ADVERTISEMENT

ಚಿಕ್ಕಬಳ್ಳಾಪುರ | ₹55 ಲಕ್ಷ ನಗದು ಕಳವು: ಅಂತರರಾಜ್ಯ ಕಳ್ಳ ಸೆರೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 5:28 IST
Last Updated 26 ಡಿಸೆಂಬರ್ 2025, 5:28 IST
<div class="paragraphs"><p>ಬಂಧನ</p></div>

ಬಂಧನ

   

ಚಿಕ್ಕಬಳ್ಳಾಪುರ: ಬೆಂಗಳೂರಿನಿಂದ ಹೈದರಾಬಾದ್‌ಗೆ ಬಸ್‌ನಲ್ಲಿ ಸಾಗಿಸಲಾಗುತ್ತಿದ್ದ ₹55 ಲಕ್ಷ ನಗದು ಇದ್ದು ಬ್ಯಾಗ್ ಅನ್ನು ಸಿನಿಮೀಯ ರೀತಿಯಲ್ಲಿ ಕದ್ದು ಪರಾರಿಯಾಗಿದ್ದ ಆರೋಪಿಯನ್ನು ಚಿಕ್ಕಬಳ್ಳಾಪುರ ತಾಲ್ಲೂಕಿನ ಪೆರೇಸಂದ್ರದ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಮಧ್ಯಪ್ರದೇಶದ ಸಡಕ್‌ಪುರ ಗ್ರಾಮದ ನಿವಾಸಿ ಅಸ್ಲಂ ಖಾನ್ (39) ಎಂದು ಗುರುತಿಸಲಾಗಿದೆ. ಈ ಪ್ರಕರಣದಲ್ಲಿ ಮುನೀರ್ ಖಾನ್ (50), ಅಬ್ಯಾಖಾನ್ (44) ಹಾಗೂ ಶೇರು (35) ಭಾಗಿಯಾಗಿದ್ದರು ಎಂದು ಗುರುತಿಸಲಾಗಿದ್ದು, ಈ ಮೂವರ ಪತ್ತೆಗಾಗಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ತಿಳಿಸಿದ್ದಾರೆ.

ADVERTISEMENT

ಏನಿದು ಘಟನೆ: ಆಂಧ್ರಪ್ರದೇಶದ ಉದ್ಯಮಿ ವೆಂಕಟೇಶ್ವರರಾವ್ ಅವರು ಬೆಂಗಳೂರಿನ ಮಾರತ್‌ಹಳ್ಳಿಯಲ್ಲಿರುವ ತಮ್ಮ ಕಟ್ಟಡ ಮಾರಿದ್ದರು. ಇದರಿಂದ ಬಂದ ₹55 ಲಕ್ಷ ನಗದು ಹಾಗೂ ಕಟ್ಟಡದ ದಾಖಲೆ ಪತ್ರಗಳನ್ನು ಬೆಂಗಳೂರಿನಿಂದ ಡಿ.8ರಂದು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಹೈದರಾಬಾದ್‌ಗೆ ಕೊಂಡೊಯ್ಯುತ್ತಿದ್ದರು. ಪೆರೇಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯ ಆರೂರು ಸಮೀಪದಲ್ಲಿರುವ ಹೋಟೆಲ್ ಬಳಿ ರಾತ್ರಿ 10 ಗಂಟೆ ಸುಮಾರಿಗೆ ಊಟಕ್ಕೆ ಬಸ್ ನಿಲ್ಲಿಸಲಾಗಿತ್ತು. ಆಗ ವೆಂಕಟೇಶ್ವರರಾವ್ ಅವರು ಊಟಕ್ಕೆ ಹೋಟೆಲ್‌ಗೆ ಹೋಗಿದ್ದಾಗ ಖದೀಮರು 55 ಲಕ್ಷ ನಗದು ಇದ್ದ ಬ್ಯಾಗ್ ಅನ್ನು ಕೊಂಡೊಯ್ದಿದ್ದರು. ಈ ಸಂಬಂಧ ವೆಂಕಟೇಶ್ವರರಾವ್ ಪೆರೇಸಂದ್ರ ಠಾಣೆಗೆ ದೂರು ಸಲ್ಲಿಸಿದ್ದರು.

ಈ ಸಂಬಂಧ ಎಸ್‌ಪಿ ಕುಶಾಲ್ ಚೌಕ್ಸೆ, ಹೆಚ್ಚುವರಿ ಎಸ್‌ಪಿ ಜಗನ್ನಾಥ ರೈ, ಡಿವೈಎಸ್‌ಪಿ ಎಸ್.ಶಿವಕುಮಾರ್ ಮಾರ್ಗದರ್ಶನದಲ್ಲಿ ಮಂಚೇನಹಳ್ಳಿ ಪಿಎಸ್‌ಐ ಪುನೀತ್ ನಂಜರಾಮ್, ಪೆರೇಸಂದ್ರ ಪಿಎಸ್‌ಐ ಗುಣವತಿ, ಎಎಸ್‌ಐ ಕೆ.ಗಣೇಶ್, ಆನಂದ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮಧ್ಯಪ್ರದೇಶದ ಪೊಲೀಸರ ಸಹಕಾರದೊಂದಿಗೆ ಅಂತರರಾಜ್ಯ ಆರೋಪಿಯನ್ನು ಬಂಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.