ADVERTISEMENT

ಚಿಕ್ಕಬಳ್ಳಾಪುರ | ಹೆಲ್ಮೆಟ್ ಚಿಕ್ಕದು ರಕ್ಷಣೆ ದೊಡ್ಡದು : ಟಿ.ಪಿ. ರಾಮಲಿಂಗೇಗೌಡ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ರಸ್ತೆ ನಿಯಮ ಪಾಲನೆಯ ಜಾಗೃತಿ ಜಾಥಾ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 7:30 IST
Last Updated 6 ಡಿಸೆಂಬರ್ 2025, 7:30 IST
ಚಿಕ್ಕಬಳ್ಳಾಪುರದಲ್ಲಿ ರಸ್ತೆ ನಿಯಮ ಪಾಲನೆಯ ಕುರಿತ ಅರಿವು ಜಾಗೃತಿ ಜಾಥಾ ನಡೆಯಿತು
ಚಿಕ್ಕಬಳ್ಳಾಪುರದಲ್ಲಿ ರಸ್ತೆ ನಿಯಮ ಪಾಲನೆಯ ಕುರಿತ ಅರಿವು ಜಾಗೃತಿ ಜಾಥಾ ನಡೆಯಿತು   

ಚಿಕ್ಕಬಳ್ಳಾಪುರ: ಜೀವನ ಮುಂದುವರಿಯಬೇಕಾದರೆ ಜೀವ ಇರಬೇಕು. ಜೀವ ಇರಬೇಕಾದರೆ ನಾವೆಲ್ಲರೂ ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಟಿ.ಪಿ. ರಾಮಲಿಂಗೇಗೌಡ ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಪೊಲೀಸ್, ಶಿಕ್ಷಣ ಇಲಾಖೆ, ಜಿಲ್ಲಾ ವಕೀಲರ ಸಂಘವು ಶುಕ್ರವಾರ ಜಿಲ್ಲಾ ನ್ಯಾಯಾಲಯದ ಮುಂಭಾಗದಲ್ಲಿ ಆಯೋಜಿಸಿದ್ದ ರಸ್ತೆ ನಿಯಮ ಪಾಲನೆಯ ಕುರಿತ ಅರಿವು ಜಾಗೃತಿ ಜಾಥಾಕ್ಕೆ ನಿಶಾನೆ ನೀಡಿ ಮಾತನಾಡಿದರು.

ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವ ನಡಾವಳಿಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ದ್ವಿಚಕ್ರ ವಾಹನ ಸವಾರಿ ಹಾಗೂ ಹಿಂಬದಿ ಸವಾರರಾಗಿ ಪ್ರಯಾಣಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಹೆಲ್ಮೆಟ್ ಚಿಕ್ಕದು ರಕ್ಷಣೆ ದೊಡ್ಡದು ಎಂಬ ಸತ್ಯ ಅರಿಯಬೇಕು ಎಂದು ಸಲಹೆ ನೀಡಿದರು.

ADVERTISEMENT

ಅಪಘಾತಗಳ ಸಂದರ್ಭದಲ್ಲಿ ಹೆಲ್ಮೆಟ್ ಧರಿಸಿದ ಕಾರಣದಿಂದ ಜೀವ ಉಳಿದ ಬೇಕಾದಷ್ಟು ಉದಾಹರಣೆಗಳು ಇವೆ. ಹೀಗಾಗಿ ಹೆಲ್ಮೆಟ್‌ ಬಗ್ಗೆ ನಿರ್ಲಕ್ಷ್ಯ ಮಾಡಬಾರದು. ಒಂದು ಕುಟುಂಬದಲ್ಲಿ ದುಡಿಯುವ ವ್ಯಕ್ತಿಯ ಆರೋಗ್ಯದ ಮೇಲೆ ಆ ಕುಟುಂಬದ ಭವಿಷ್ಯ ನಿಂತಿರುತ್ತದೆ. ಆ ಕುಟುಂಬದ ಇತರ ಸದಸ್ಯರು ದುಡಿಯುವ ವ್ಯಕ್ತಿಯ ಮೇಲೆ ಅವಲಂಬಿತರಾಗಿರುತ್ತಾರೆ ಎಂದರು.

ದುಡಿಯುವ ವ್ಯಕ್ತಿಗೆ ಪ್ರಾಣ ಹಾನಿಯಾದರೆ ಆ ಕುಟುಂಬ ಬೀದಿಗೆ ಬರುತ್ತದೆ ಎಂಬುದನ್ನು ಪ್ರತಿಯೊಬ್ಬ ಚಾಲಕ ಮತ್ತು ಸವಾರ ತಮ್ಮ ಮನಸ್ಸಿನಲ್ಲಿ ಸದಾ ಇಟ್ಟುಕೊಳ್ಳಬೇಕು. ಯಾವುದೇ ಪ್ರಾಣಹಾನಿ ಆಗದಂತೆ ವಾಹನ ಸಂಚಾರ ಮಾಡುವಾಗ ಸಂಚಾರ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಚಾಲನೆಯಲ್ಲಿ ನಿರ್ಲಕ್ಷ್ಯ ವಹಿಸಿದರೆ ಅಪಾಯ ಎದುರಿಸಬೇಕಾಗುತ್ತದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಮಾತನಾಡಿ, ‘ಜೀವವಿಲ್ಲದ ಮೊಬೈಲ್‌ ಫೋನ್‌ಗೆ ಸ್ಕ್ರೀನ್ ಗಾರ್ಡ್ ಹಾಕಿಸಿ ಸುರಕ್ಷಿತವಾಗಿ ಕಾಪಾಡುತ್ತೇವೆ. ಆದರೆ ನಮ್ಮ ಅಮೂಲ್ಯವಾದ ಜೀವ ಕಾಪಾಡುವ ಹೆಲ್ಮೆಟ್ ಬಳಸುವುದನ್ನು ಮರೆಯುತ್ತೇವೆ. ಇಂತಹ ನಿರ್ಲಕ್ಷ್ಯ ಯಾವುದೇ ಸವಾರರಿಗೆ, ಚಾಲಕರಿಗೆ ಒಳಿತಲ್ಲ. ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು’ ಎಂದರು.

‘ಸಂಚಾರಿ ನಿಯಮ ಪಾಲಿಸುವುದು ನಮ್ಮೆಲ್ಲರ ಕರ್ತವ್ಯ. ಇದರಿಂದ ಅಪಘಾತಗಳನ್ನು ಕಡಿಮೆ ಮಾಡಬಹುದು. ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಿದರೆ ಯಾವುದೇ ಪ್ರಾಣ ಹಾನಿ ಆಗದಂತೆ ತಪ್ಪಿಸಿಕೊಳ್ಳಬಹುದು. ಸಾರ್ವಜನಿಕರ ಹಿತದೃಷ್ಟಿಯಿಂದ ಜನರ ಪ್ರಾಣ ರಕ್ಷಿಸಲು ಕಳೆದ 12 ವರ್ಷದಿಂದ ಹೋಟೆಲ್ ರಾಮಣ್ಣ ಪ್ರತಿ ವರ್ಷ 100 ಹೆಲ್ಮೆಟ್‌ಗಳನ್ನು ಉಚಿತವಾಗಿ ವಿತರಿಸುವ ಮೂಲಕ ಸಾಮಾಜಿಕ ಜವಾಬ್ದಾರಿ ತೋರಿದ್ದಾರೆ’ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಮಾತನಾಡಿ, ಸುರಕ್ಷತೆ ದೃಷ್ಟಿಯಿಂದ ಜಾರಿಗೆ ತಂದಿರುವ ಸಂಚಾರ ನಿಯಮಗಳ ಬಗ್ಗೆ ಮಾಹಿತಿ ಹಾಗೂ ತಿಳಿವಳಿಕೆ ಇದ್ದರೂ ಕೂಡ ಸಾರ್ವಜನಿಕರು ಪಾಲಿಸುತ್ತಿಲ್ಲ. ಅಪಘಾತಗಳನ್ನು ತಪ್ಪಿಸಲು ಸವಾರರ ಹಾಗೂ ಚಾಲಕರ ಮನಸ್ಥಿತಿ ಬದಲಾವಣೆಯಾಗಬೇಕು ಎಂದು ಹೇಳಿದರು.

ಬೆಂಗಳೂರಿನಲ್ಲಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸುತ್ತಾರೆ. ಆದರೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹೆಲ್ಮೆಟ್ ಧರಿಸಿ ಸಂಚರಿಸಲು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇಂತಹ ನಿರ್ಲಕ್ಷ್ಯ ಸಹಿಸುವುದಿಲ್ಲ. ನಿಯಮ ಉಲ್ಲಂಘಿಸಿದವರ ವಿರುದ್ಧ ದಂಡ ಹಾಗೂ ಕಾನೂನು ಕ್ರಮ ಪ್ರಯೋಗಿಸಲಾಗುತ್ತದೆ. ಸಂಚಾರಿ ನಿಯಮಗಳನ್ನು ಪಾಲಿಸಿ ಜಾಗೃತಿಯಿಂದ ವಾಹನ ಚಾಲನೆ ಮಾಡಬೇಕು. ರಸ್ತೆಯಲ್ಲಿ ಸಂಚರಿಸುವಾಗ ಎಲ್ಲಾ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ತಮ್ಮ ಜೀವ ರಕ್ಷಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಬಿ. ಶಿಲ್ಪಾ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಗನಾಥ್ ರೈ, ಜಿಲ್ಲಾ ವಕೀಲ ಸಂಘದ ಅಧ್ಯಕ್ಷ ಕೆ.ವಿ ಅಭಿಲಾಷ್ ಹಾಗೂ ಪೊಲೀಸ್ ಸಿಬ್ಬಂದಿ, ಬೆಸ್ಟ್ ಪಿ.ಯು ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ನಿಯಮ ಉಲ್ಲಂಘನೆ; ಹೆಲ್ಮೆಟ್ ಹೂ ವಿದ್ಯಾರ್ಥಿಗಳು ರಸ್ತೆ ಸಂಚಾರ ನಿಯಮಗಳ ಜಾಗೃತಿ ಕುರಿತ ಬ್ಯಾನರ್ ಮತ್ತು ನಾಮಫಲಕಗಳನ್ನು ಹಿಡಿದು ಜಿಲ್ಲಾ ನ್ಯಾಯಾಲಯದ ಆವರಣದಿಂದ ಶಿಡ್ಲಘಟ್ಟ ವೃತ್ತದವರೆಗೆ ಸಂಚರಿಸಿದರು. ಅಲ್ಲಿ ಮಾನವ ಸರಪಳಿ ನಿರ್ಮಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ಜಾಥಾ ಕಾರ್ಯಕ್ರಮವು ಜಿಲ್ಲಾ ನ್ಯಾಯಲಯ ಆವರಣದಿಂದ ಪ್ರಾರಂಭವಾಗಿ ಶಿಡ್ಲಘಟ್ಟ ವೃತ್ತದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿತು. ಅಂಬೇಡ್ಕರ್ ಭವನದಲ್ಲಿ ಮುಕ್ತಾಯವಾಯಿತು. ಈ ವೇಳೆ ಹೆಲ್ಮೆಟ್ ಇಲ್ಲದೆ ಸಂಚರಿಸುತ್ತಿದ್ದ ವಾಹನ ಸವಾರರನ್ನು ಪೊಲೀಸ್ ಸಿಬ್ಬಂದಿ ತಡೆದು ದಂಡ ವಿಧಿಸುವ ಜೊತೆಗೆ ಉಚಿತವಾಗಿ ಹೆಲ್ಮೆಟ್ ಹಾಗೂ ಹೂ ನೀಡಿದರು. ಸಂಚಾರಿ ನಿಯಮಗಳನ್ನು ಪಾಲಿಸುವಂತೆ ತಿಳಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.