ADVERTISEMENT

ಬಾಗೇಪಲ್ಲಿ | ಕಾಯಕಲ್ಪಕ್ಕೆ ಕಾದಿದೆ ಹಿರಣ್ಯೇಶ್ವರ ದೇವಾಲಯ

ಪಿ.ಎಸ್.ರಾಜೇಶ್
Published 18 ಅಕ್ಟೋಬರ್ 2025, 6:28 IST
Last Updated 18 ಅಕ್ಟೋಬರ್ 2025, 6:28 IST
ಬಾಗೇಪಲ್ಲಿ ತಾಲ್ಲೂಕಿನ ಗಂಟ್ಲಮಲ್ಲಮ್ಮ ಕಣಿವೆಯ ಬಳಿ ಇರುವ ಹಿರಣ್ಯೇಶ್ವರ ದೇವಾಲಯ
ಬಾಗೇಪಲ್ಲಿ ತಾಲ್ಲೂಕಿನ ಗಂಟ್ಲಮಲ್ಲಮ್ಮ ಕಣಿವೆಯ ಬಳಿ ಇರುವ ಹಿರಣ್ಯೇಶ್ವರ ದೇವಾಲಯ   

ಬಾಗೇಪಲ್ಲಿ: ತಾಲ್ಲೂಕಿನ ಗಂಟ್ಲಮಲ್ಲಮ್ಮ ಕಣಿವೆ ಬಳಿ ವಿಜಯನಗರ ಕಾಲದ ಹಕ್ಕ-ಬುಕ್ಕರು ಸ್ಥಾಪಿಸಿದ್ದ ಐತಿಹಾಸಿಕ ಹಿರಣ್ಯೇಶ್ವರ ದೇವಾಲಯ ಶಿಥಿಲಾವಸ್ಥೆಯಿಂದ ಕೂಡಿದ್ದು ಕಾಯಕಲ್ಪಕ್ಕೆ ಕಾದಿದೆ.

ಬಾಗೇಪಲ್ಲಿ ಕೇಂದ್ರಸ್ಥಾನದಿಂದ ಪಾತಪಾಳ್ಯ ಕಡೆಗೆ ಸಂಚರಿಸುವ ಮಾರ್ಗದ ಮಧ್ಯದಲ್ಲಿ ಗಂಟ್ಲಮಲ್ಲಮ್ಮ ಕಣಿವೆ ಇವೆ. ಕಣಿವೆಯಿಂದ ಗುಟ್ಟಮೀದಪಲ್ಲಿ ಗ್ರಾಮಕ್ಕೆ ಸಂಚರಿಸುವ ದಾರಿಯ ಪಕ್ಕದಲ್ಲಿ ಹಿರಣ್ಯೇಶ್ವರ ದೇವಾಲಯ ಇದೆ.

ಭೈರವಬೆಟ್ಟ ಹಾಗೂ ರಾಮಗಿರಿ ತಪ್ಪಲಿನಲ್ಲಿನ ಹಿರಣೇಶ್ವರ ದೇವಾಲಯ ಋಷಿ ಪರಶುರಾಮರಿಂದ ಪ್ರತಿಷ್ಠಾಪನೆಯಾಗಿದೆ. ನಂತರ ರಾಮಗಿರಿಯಲ್ಲಿ ತಪಸ್ಸು ಆಚರಿಸಿದ ಶಿವ ಪಾರ್ವತಿ ಪ್ರತ್ಯಕ್ಷರಾಗಿ ವರ ನೀಡಿದರೆಂದು ಪದ್ಮಪುರಾಣದಲ್ಲಿ ಉಲ್ಲೇಖ ಇದೆ. 4 ದಿಕ್ಕುಗಳಲ್ಲಿ ಹಾಗೂ ಮಧ್ಯ ಭಾಗದಲ್ಲಿ 5 ಲಿಂಗಗಳನ್ನು ಪ್ರತಿಷ್ಠೆ ಮಾಡಲಾಗಿದೆ. ಇದರಿಂದ ಪಂಚಹಿರಣ್ಯೇಶ್ವರ ದೇವಾಲಯ ಎಂಬ ಹೆಸರು ಬಂದಿದೆ ಎಂದು ಪ್ರತೀತಿ ಇದೆ.

ADVERTISEMENT

ಚಾರಿತ್ರಿಕ ಹಿನ್ನೆಲೆ: ವಿಜಯನಗರ ಸಂಸ್ಥಾನದ ಹಕ್ಕಬುಕ್ಕರಿಂದ ಹಿರಣ್ಯೇಶ್ವರ ದೇವಾಲಯ ಸ್ಥಾಪನೆ ಆಗಿದೆ. 1343ರಲ್ಲಿ ಸೇನಾಪತಿ ಹಿರಣ್ಣಯ್ಯ ಹಾಗೂ ಹಕ್ಕಬುಕ್ಕರ ಮಗ ಕೆಂಪಣ್ಣರಾಯರು ತಮ್ಮ ಸೈನ್ಯ ಸಮೇತ ಯುದ್ಧಕ್ಕೆ ಹೊರಟು ಬರುವ ಮಾರ್ಗ ಮಧ್ಯದಲ್ಲಿ ಕೆಂಪಣ್ಣರಾಯ ಮತ್ತು ಹಿರಣ್ಣಯ್ಯರವರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ. ಇದರಿಂದ ಹಿರಣ್ಣಯ್ಯ ಇದೇ ದೇವಾಲಯದಲ್ಲಿ ನೆಲೆಸಿದರಂತೆ. ಹಕ್ಕಬುಕ್ಕರೇ ಆಗಮಿಸಿ ಹಿರಣ್ಣಯ್ಯವರನ್ನು ಮನವೊಲಿಸಿದ್ದಾರೆ. ಆದರೆ ಹಿರಣ್ಣಯ್ಯ ಇದೇ ದೇವಾಲಯದಲ್ಲಿ ಇದ್ದು, ಜೀರ್ಣೋದ್ಧಾರ ಮಾಡಿದ್ದಾರೆ. ಹಕ್ಕ-ಬುಕ್ಕರ ಪ್ರತಿಮೆಗಳ ಜತೆಗೆ ತನ್ನ ಪ್ರತಿಮೆ ಕೆತ್ತನೆ ಮಾಡಿರುವುದು ಇಂದಿಗೂ ದೇವಾಲಯದಲ್ಲಿ ಕಾಣಬಹುದು.

ಗೋಪುರ ಶಿಥಿಲಾವಸ್ಥೆಯಲ್ಲಿದೆ. ಈ ಹಿಂದೆ ಗೋಪುರದಲ್ಲಿ ಬಿರುಕು ಕಾಣಿಸಿತ್ತು. ಕಟ್ಟಡಗಳು ಸಹ ಶಿಥಿಲಾವಸ್ಥೆಯಲ್ಲಿ ಇದೆ. 

ಪುರಾಣ, ಚಾರಿತ್ರಿಕ ಹಾಗೂ ಪಾಳೇಗಾರರು ಪೂಜಿಸಲ್ಪಟ್ಟ ಹಿರಣ್ಯೇಶ್ವರ ದೇವಾಲಯವನ್ನು ಪುನರ್ ಅಭಿವೃದ್ಧಿ ಪಡಿಸಬೇಕು. ಗೋಪುರ, ಕಟ್ಟಡ, ಕೊಠಡಿಗಳನ್ನು ನಿರ್ಮಾಣ ಮಾಡಬೇಕು. ಶೌಚಾಲಯ ಕಟ್ಟಿಸಬೇಕು ಎಂದು ಪಾತಪಾಳ್ಯದ ನಿವಾಸಿ ರಾಮಲಕ್ಷ್ಮಮ್ಮ ಸುರೇಶ್ ಒತ್ತಾಯಿಸಿದರು.

ದೇವಾಲಯಕ್ಕೆ ಅಗತ್ಯ ಸೌಲಭ್ಯ, ಅಭಿವೃದ್ಧಿಪಡಿಸಿ ಪ್ರವಾಸಿ ತಾಣ ಮಾಡಬೇಕು. ಪ್ರಾಚೀನ ಕಾಲದ ದೇವಾಲಯ, ಸ್ಮಾರಕ, ಶಿಲಾಶಾಸನಗಳ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸಲು ಏನೂ ಸಿಗುವುದಿಲ್ಲ ಎಂದು ಚಿಂತಕ ಡಾ.ಕೆ.ಎಂ.ನಯಾಜ್ ಅಹ್ಮದ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.