ADVERTISEMENT

ಚಿಕ್ಕಬಳ್ಳಾಪುರ: ಬಹು ವರ್ಷದ ನಂತರ ಈಡೇರುತ್ತಿದೆ ರೇಷ್ಮೆನಗರಿ ಕನಸು

ಶಿಡ್ಲಘಟ್ಟಕ್ಕೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಭೇಟಿ ಇಂದು; ₹ 2 ಸಾವಿರ ಕೋಟಿಯ ಅಭಿವೃದ್ಧಿ ಕಾಮಗಾರಿಗಳು

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 5:17 IST
Last Updated 24 ನವೆಂಬರ್ 2025, 5:17 IST
<div class="paragraphs"><p>ಕಡತ</p></div>

ಕಡತ

   

(ಸಾಂದರ್ಭಿಕ ಚಿತ್ರ)

ಚಿಕ್ಕಬಳ್ಳಾಪುರ: ರೇಷ್ಮೆ ನಗರದಿ ಖ್ಯಾತಿಯ ಶಿಡ್ಲಘಟ್ಟದ ರೈತರು, ರೀಲರ್‌ಗಳು ಸೇರಿದಂತೆ ರೇಷ್ಮೆ ವಲಯದ ಮೇಲೆ ಅವಲಂಬಿತರ ಬಹು ವರ್ಷಗಳ ಕನಸು ಈಗ ನನಸಾಗುತ್ತಿದೆ. 

ADVERTISEMENT

ರಾಜ್ಯದಲ್ಲಿಯೇ ಹೆಚ್ಚು ರೇಷ್ಮೆ ಬೆಳೆಯುವ ಮತ್ತು ವಹಿವಾಟು ನಡೆಸುವ ತಾಲ್ಲೂಕು ಎನ್ನುವ ಖ್ಯಾತಿ ಶಿಡ್ಲಘಟ್ಟಕ್ಕೆ ಇದೆ. ಇಲ್ಲಿ ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ ನಿರ್ಮಾಣವಾಗಬೇಕು ಎನ್ನುವುದು ಬಹು ವರ್ಷಗಳ ಕನಸಾಗಿತ್ತು. ಈಗ ಅದಕ್ಕೆ ಕಾಲ ಕೂಡಿದೆ. ಶಿಡ್ಲಘಟ್ಟ-ದಿಬ್ಬೂರಹಳ್ಳಿ ಮಾರ್ಗದ ವರದನಾಯಕನಹಳ್ಳಿ ಗೇಟ್ ಬಳಿ ₹ 200 ಕೋಟಿ ವೆಚ್ಚದ ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ ನಿರ್ಮಾಣವಾಗಲಿದೆ.

ಇದೇ ಸ್ಥಳದಲ್ಲಿ ಸೋಮವಾರ (ನ.24) ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಚಿವರ ದಂಡು ರೇಷ್ಮೆ ಮಾರುಕಟ್ಟೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವರು. 

ಇದಿಷ್ಟೇ ಅಲ್ಲ ಜಿಲ್ಲೆಯ ವಿವಿಧ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಅನುಷ್ಠಾನ ಆಗಬೇಕಿರುವ ₹ 1,360 ಕೋಟಿ ಕಾಮಗಾರಿಗೆ ಇಲ್ಲಿಂದಲೇ ಶಂಕುಸ್ಥಾಪನೆ ನೆರವೇರಿಸುವರು. ₹ 600‌ ಕೋಟಿಗೂ ಹೆಚ್ಚಿನ ಅಭಿವೃದ್ಧಿ ಕಾಮಗಾರಿಯನ್ನು ಸಿ.ಎಂ ಮತ್ತು ಡಿಸಿಎಂ ಉದ್ಘಾಟಿಸುವರು.

ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿಯಾದ ನಂತರ ಶಿಡ್ಲಘಟ್ಟಕ್ಕೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ. 

ಕಾರ್ಯಕ್ರಮ ನಡೆಯುವ ಸ್ಥಳವನ್ನು ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ಶಾಸಕ ರವಿಕುಮಾರ್, ಜಿಲ್ಲಾಧಿಕಾರಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಪರಿಶೀಲಿಸಿದರು. ದೊಡ್ಡ ಸಂಖ್ಯೆಯಲ್ಲಿ ಪೊಲೀಸರನ್ನೂ ನಿಯೋಜಿಸಲಾಗಿದೆ.

ಡಾ.ಎಂ.ಸಿ.ಸುಧಾಕರ್ ಮಾತನಾಡಿ, ಶಿಡ್ಲಘಟ್ಟ ಮತ್ತು ಚಿಂತಾಮಣಿಯಿಂದ ಹೆಚ್ಚು ಜನರು ಕಾರ್ಯಕ್ರಮಕ್ಕೆ ಬರುವರು. ಫಲಾನುಭವಿಗಳಿಗೆ ಸಾಂಕೇತಿಕವಾಗಿ ಸೌಲಭ್ಯಗಳನ್ನು ಇಲ್ಲಿ ವಿತರಿಸಲಾಗುವುದು ಎಂದು ಹೇಳಿದರು.

ಸರ್ಕಾರದಲ್ಲಿ ಹಣವಿಲ್ಲ. ದಿವಾಳಿ ಆಗುತ್ತದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿದ್ದವು. ಆದರೆ 16 ಬಜೆಟ್‌ಗಳನ್ನು ಸಿದ್ದರಾಮಯ್ಯ ಅವರು ಮಂಡಿಸಿದ್ದಾರೆ. ಸಂಪನ್ಮೂಲ ಕ್ರೋಡೀಕರಣದ ವಿಚಾರ ಅವರಿಗೆ ಚೆನ್ನಾಗಿ ಗೊತ್ತು. ಆ ಅನುಭವದ ಆಧಾರದಲ್ಲಿ ಹೆಚ್ಚು ಅನುದಾನ ಕೊಡುವ ಕೆಲಸ ಮಾಡಿದ್ದಾರೆ. ಗ್ಯಾರೆಂಟಿ ಯೋಜನೆಗಳ ನಡುವೆಯೂ ಅಭಿವೃದ್ಧಿ ಮಾಡಬಹುದು ಎನ್ನುವುದನ್ನು ನಮ್ಮ ಸಿಎಂ, ಡಿಸಿಎಂ ಸಾಬೀತು ಮಾಡಿದ್ದಾರೆ ಎಂದು ಹೇಳಿದರು.

‘ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆಯು ಶಿಡ್ಲಘಟ್ಟ ಜನರು ಮತ್ತು ರೈತರ ಪ್ರಮುಖ ಬೇಡಿಕೆ ಆಗಿತ್ತು. ಈ ತಾಲ್ಲೂಕಿಗೆ ಇದು ಮಹತ್ವದ ಯೋಜನೆ. ಆದ್ದರಿಂದ ಶಿಡ್ಲಘಟ್ಟದಲ್ಲಿಯೇ ಕಾರ್ಯಕ್ರಮ ನಡೆಸಲು ಮುಂದಾಗಿದ್ದೇವೆ. ಬೆಂಗಳೂರು ಉತ್ತರ ವಿವಿಯ ಎರಡನೇ ಹಂತದ ಕಾಮಗಾರಿ, ಎಚ್‌.ಎನ್.ವ್ಯಾಲಿ ಯೋಜನೆಯ ಮೂರನೇ ಹಂತದ ಕಾಮಗಾರಿಗೂ ಚಾಲನೆ ದೊರೆಯಲಿದೆ’ ಎಂದರು.

ಜಿಲ್ಲೆಯ ಇತರೆ ಕಾಮಗಾರಿಗಳಿಗೂ ಇಲ್ಲಿಂದ ಚಾಲನೆ ನೀಡಲು ಮುಖ್ಯಮಂತ್ರಿ ಅವರ ಕಚೇರಿಯಿಂದ ಸೂಚನೆ ಬಂದಿತ್ತು. ಈ ಕಾರಣದಿಂದ ಒಂದೇ ಕಡೆ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ಹೇಳಿದರು.

ಶಾಸಕ ಬಿ.ಎನ್.ರವಿಕುಮಾರ್ ಮಾತನಾಡಿ, ‘ಸಿ.ಎಂ, ಡಿಸಿಎಂ ಸೇರಿದಂತೆ ಹಲವು ಸಚಿವರು ಭಾಗವಹಿಸುವರು. ಪಕ್ಷಾತೀತವಾಗಿ ಕಾರ್ಯಕ್ರಮ ನಡೆಯಬೇಕು ಎಂದು ಹೆಜ್ಜೆ ಇಟ್ಟಿದ್ದೇವೆ. ಉಳಿದ ಸಮಸ್ಯೆಗಳನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ತಂದು ಕ್ಷೇತ್ರ ಅಭಿವೃದ್ಧಿಗೊಳಿಸಲಾಗುವುದು’ ಎಂದು ಹೇಳಿದರು.

ಶಿಡ್ಲಘಟ್ಟ ಮತ್ತು ಚಿಂತಾಮಣಿ ವಿಧಾನಸಭಾ ಕ್ಷೇತ್ರದ 50 ಸಾವಿರದಿಂದ 60 ಸಾವಿರ ಜನರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ಹೇಳಿದರು.

ಗಂಟ್ಲಮಲ್ಲಮ್ಮನಿಗಿಲ್ಲ ಭೂಮಿ ಪೂಜೆ

ಚೇಳೂರು ತಾಲ್ಲೂಕಿನ ಗಂಟ್ಲಮಲ್ಲಮ್ಮ ಅಣೆಕಟ್ಟೆ ನಿರ್ಮಾಣಕ್ಕೆ ಇಲ್ಲಿಯೇ ಭೂಮಿ ಪೂಜೆ ನೆರವೇರಿಸಲಾಗುತ್ತದೆ ಎನ್ನುವ ಮಾತುಗಳಿದ್ದವು. ಆದರೆ ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ಅವರು ಬಾಗೇಪಲ್ಲಿ ಕ್ಷೇತ್ರದಲ್ಲಿಯೇ ಕಾರ್ಯಕ್ರಮ ಮಾಡಬೇಕು ಎಂದು ಪಟ್ಟು ಹಿಡಿದ ಕಾರಣ ಶಿಡ್ಲಘಟ್ಟ ಕಾರ್ಯಕ್ರಮದಲ್ಲಿ ಗಂಟ್ಲಮಲ್ಲಮ್ಮ ಅಣೆಕಟ್ಟೆ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯುತ್ತಿಲ್ಲ. ಬಾಗೇಪಲ್ಲಿಯಲ್ಲಿ ಶಾಸಕರು ಅಣೆಕಟ್ಟೆ ನಿರ್ಮಾಣದ ಭೂಮಿಪೂಜೆ ಕಾರ್ಯಕ್ರಮ ನಡೆಸಲು ನಿಶ್ಚಯಿಸಿದ್ದಾರೆ.

ಅಲ್ಲದೆ ಚಿಕ್ಕಬಳ್ಳಾಪುರದ ಹೈಟೆಕ್ ಹೂವಿನ ಮಾರುಕಟ್ಟೆ ನಿರ್ಮಾಣದ ಕಾರ್ಯಸಾಧ್ಯತಾ ವರದಿ ಇನ್ನೂ ಕೈಸೇರದ ಕಾರಣ ಈ ಕಾಮಗಾರಿಗೂ ಭೂಮಿ ಪೂಜೆ ನಡೆಯುತ್ತಿಲ್ಲ. 

ರೇಷ್ಮೆಗೂಡಿನ ಮಾರುಕಟ್ಟೆ ಇತಿಹಾಸ

ಶಿಡ್ಲಘಟ್ಟ ತಾಲ್ಲೂಕು ರೇಷ್ಮೆ ಉತ್ಪಾದನೆಯಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರುವಾಸಿಯಾಗಿದೆ. ತಾಲ್ಲೂಕಿನಲ್ಲಿ ರೇಷ್ಮೆ ಪ್ರಮುಖ ಉದ್ಯಮವಾಗಿದೆ.  ತಾಲ್ಲೂಕಿನಾದ್ಯಂತ 4500ರಿಂದ 5000 ರೇಷ್ಮೆ ಬೆಳೆಗಾರರು 4000 ಹೆಕ್ಟೇರ್ ಪ್ರದೇಶದಲ್ಲಿ ಹಿಪ್ಪುನೇರಳೆ ಬೆಳೆಯುತ್ತಿದ್ದು ಇಲ್ಲಿನ ಹೆಚ್ಚಿನ ರೈತರು ಹಾಗೂ ರೈತ ಕುಟುಂಬಗಳಿಗೆ ರೇಷ್ಮೆ ಉದ್ಯಮವೆ ಮುಖ್ಯಕಸುಬಾಗಿದೆ.

ಈ ತಾಲ್ಲೂಕಿನಾದ್ಯಂತ 5000ಕ್ಕಿಂತ ಹೆಚ್ಚಿನ ರೀಲರ್‌ಗಳು ಹಾಗೂ ಇವರ ಕುಟುಂಬದವರು ರೇಷ್ಮೆನೂಲು ಬಿಚ್ಚಾಣಿಕೆ ಕೆಲಸವನ್ನೇ ಅವಲಂಬಿಸಿದ್ದಾರೆ. ಶಿಡ್ಲಘಟ್ಟ ತಾಲ್ಲೂಕಿನಲ್ಲಿ ದೊರೆಯುವ ಅಂತರ್ಜಲವು ರೇಷ್ಮೆನೂಲು ಬಿಚ್ಚಾಣಿಕೆಗೆ ಹೆಚ್ಚು ಉತ್ತಮವಾಗಿರುವುದರಿಂದ ಹಾಗೂ ಹೆಚ್ಚು ರೇಷ್ಮೆ ಬೆಳೆಗಾರರು ಇರುವುದನ್ನು ಮನಗಂಡ ಸರ್ಕಾರ ರೈತರಿಗೆ ಹಾಗೂ ರೀಲರ್‌ಗಳಿಗೆ ಅನುಕೂಲವಾಗುವಂತೆ 1970ರ ಅಸುಪಾಸಿನಲ್ಲಿ ಮಾರುಕಟ್ಟೆ ವ್ಯವಸ್ಥೆ ಪ್ರಾರಂಭಿಸಿತು. ರೀಲರ್‌ಗಳು ಗೂಡನ್ನು ಹರಾಜಿನ ಮೂಲಕ ಖರೀದಿಸಲು ವ್ಯವಸ್ಥೆ ಮಾಡಲಾಯಿತು.

ಇದರಿಂದ ರೈತರಿಗೆ ತಾವು ಬೆಳೆದ ಗೂಡು ಹೆಚ್ಚಿನ ದರಕ್ಕೆ ಮಾರಾಟವಾಗಿ ರೇಷ್ಮೆ ಉದ್ಯಮ ಒಂದು ಲಾಭದಾಯಕ ಉದ್ಯಮವಾಗಿ ಮಾರ್ಪಾಟಾಯಿತು. ರೈತರಿಗೆ ಹಾಗೂ ರೀಲರ್‌ಗಳಿಗೆ ಇನ್ನೂ ಹೆಚ್ಚಿನ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಲು ಅನುಕೂಲವಾಗುವಂತೆ 1986ರ ಮಾರ್ಚ್ 23ರಲ್ಲಿ ಹೊಸ ಕಟ್ಟಡ ನಿರ್ಮಿಸಲಾಯಿತು. ಪ್ರಸ್ತುತ ಈ ಕಟ್ಟಡದಲ್ಲಿ ಮಾರುಕಟ್ಟೆ ಕಾರ್ಯನಿರ್ವಹಿಸುತ್ತಿದೆ.

ಮಾರುಕಟ್ಟೆ ವ್ಯವಹಾರದಲ್ಲಿ ಹೆಚ್ಚಿನ ಪಾರದರ್ಶಕತೆ ತರುವ ಉದ್ದೇಶದಿಂದ 2015ನೇ ಇಸವಿಯಲ್ಲಿ ಮಾರುಕಟ್ಟೆ ವಹಿವಾಟಾದ ಇ-ಹರಾಜು, ಇ-ತೂಕ, ಇ-ಹಣ ಪಾವತಿ ವ್ಯವಸ್ಥೆಯನ್ನು ಆನ್‌ಲೈನ್ ಮೂಲಕ ನಿರ್ವಹಿಸಲು ಪ್ರಾರಂಭಿಸಲಾಯಿತು. ಇದರಿಂದ ರೈತರಿಗೂ ಹಾಗೂ ರೀಲರ್‌ಗಳಿಗೂ ಅನುಕೂಲವಾಗಿದೆ. ಸರ್ಕಾರ ಅತ್ಯಾಧುನಿಕ ತಾಂತ್ರಿಕತೆಯ ಹೈಟೆಕ್ ಮಾರುಕಟ್ಟೆ ನಿರ್ಮಿಸಲು ತೀರ್ಮಾನಿಸಿ ಶಿಡ್ಲಘಟ್ಟ ತಾಲ್ಲೂಕು ಹನುಮಂತಪುರ ಗ್ರಾಮದ ಸರ್ವೆ ನಂಬರ್ 181ರಲ್ಲಿ ಒಟ್ಟು 12.36.08 ಎಕರೆಯಲ್ಲಿ ₹200 ಕೋಟಿ ವೆಚ್ಚದಲ್ಲಿ ಹೈಟೆಕ್ ರೇಷ್ಮೆ ಗೂಡು ಮಾರುಕಟ್ಟೆ ನಿರ್ಮಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.