ಚಿಂತಾಮಣಿ: ಕೈವಾರದ ಯೋಗಿ ನಾರೇಯಣ ಮಠದಲ್ಲಿ ಗುರುಪೂರ್ಣಿಮೆ ಪ್ರಯುಕ್ತ ಹಮ್ಮಿಕೊಂಡಿರುವ ಗುರುಪೂಜಾ-ಸಂಗೀತೋತ್ಸವಕ್ಕೆ ಶುಕ್ರವಾರ ವಿಧ್ಯುಕ್ತ ಚಾಲನೆ ದೊರೆಯಿತು.
ಗುರುಪೂಜಾ ಮಹೋತ್ಸವದ ಅಂಗವಾಗಿ ದೇವಾಲಯವನ್ನು ವಿವಿಧ ಬಗೆಯ ಹೂ, ಹಣ್ಣುಗಳಿಂದ ಅಲಂಕರಿಸಲಾಗಿದೆ. ಮಂಗಳವಾದ್ಯಗಳೊಂದಿಗೆ ಗೋಪೂಜೆ ನೆರವೇರಿಸಿ ಕೈವಾರ ತಾತಯ್ಯನವರ ಪ್ರಥಮ ದರ್ಶನ ಪೂಜೆ ನೆರವೇರಿಸಲಾಯಿತು. ತಾತಯ್ಯನವರ ಮೂಲ ವಿಗ್ರಹವನ್ನು ವಿಶೇಷವಾಗಿ ಹೂಗಳಿಂದ ಅಲಂಕರಿಸಲಾಗಿತ್ತು.
ಯೋಗಿನಾರೇಯಣ ಸಭಾಂಗಣದಲ್ಲಿ ಸಂಗೀತ ಕಛೇರಿಗಳನ್ನು ವ್ಯವಸ್ಥೆ ಮಾಡಲಾಗಿದೆ. ವೇದಿಕೆಯನ್ನು ಅಮರನಾರೇಯಣಸ್ವಾಮಿ ವೇದಿಕೆ ಮತ್ತು ಭೀಮಲಿಂಗೇಶ್ವರ ವೇದಿಕೆ ಎಂದು ವಿಂಗಡಿಸಿ ಎರಡು ಬದಿಯಲ್ಲಿ ಸಂಗೀತಗಾರರು ಕುಳಿತು ಸಂಗೀತ ಸಮರ್ಪಣೆ ಮಾಡುವ ವ್ಯವಸ್ಥೆ ಮಾಡಲಾಗಿದೆ.
ಅಲಂಕೃತ ಪಲ್ಲಕ್ಕಿಯಲ್ಲಿ ತಾತಯ್ಯ ಅವರ ಮೂರ್ತಿಯನ್ನು ದೇವಾಲಯದಿಂದ ಮಂಗಳವಾದ್ಯಗಳ ಸಮೇತ ಸಂಗೀತ ಸಭಾಂಗಣಕ್ಕೆ ಕರೆತರಲಾಯಿತು. ಮೂರ್ತಿಯನ್ನು ಅಲಂಕೃತ ಪೀಠದಲ್ಲಿ ಆಸೀನಗೊಳಿಸಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಮೂರು ದಿನಗಳ ಕಾಲ ನಡೆಯುವ ಗುರುಪೂಜಾ ಸಂಗೀತೋತ್ಸವಕ್ಕೆ ಧರ್ಮಾಧಿಕಾರಿ ಎಂ.ಆರ್. ಜಯರಾಮ್ ಅವರು ಚಾಲನೆ ನೀಡಿದರು.
ಮೊದಲಿಗೆ ಎಂ.ಆರ್.ಜಯರಾಮ್ ನೇತೃತ್ವದಲ್ಲಿ ಸಂಕೀರ್ತನೆ ಸಮರ್ಪಿಸಲಾಯಿತು. ನಂತರ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ವಿದ್ವಾಂಸರು ಮತ್ತು ಸ್ಥಳೀಯ ನಾದಸ್ವರ, ತವಿಲ್ ವಾದಕರು ಸಂಗೀತ ಸಮರ್ಪಿಸಿದರು.
ಮಧ್ಯಾಹ್ನ ನಡೆದ ಸಂಗೀತ ಕಾರ್ಯಕ್ರಮಗಳಲ್ಲಿ ಶ್ರೀನಿವಾಸ್, ಡಿ.ವಿ.ವೆಂಕಟೇಶ್, ಎಂ.ಗಾಯತ್ರಿ, ಲೀಲಾ ಲಕ್ಷ್ಮಿನಾರಾಯಣ್, ಕೈವಾರ ರಾಮನ್ನ, ಕರಿಯಣ್ಣನವರ್ ತಂಡ, ಸಿ.ಆರ್.ನಟರಾಜ್, ವಿದ್ಯಾಲತಾ, ಲಕ್ಷ್ಮಿ ಕೆಂಪರಾಜ್, ಶಿಲ್ಪಾ ಶಶಿಧರ್, ವಿವೇಕ್ ಸದಾಶಿವಂ ಮತ್ತಿತರು ಸಂಗೀತ ಕಛೇರಿ ನಡೆಸಿಕೊಟ್ಟರು.
ಸಂಜೆ ಪಿ.ಜೆ.ಬ್ರಹ್ಮಾಚಾರಿ ತಂಡದಿಂದ ಪಿಟೀಲು ಸೋಲೋ, ಅದಿತಿ ಪ್ರಹ್ಲಾದ್, ವಿನಯ್‍ಶರ್ವ, ಲಕ್ಷ್ಮಿ ಹೊಸೂರು, ಡಿ.ಆರ್.ರಾಜಪ್ಪ ಕೋಲಾರ ತಂಡದಿಂದ ಗಾಯನ ಹಾಗೂ ಭವ್ಯ ಮಂಜುನಾಥ್ ತಂಡದಿಂದ ಭರತನಾಟ್ಯ ಕಾರ್ಯಕ್ರಮಗಳು ನಡೆಯಿತು.
ಗುರುಪೂರ್ಣಿಯ ಕಾರಣ ಕೈವಾರ ಗ್ರಾಮ ನಳನಳಿಸುತ್ತಿದೆ. ಅಪಾರ ಸಂಖ್ಯೆಯ ಭಕ್ತರು ಮಠದತ್ತ ಧಾವಿಸುತ್ತಿದ್ದಾರೆ.
ಇಂದಿನ ಕಾರ್ಯಕ್ರಮ ಶನಿವಾರ ಬೆಳಿಗ್ಗೆ ನಾದಸ್ವರ ವಾದನ ನಡೆಯುತ್ತದೆ. ನಂತರ ಮಾಲೂರು ಮಂಜುನಾಥ್ ಎಂ.ವಿ.ಶ್ರೀನಿವಾಸಮೂರ್ತಿ ತಿರುಪತಿ ಬಿ.ರಘುನಾಥ್ ಕೆ.ಎಸ್.ಶ್ವೇತಾ ಮರಕತವಲ್ಲಿ ಮುರಳಿ ವಿಷ್ಣು ವೆಂಕಟೇಶ್ ಜಿ.ಎಸ್.ಬ್ರಹ್ಮೇಂದ್ರ ಎ.ವಿ.ವಿಶ್ವನಾಥ್ ಕೃಷ್ಣ ಹೊಸೂರು ಲಾವಣ್ಯ ರೂಪಕಲಾ ಅಪರ್ಣ ಕೃಷ್ಣಮೂರ್ತಿ ವಾನರಾಶಿ ಬಾಲಕೃಷ್ಣ ಭಾಗವತರ್ ಮತ್ತಿತರರು ಸಂಗೀತ ಕಛೇರಿ ನಡೆಸಿಕೊಡುವರು. ಸಂಜೆ ಚೆನ್ನೈನ ಪದ್ಮಶ್ರೀ ಎ.ಕನ್ಯಾಕುಮಾರಿ ಅವರ ಪಿಟೀಲು ಸಿ.ಕೆ.ಪತಂಜಲಿ ತಂಡದ ಕೊಳಲು ಕೇರಳದ ಸೂರ್ಯಗಾಯತ್ರಿ ಗಾಯನ ಸಿಕ್ಕಿಲ್ ಗುರುಚರಣ್ ತಂಡದ ಗಾಯನ ಬೆಂಗಳೂರಿನ ರುದ್ರಾಕ್ಷ ನಾಟ್ಯಾಲಯದಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ. ಚೆನ್ನೈನ ಕೆ.ವಿ.ಪ್ರಸಾದ್ ಬಿ.ಹರಿಕುಮಾರ್ ಬೆಂಗಳೂರಿನ ಪ್ರವೀಣ್ ಅವರ ಮೃದಂಗ ವಾದನವಿರುತ್ತದೆ. ಡಾ.ಎ.ವಿಜಯ್ ಕಾರ್ತೀಕೇಯನ್ ವಿ.ಪ್ರಕಾಶ್ ಇಳಯರಾಜ ಪಿ.ಎಂ.ರಂಜಿತ್ ವಿನಾಯಕ್ ಬಿ.ಮುತ್ತುಕುಮಾರ್ ಮಲೈ ಎಂ.ಕಾರ್ತೀಕೇಯನ್ ಜಿ.ವಿನೋದ್ ಕುಮಾರ್ ಟಿ.ಜಿ.ಗೋವಿಂದರಾಜು ಟಿ.ಜಿ.ಮುತ್ತುಕುಮಾರ್ ಅವರಿಂದ ವಿಶೇಷ ನಾದಸ್ವರ ತವಿಲ್ ವಾದನ ಜರುಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.