ADVERTISEMENT

ಶಿಡ್ಲಘಟ್ಟ | ಒಂದು ಗುರುಭವನಕ್ಕೆ ವಿವಿಧೆಡೆ ಭೂಮಿಪೂಜೆ!

10 ವರ್ಷದಿಂದಲೂ ಶಂಕುಸ್ಥಾಪನೆಗೆ ಸೀಮಿತವಾದ ಗುರುಭವನ

ಡಿ.ಜಿ.ಮಲ್ಲಿಕಾರ್ಜುನ
Published 8 ಫೆಬ್ರುವರಿ 2026, 4:17 IST
Last Updated 8 ಫೆಬ್ರುವರಿ 2026, 4:17 IST
ಶಿಡ್ಲಘಟ್ಟದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಹಿಂದೆ ಗುರುತಿಸಲಾಗಿದ್ದ ಜಾಗ ಬಿಟ್ಟು ಬೇರೆಡೆ ಶುಕ್ರವಾರ ಗುದ್ದಲಿಪೂಜೆ 
ಶಿಡ್ಲಘಟ್ಟದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಹಿಂದೆ ಗುರುತಿಸಲಾಗಿದ್ದ ಜಾಗ ಬಿಟ್ಟು ಬೇರೆಡೆ ಶುಕ್ರವಾರ ಗುದ್ದಲಿಪೂಜೆ    

ಶಿಡ್ಲಘಟ್ಟ: ನಗರದಲ್ಲಿ ಸುಂದರವಾದ ಗುರುಭವನ ನಿರ್ಮಾಣಕ್ಕೆ 2016ರಲ್ಲಿ ಅಂದಿನ ಶಾಸಕ ಎಂ. ರಾಜಣ್ಣ ಅವರು ಮೊದಲ ಬಾರಿಗೆ ಭೂಮಿಪೂಜೆ ನೆರವೇರಿಸಿದ್ದರು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಗುರುಭವನ ನಿರ್ಮಾಣಗೊಂಡು ಉದ್ಘಾಟನೆಯನ್ನೂ ಮಾಡಬಹುದಿತ್ತು. 

ಆದರೆ, ಆ ನಂತರ ಶಾಸಕರಾಗಿ ಆಯ್ಕೆಯಾದ ವಿ. ಮುನಿಯಪ್ಪ ಅವರು ಎಂ. ರಾಜಣ್ಣ ಅವಧಿಯಲ್ಲಿ ಗುರುಭವನಕ್ಕಾಗಿ ಭೂಮಿಪೂಜೆ ನೆರವೇರಿಸಿದ್ದ ಜಾಗವನ್ನು ಬಿಟ್ಟು ಅದರ ಪಕ್ಕದಲ್ಲಿ 2022ರಲ್ಲಿ ಮತ್ತೆ ಶಂಕುಸ್ಥಾಪನೆ ನೆರವೇರಿಸಿದರು. ಆದರೆ, ಗುರುಭವನದ ಕಾಮಗಾರಿ ಮಾತ್ರ ನಡೆಯಲೇ ಇಲ್ಲ ಎಂಬುದು ಸ್ಥಳೀಯರ ವಾದ. 

ಆ ಬಳಿಕ ಶಾಸಕರಾಗಿ ಆಯ್ಕೆಯಾದ ಪ್ರಸ್ತುತ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಡಾ.ಎಂ.ಸಿ. ಸುಧಾಕರ್ ಅವರು 2025ರ ಏಪ್ರಿಲ್‌ನಲ್ಲಿ ಅಂಬೇಡ್ಕರ್ ಭವನ, ಸರ್ಕಾರಿ ನೌಕರರ ಭವನ ಸೇರಿ ಹಲವು ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದ್ದಾರೆ. ಜೊತೆಗೆ ಪೂರ್ಣಗೊಂಡ ವಿವಿಧ ಕಾರ್ಯಕ್ರಮಗಳ ಸಾಮೂಹಿಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಮತ್ತೊಮ್ಮೆ ಗುರುಭವನಕ್ಕೆ ಭೂಮಿಪೂಜೆ ನೆರವೇರಿಸಿದ್ದಾರೆ. ಆದರೆ, ಯಾವ ಜಾಗದಲ್ಲಿ ಗುರುಭವನ ನಿರ್ಮಾಣ ಮಾಡಲಾಗುವುದು ಎಂಬುದನ್ನು ಮಾತ್ರ ತಿಳಿಸಿಲ್ಲ. 

ADVERTISEMENT

ಅಲ್ಲದೆ, 2026ರ ಫೆ.6ರಂದು ಗುರುಭವನ ನಿರ್ಮಾಣ ಸಮಿತಿ ಅಧ್ಯಕ್ಷ ಬಿಇಒ ಸಿ.ಎ. ನರೇಂದ್ರಕುಮಾರ್ ಮತ್ತು ಇತರ ಪದಾಧಿಕಾರಿಗಳು ಸೇರಿ ಯಾವುದೇ ಜನಪ್ರತಿನಿಧಿಗಳನ್ನು ಕರೆಯದೆ ಮತ್ತೊಂದು ಜಾಗದಲ್ಲಿ ಗುರುಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ್ದಾರೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ. 

ಗುರು ಭವನ ನಿರ್ಮಾಣಕ್ಕಾಗಿ ಒಂದು ಪಕ್ಷದ ಶಾಸಕರ ಅವಧಿಯಲ್ಲಿ ಗುರುತಿಸಲಾಗಿದ್ದ ಜಾಗವನ್ನು ಮತ್ತೊಮ್ಮೆ ಅಧಿಕಾರಕ್ಕೆ ಬರುವ ಅನ್ಯ ಪಕ್ಷದ ಶಾಸಕರು ಬದಲಿಸಲಾಗುತ್ತಿದೆ. ಈ ಇಬ್ಬರು ಶಾಸಕರ ಅವಧಿಯಲ್ಲಿ ಗುರುತಿಸಲಾಗಿದ್ದ ಜಾಗವನ್ನು ಈಗಿನ ಶಾಸಕರು ಬದಲಿಸಿರುವುದರ ಹಿಂದೆ ರಾಜಕೀಯ ಹುನ್ನಾರವಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. 

ಶಾಲಾ ಶಿಕ್ಷಕರ ಸಂಘದಲ್ಲೂ ಬೇರೆ ಬೇರೆ ಪಕ್ಷದಲ್ಲಿ ಗುರ್ತಿಸಿಕೊಂಡ ಶಿಕ್ಷಕ ಪದಾಧಿಕಾರಿಗಳಿದ್ದು ಶಿಕ್ಷಕರ ಸಂಘದ ಅಧ್ಯಕ್ಷ ಸ್ಥಾನ ಹಿಡಿದವರು ಶಿಕ್ಷಕರ ಸಂಘದ ಹಿತಕ್ಕಿಂತಲೂ ತಮ್ಮ ತಮ್ಮ ಬೆಂಬಲಿತ ಶಾಸಕರ ಮರ್ಜಿಯಂತೆ ನಡೆದುಕೊಳ್ಳುತ್ತಿರುವ ಕಾರಣಕ್ಕೆ ಗುರುಭವನ ನಿರ್ಮಾಣದ ಜಾಗ ಬದಲಾಗುತ್ತಲೆ ಇದೆ. ಗುರುಗಳಲ್ಲಿಯೇ ರಾಜಕೀಯ ಗುಂಪುಗಳಾಗಿ ಗುರುಭವನ ಅವರ ನಡುವಿನ ಚೆಂಡಾಗಿ ಪರಿಣಮಿಸಿದೆ ಎಂದು ಸಾರ್ವಜನಿಕರು ಮಾತನಾಡುವಂತಾಗಿದೆ.

ಹಿಂದೆಯೇ ಭೂಮಿಪೂಜೆ ನೆರವೇರಿದೆ ನಗರದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಗುರುಭವನ ನಿರ್ಮಾಣಕ್ಕೆ ಈ ಹಿಂದೆ ಹಾಕಲಾಗಿದ್ದ ಪಾಯದಿಂದ ಮಕ್ಕಳ ಓಡಾಟ ಮತ್ತು ಆಟವಾಡಲು ತೊಂದರೆಯಾಗುತ್ತಿದೆ ಎಂಬುದಾಗಿ ಎಸ್‌ಡಿಎಂಸಿ ಪದಾಧಿಕಾರಿಗಳು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಯಾರಿಗೂ ತೊಂದರೆಯಾಗದಂತೆ ಪ್ರೌಢಶಾಲೆಯ ಬಲಭಾಗದಲ್ಲಿ ಗುರುಭವನ ನಿರ್ಮಾಣ ಮಾಡುವಂತೆ ಸ್ಥಳೀಯ ಶಾಸಕರು ಸೂಚಿಸಿದ್ದರು. ಈ ಪ್ರಕಾರ ಅಲ್ಲಿಯೇ ಗುರುಭವನ ನಿರ್ಮಿಸಲಾಗುತ್ತದೆ. ಇದಕ್ಕೆ ಈ ಹಿಂದೆಯೇ ಭೂಮಿಪೂಜೆ ನೆರವೇರಿಸಲಾಗಿದೆ. ಹೀಗಾಗಿ ಯಾರನ್ನೂ ಆಹ್ವಾನಿಸದೆ ನಾವೇ ಪೂಜೆ ಮಾಡಿದ್ದೇವೆ. ಇದರಲ್ಲಿ ರಾಜಕೀಯವೇನೂ ಇಲ್ಲ. ಸಿ.ಎ. ನರೇಂದ್ರಕುಮಾರ್ ಕ್ಷೇತ್ರ ಶಿಕ್ಷಣಾಧಿಕಾರಿ ಶಿಡ್ಲಘಟ್ಟ