಂಗಳವಾರ ಬೆಂಗಳೂರಿನ ಸಹಕಾರ ನಗರ ನಿವಾಸಿಗಳ ಸಂಘದ ಸಹಯೋಗದಲ್ಲಿ ಗ್ರಾಹಕರಿಗೆ ನೇರವಾಗಿ ಕಡಿಮೆ ಬೆಲೆಯಲ್ಲಿ ದ್ರಾಕ್ಷಿ ಹಣ್ಣು ಮಾರಾಟ ಮಾಡಲು ಚಾಲನೆ ನೀಡಲಾಯಿತು. ಇದೇ ಹಣ್ಣಿಗೆ ಮಾರಾಟ ಕೇಂದ್ರಗಳಲ್ಲಿ ₹100 ರಿಂದ ₹120 ಬೆಲೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.