ADVERTISEMENT

ಹೈ–ಟೆಕ್ ತೋಟಗಾರಿಕೆ ತರಬೇತಿ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2024, 16:14 IST
Last Updated 12 ಡಿಸೆಂಬರ್ 2024, 16:14 IST
ಚಿಂತಾಮಣಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಗುರುವಾರ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿಜ್ಞಾನಿಗಳು ಮತ್ತು ತರಬೇತಿ ಶಿಬಿರಾರ್ಥಿಗಳು
ಚಿಂತಾಮಣಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಗುರುವಾರ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿಜ್ಞಾನಿಗಳು ಮತ್ತು ತರಬೇತಿ ಶಿಬಿರಾರ್ಥಿಗಳು   

ಚಿಂತಾಮಣಿ: ತಾಲ್ಲೂಕಿನ ಕುರುಬೂರಿನಲ್ಲಿರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ ಗುರುವಾರದಿಂದ ಮೂರು ದಿನಗಳ ‘ಹೈ–ಟೆಕ್ ತೋಟಗಾರಿಕೆ’ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 

ಗುರುವಾರ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಎಂ.ಪಾಪಿರೆಡ್ಡಿ ಮಾತನಾಡಿ, ಉತ್ತಮ ಗುಣಮಟ್ಟದ ಅಧಿಕ ಇಳುವರಿ ಪಡೆಯಲು ವೈಜ್ಞಾನಿಕವಾಗಿ ನರ್ಸರಿ ಘಟಕಗಳಲ್ಲಿ ಉತ್ಪಾದಿಸಿದ ಸಸಿಗಳನ್ನು ಬಳಸಬೇಕು ಎಂದು ಸಲಹೆ ನೀಡಿದರು. 

ಬಿತ್ತನೆ ಬೀಜ ಖರೀದಿಸುವಾಗ ಋತುಮಾನ, ಮಣ್ಣು, ಬೇಸಾಯದ ಸ್ಥಳ ಮತ್ತು ರೋಗ ನಿರೋಧಕ ತಳಿಗಳು, ಮಾರುಕಟ್ಟೆಗೆ ಅನುಗುಣವಾದ ತಳಿ ಹಾಗೂ ಸಂಸ್ಕರಣೆಗೆ ಸೂಕ್ತತೆ ಆಧಾರದ ಮೇಲೆ ಸೂಕ್ತ ತಳಿಗಳ ಬೀಜವನ್ನು ಆರಿಸಿಕೊಳ್ಳಬೇಕು ಎಂದರು. 

ADVERTISEMENT

ಆಧುನಿಕ ತಂತ್ರಜ್ಞಾನ ಯುಗದಲ್ಲಿ ವೈಜ್ಞಾನಿಕವಾಗಿ ಕೃಷಿ ಕೈಗೊಂಡರೆ ಉತ್ತಮ ಇಳುವರಿ ಪಡೆಯಬಹುದು. ಕೃಷಿ ವಿಜ್ಞಾನಿಗಳು ಮತ್ತು ಕೃಷಿ ಅಧಿಕಾರಿಗಳ ಸಲಹೆ, ಮಾರ್ಗದರ್ಶನದಂತೆ ವಿವಿಧ ಬೆಳೆಗಳನ್ನು ಬೆಳೆಯಬೇಕು. ಋತುಮಾನಕ್ಕೆ ತಕ್ಕಂತಹ ನೂತನ ತಳಿಗಳನ್ನು ಬಿತ್ತನೆ ಮಾಡಬೇಕು ಎಂದರು.

ತೋಟಗಾರಿಕೆ ವಿಜ್ಞಾನಿ ಆರ್. ಪ್ರವೀಣಕುಮಾರ ಪ್ರಾಸ್ತಾವಿಕ ನುಡಿಗಳನ್ನಾಡಿ, ‘ಹೈ-ಟೆಕ್ ತೋಟಗಾರಿಕೆ’ ತರಬೇತಿ ಕಾರ್ಯಕ್ರಮದ ಉದ್ದೇಶ ತಿಳಿಸಿದರು.

ರೈತರು ಮಾರುಕಟ್ಟೆ ಆಧಾರಿತ ಬೆಳೆಗಳನ್ನು ಬೆಳೆದರೆ ಮಾತ್ರ ಕೃಷಿ ಲಾಭದಾಯಕವಾಗುತ್ತದೆ. ಸೂಕ್ತ ತಳಿಗಳು, ಋತುಮಾನಕ್ಕೆ ಅಗತ್ಯವಾದ ಬೆಳೆಗಳನ್ನು ಬೆಳೆಯಲು ತರಬೇತಿ ಪಡೆಯುವುದು ಅತ್ಯವಶ್ಯಕ ಎಂದರು. 

ಹಸಿರು ಮನೆ ನಿರ್ಮಾಣ, ಸಸ್ಯಾಭಿವೃದ್ದಿಗೆ ಕಟ್ಟಡ ನಿರ್ಮಾಣ, ವ್ಶೆಜ್ಞಾನಿಕವಾಗಿ ನರ್ಸರಿ ಘಟಕಗಳಲ್ಲಿ ತರಕಾರಿ ಸಸಿಗಳ ಉತ್ಪಾದನೆ, ಪಾಲಿಹೌಸ್‌ನಲ್ಲಿ ಫ್ಯೂಮಿಗೇಷನ್ ತಂತ್ರ, ಹನಿ ನೀರಾವರಿ ಘಟಕಗಳು ಮತ್ತು ಅನುಸ್ಥಾಪನೆ, ರಸಗೊಬ್ಬರಗಳು ಮತ್ತು ಗೊಬ್ಬರಗಳ ವರ್ಗೀಕರಣ, ಕೊಯ್ಲೋತ್ತರ ನಿರ್ವಹಣೆ ಮತ್ತು ಮೌಲ್ಯವರ್ಧನೆ ಮತ್ತು ಮುಂತಾದ ತೋಟಗಾರಿಕಾ ಬೆಳೆಗಳ ಬಗ್ಗೆ ಸಂಪೂರ್ಣ ಮಾಹಿತಿ ಮತ್ತು ತಾಂತ್ರಿಕತೆ ತಿಳಿಸಿಕೊಡಲಾಯಿತು.

ತಾಲೂಕಿನ ಸಹಾಯಕ ತೋಟಗಾರಿಕಾ ನಿರ್ದೇಶಕ ಬಾಲಕೃಷ್ಣ ನರ್ಸರಿಯಿಂದ ಆಗುವ ಲಾಭ ಮತ್ತು ಉಪಯೋಗದ ಬಗ್ಗೆ ಮಾತನಾಡಿದರು. ಶಿಬಿರಾರ್ಥಿಗಳು ಹಾಗೂ ಕೃಷಿ ವಿಜ್ಞಾನ ಕೇಂದ್ರದ ಸಿಬ್ಬಂದಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.