ADVERTISEMENT

ಬ್ರಿಟಿಷರಲ್ಲಿ ನಡುಕ ಹುಟ್ಟಿಸಿದ್ದ ಧೀರೆ ರಾಣಿ ಚೆನ್ನಮ್ಮ: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 5:16 IST
Last Updated 24 ಅಕ್ಟೋಬರ್ 2025, 5:16 IST
ಚಿಕ್ಕಬಳ್ಳಾಪುರದಲ್ಲಿ ನಡೆದ ಕಿತ್ತೂರು ರಾಣಿ ಚನ್ನಮ್ಮ ಜಯಂತಿಯಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಅಧಿಕಾರಿಗಳು ಮತ್ತು ವೀರಶೈವ ಲಿಂಗಾಯತ ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು
ಚಿಕ್ಕಬಳ್ಳಾಪುರದಲ್ಲಿ ನಡೆದ ಕಿತ್ತೂರು ರಾಣಿ ಚನ್ನಮ್ಮ ಜಯಂತಿಯಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಅಧಿಕಾರಿಗಳು ಮತ್ತು ವೀರಶೈವ ಲಿಂಗಾಯತ ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು   

ಚಿಕ್ಕಬಳ್ಳಾಪುರ: ಬ್ರಿಟಿಷರ ವಿರುದ್ಧ ಕನ್ನಡ ನೆಲದ ರಕ್ಷಣೆಗಾಗಿ ಕಿತ್ತೂರು ರಾಣಿ ಚೆನ್ನಮ್ಮ ಅವರು ತೋರಿದ ಧೈರ್ಯ, ಸಾಹಸ ನಾಡಿನ ಪ್ರತಿಯೊಬ್ಬರಿಗೂ ಆದರ್ಶಪ್ರಾಯ ಎಂದು ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಉದ್ಘಾಟಿಸಿ ಮಾತನಾಡಿದರು.

ಚೆನ್ನಮ್ಮನವರು ನಾಡಿನ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ಹೋರಾಡಿದರು. ಅವರ ಶೌರ್ಯ, ಸಾಹಸ, ಹೋರಾಟಗಳು ನಾಡಿನ ಹೆಮ್ಮೆಯ ಇತಿಹಾಸವಾಗಿದೆ. ಅವರು ರಾಜ ಮನೆತನದವರಾಗಿದ್ದರಿಂದ ಬಾಲ್ಯದಿಂದಲೇ ಕುದುರೆ ಸವಾರಿ, ಕತ್ತಿ ಬಳಸುವ ಬಗ್ಗೆ ತರಬೇತಿ ಪಡೆದಿದ್ದರು. ಚೆನ್ನಮ್ಮ ಅವರು ತನ್ನ ರಾಜ್ಯದ ರಕ್ಷಣೆಗಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಮೊದಲ ಮಹಿಳೆ ಎಂದು ಸ್ಮರಿಸಿದರು.

ADVERTISEMENT

ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ಬ್ರಿಟಿಷರ ನೀತಿ ವಿರೋಧಿಸಿ ಯುದ್ಧದಲ್ಲಿ ಹೋರಾಡಿ ಒಮ್ಮೆ ಜಯಶೀಲರಾಗುತ್ತಾರೆ. ನಂತರ 2ನೇ ಯುದ್ಧದಲ್ಲಿ ಹೋರಾಡಿ ಬಂಧನಕ್ಕೆ ಒಳಗಾಗಿ ಜೈಲಿನಲ್ಲಿ ಪ್ರಾಣತ್ಯಾಗ ಮಾಡಿದರು. ಇಂತಹ ಸಾಹಸಿಯ ಸಾಧನೆಯನ್ನು ಸರ್ವರಿಗೂ ಸರ್ವಕಾಲಕ್ಕೂ ತಲುಪಿಸಲು ಸರ್ಕಾರ ಕಿತ್ತೂರು ಚೆನ್ನಮ್ಮ ಜಯಂತಿಯನ್ನು ಪ್ರತಿ ವರ್ಷ ಆಚರಿಸುತ್ತಿದೆ ಎಂದು ಹೇಳಿದರು.

ಸಹಾಯಕ ಪ್ರಾಧ್ಯಾಪಕ ಎಂ. ರಂಗಪ್ಪ ಚೆನ್ನಮ್ಮ ಅವರ ಬಾಲ್ಯ, ಹೋರಾಟದ ಬಗ್ಗೆ ಮಾಹಿತಿ ನೀಡಿದರು. 

ಸಮುದಾಯದ ಶೋಭಾ ರಾಣಿ, ಮಂಜುಳಾ ಗಿರೀಶ್, ಮಂಜುಳ ಗುಬ್ಬಿಶೆಟ್ಟಿ, ಉಮಾ ಸೋಮಶೇಖರ್, ಮಹಾದೇವಮ್ಮ, ಉಮಾರಾಣಿ ಅವರನ್ನು ಸನ್ಮಾನಿಸಲಾಯಿತು. 

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎನ್ ಭಾಸ್ಕರ್, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಅತಿಕ್ ಪಾಷಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿ ಕುಮಾ‌ರ್, ವೀರಶೈವ ಲಿಂಗಾಯತ ಸಮುದಾಯದ  ಮುಖಂಡರಾದ ಮಹೇಶ್ ಬಸವಾಪುರ, ರಾಜೇಂದ್ರ ಬಾಬು, ಜಿ. ರಾಜಣ್ಣ ಹಿರೇಬಿದನೂರು, ರೇವಣ್ಣ ಸಿದೇಶ್ವರ ಹಾಗೂ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.