ಚಿಕ್ಕಬಳ್ಳಾಪುರ: ಚಿಂತಾಮಣಿ ನಗರದ ಝಾನ್ಸಿರಾಣಿ ಲಕ್ಷ್ಮಿಬಾಯಿ ಕ್ರೀಡಾಂಗಣದ ಅಧೀನದ ಮಳಿಗೆಗಳನ್ನು ಬಾಡಿಗೆ ನೀಡಲಾಗಿದೆ. ಬಾಡಿಗೆದಾರರಿಂದ ಬರಬೇಕಾಗಿರುವ ₹ 1.35 ಕೋಟಿ ಬಾಡಿಗೆಯನ್ನು ಕಡ್ಡಾಯವಾಗಿ ವಸೂಲಿ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ ಸುಧಾಕರ್ ಕ್ರೀಡಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ‘ಕ್ರೀಡಾಂಗಣಗಳ ಅಭಿವೃದ್ಧಿ ಕುರಿತ’ ಸಭೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಝಾನ್ಸಿರಾಣಿ ಲಕ್ಷ್ಮಿಬಾಯಿ ಕ್ರೀಡಾಂಗಣವು ರಾಜ್ಯದಲ್ಲೆ ಮಾದರಿಯಾಗಿದೆ. ಕ್ರೀಡಾಂಗಣಕ್ಕೆ ಹೊಂದಿಕೊಂಡು ಆದಾಯ ಬರುವಂತೆ ಮಳಿಗೆ ನಿರ್ಮಿಸಲಾಗಿದೆ. ಈ ಕೆಲವು ಮಳಿಗೆಗಳಿಂದ ₹ 1.35 ಕೋಟಿ ಬಾಡಿಗೆ ವಸೂಲಿ ಮಾಡಬೇಕು. ಈ ಹಣವನ್ನು ಕ್ರೀಡಾಂಗಣದ ಅಭಿವೃದ್ಧಿಗೆ ಬಳಸಬೇಕು ಎಂದರು.
193 ಮಳಿಗೆಗಳ ಪೈಕಿ ಹರಾಜು ಅವಧಿ ಮುಗಿದಿರುವ ಮಳಿಗೆಗಳನ್ನು ಮರುಹರಾಜು ಮಾಡಬೇಕು. ಮಳಿಗೆಗಳ ಬಾಡಿಗೆದಾರರಿಗೆ ಸಂಬಂಧಿಸಿದಂತೆ ಯಾವ ದಾಖಲೆಗಳನ್ನು ಇಡುವ ಕೆಲಸವನ್ನು ಇಲಾಖೆ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣಕ್ಕೆ ₹9 ಕೋಟಿ ಮಂಜೂರಾಗಿದೆ. ಚಿಂತಾಮಣಿಯ ಲೋಕೋಪಯೋಗಿ ಇಲಾಖೆಯ ಬಳಿ 9 ಎಕರೆಯಲ್ಲಿ ನೈಜ ಹುಲ್ಲು ಹಾಸಿನ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಲು ₹7 ಕೋಟಿ ಮಂಜೂರಾಗಿದೆ. ಈ ಎಲ್ಲಾ ಕಾರ್ಯಗಳ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ಪ್ರಕ್ರಿಯೆ ಚಾಲನೆಯಲ್ಲಿದೆ. ಸದ್ಯದಲ್ಲೇ ಸದರಿ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಲಿವೆ ಎಂದರು.
ಜಿಲ್ಲಾ ಕ್ರೀಡಾಂಗಣ ಉಸ್ತುವಾರಿ ಸಮಿತಿ ಮತ್ತು ಜಿಲ್ಲಾ ಕ್ರೀಡಾಂಗಣ ನಿರ್ವಹಣಾ ಸಮಿತಿಯನ್ನು ರಚಿಸಲಾಗಿದೆ.
ಚಿಕ್ಕಬಳ್ಳಾಪುರದ ಸರ್.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣ ಸೇರಿದಂತೆ ತಾಲ್ಲೂಕು ಕೇಂದ್ರಗಳ ಕ್ರೀಡಾಂಗಣಗಳನ್ನು ಅಭಿವೃದ್ಧಿ ಮಾಡಲು ಕ್ರಮವಹಿಸಲಾಗುತ್ತಿದೆ. ಗೌರಿಬಿದನೂರಿನಲ್ಲಿ ಒಳಾಂಗಣ ಕ್ರೀಡಾಂಗಣ ಅಭಿವೃದ್ಧಿ ಸೇರಿದಂತೆ ಎಲ್ಲ ತಾಲ್ಲೂಕು ಕ್ರೀಡಾಂಗಣ ಅಭಿವೃದ್ಧಿಗೆ ಚರ್ಚೆಗಳು ನಡೆದಿವೆ ಎಂದರು.
ಪ್ರತ್ಯೇಕ ಖಾತೆಗೆ ಮನವಿ: ಎಲ್ಲ ಕ್ರೀಡಾಂಗಣಗಳಿಗೂ ಒಂದೇ ಖಾತೆ ಇದೆ. ಇದಕ್ಕೆ ನನ್ನ ವಿರೋಧವಿದೆ. ಪ್ರತಿ ತಿಂಗಳು ಚಿಂತಾಮಣಿಯ ಕ್ರೀಡಾಂಗಣದಿಂದ ₹3 ಲಕ್ಷ ಬಾಡಿಗೆ ಬರುತ್ತದೆ. ಯಾವ ಕ್ರೀಡಾಂಗಣದಲ್ಲಿ ಆದಾಯವಿದೆಯೊ ಅವುಗಳಿಗೆ ಪ್ರತ್ಯೇಕ ಖಾತೆಯನ್ನು ನಿರ್ವಹಿಸಬೇಕು ಎಂದು ಕ್ರೀಡಾ ಖಾತೆ ಹೊಂದಿರುವ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸುವೆ ಎಂದರು.
ಶಾಸಕ ಬಿ.ಎನ್. ರವಿಕುಮಾರ್, ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಎನ್ ಭಾಸ್ಕರ್, ಉಪವಿಭಾಗಾಧಿಕಾರಿ ಡಿ.ಹೆಚ್.ಅಶ್ವಿನ್ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಪೆವಿಲಿಯನ್‌ಗೆ ₹10 ಕೋಟಿ
ಜಿಲ್ಲಾ ಕೇಂದ್ರದಲ್ಲಿನ ಸರ್.ಎಂ.ವಿ ಕ್ರೀಡಾಂಗಣವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ₹69 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಯೋಜಿಸಿ ಈಗಾಗಲೇ ನೀಲ ನಕ್ಷೆ ಸಿದ್ಧಪಡಿಸಲಾಗಿದೆ ಎಂದು ಸಚಿವರು ತಿಳಿಸಿದರು. ಅದರ ಭಾಗವಾಗಿ ಮೊದಲ ಹಂತದಲ್ಲಿ ಪೆವಿಲಿಯನ್ ಬ್ಲಾಕ್ ನಿರ್ಮಿಸಲು ₹10 ಕೋಟಿ ಮಂಜೂರಾಗಿದೆ. ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ಪಡೆಯುವ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ಹೇಳಿದರು.
ಮುಂದಿನ ತಿಂಗಳು ಚಿಮುಲ್ ಚುನಾವಣೆ
ಚಿಕ್ಕಬಳ್ಳಾಪುರ ಹಾಲು ಒಕ್ಕೂಟಕ್ಕೆ ಮುಂದಿನ ತಿಂಗಳು ಚುನಾವಣೆ ನಡೆಸುತ್ತೇವೆ. ಕ್ಷೇತ್ರ ಪುನರ್ವಿಂಗಡಣೆ ಕುರಿತು ಗೊಂದಲ ಇದ್ದವು. ಅವುಗಳನ್ನು ಪರಿಹರಿಸಿ ಚುನಾವಣೆ ನಡೆಯುತ್ತದೆ ಎಂದು ಡಾ.ಎಂ.ಸಿ.ಸುಧಾಕರ್ ತಿಳಿಸಿದರು. ಈ ಹಿಂದಿನ ಸರ್ಕಾರದ ದೊಡ್ಡ ಹೊರೆ ನಮ್ಮ ಮೇಲೆ ಬಿದ್ದಿದೆ. ಚುನಾವಣೆ ಹತ್ತಿರ ಬಂದಿತು ಎಂದು ಕಾಮಗಾರಿಗೆ ಅನುಮೋದನೆ ನೀಡಿದರು. ಹಣ ಮೀಸಲಿಡಲಿಲ್ಲ. ಇದೆಲ್ಲವನ್ನೂ ವ್ಯವಸ್ಥಿತವಾಗಿ ನಿರ್ವಹಣೆ ಮಾಡುವ ಕೆಲಸವನ್ನು ಮುಖ್ಯಮಂತ್ರಿ ಮಾಡುತ್ತಿದ್ದಾರೆ. ಈ ಕಾರಣದಿಂದ ನಾವು ಅಂದುಕೊಂಡ ರೀತಿಯಲ್ಲಿ ಕೆಲಸ ಮಾಡಲು ಆಗುತ್ತಿಲ್ಲ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.