
ಗೌರಿಬಿದನೂರು ತಾಲ್ಲೂಕಿನ ಅಲೀಪುರಕ್ಕೆ ಅಯಾತೊಲ್ಲಾ ಅಲಿ ಖಮೇನಿ ಅವರು ಭೇಟಿ ನೀಡಿದ ಸಂದರ್ಭ
ಚಿಕ್ಕಬಳ್ಳಾಪುರ: ಅತ್ತ ಇರಾನ್‌ನಲ್ಲಿ ಯುದ್ಧ ಆರಂಭವಾದರೆ ಇತ್ತ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಅಲೀಪುರದ ಗಲ್ಲಿ, ಗಲ್ಲಿಗಳಲ್ಲಿ, ಹತ್ತು ಹಲವು ಮನೆಗಳಲ್ಲಿ ಆತಂಕ ಶುರುವಾಗುತ್ತದೆ.
ಅಲೀಪುರ ಮತ್ತು ಇರಾನ್ ನಡುವೆ ಹಲವು ದಶಕಗಳಿಂದ ನಂಟಿದೆ. ವೈದ್ಯಕೀಯ ಶಿಕ್ಷಣ, ಧಾರ್ಮಿಕ ಶಿಕ್ಷಣ, ಧಾರ್ಮಿಕ ಪ್ರವಾಸದ ಕಾರಣಕ್ಕೆ ಅಲೀಪುರದ 100ಕ್ಕೂ ಹೆಚ್ಚು ಶಿಯಾ ಮುಸ್ಲಿಮರು ಇರಾನ್‌ನ ರಾಜಧಾನಿ ಟೆಹರಾನ್, ಕುಮ್, ಮಶಾದ್ ಸೇರಿದಂತೆ ವಿವಿಧ ನಗರಗಳಲ್ಲಿ ನೆಲೆಸಿದ್ದಾರೆ.
ಅಮೆರಿಕ ಮತ್ತು ಇಸ್ರೇಲ್ ಕ್ಷಿಪಣಿಗಳು ಇರಾನ್ ಮೇಲೆ ದಾಳಿ ಮಾಡುತ್ತಿದ್ದಂತೆಯೇ ಅಲ್ಲಿರುವ ತಮ್ಮ ಸಂಬಂಧಿಕರು, ಬಂಧು, ಬಳಗ, ಮಕ್ಕಳನ್ನು ಸಂಪರ್ಕಿಸಲು ಅಲೀಪುರದ ಜನರು ಪ್ರಯತ್ನಿಸುತ್ತಲೇ ಇದ್ದಾರೆ. ಆದರೆ ಇರಾನ್‌ನಲ್ಲಿ ಇಂಟರ್‌ನೆಟ್ ಸ್ಥಗಿತಗೊಂಡಿರುವ ಕಾರಣ ಸಂಪರ್ಕ ಸಾಧ್ಯವಾಗುತ್ತಿಲ್ಲ
‘ಇರಾನ್‌ನಲ್ಲಿರುವ ಅಕ್ಕನ ಮಗನಿಗೆ ಬೆಳಗ್ಗೆ 11ರಿಂದ ಫೋನ್ ಮಾಡುತ್ತಲೇ ಇದ್ದೇನೆ. ಆತ ಸಂಪರ್ಕಕ್ಕೆ ಸಿಗುತ್ತಿಲ್ಲ’ ಅಲೀಪುರದ ಸೈಯದ್ ಮೆಹೆದಿ ಆತಂಕ ಹಂಚಿಕೊಂಡರು.
2025ರ ಜೂನ್‌ನಲ್ಲಿ ಇರಾನ್ ಮತ್ತು ಇಸ್ರೇಲ್ ನಡುವೆ ಯುದ್ಧ ನಡೆದಾಗ 105 ಜನರು ಇರಾನ್ ತೊರೆದು ಸ್ವಗ್ರಾಮ ಅಲೀಪುರಕ್ಕೆ ಬಂದಿದ್ದರು. ಶಾಂತಿ ನೆಲೆಸಿದ ತರುವಾಯ ಇರಾನ್‌ಗೆ ಮರಳಿದ್ದರು.
‘ಇರಾನ್‌ನಲ್ಲಿರುವ ಇಸ್ರೇಲ್ ಗೂಢಚಾರರು ದೇಶದ ಬೆಳವಣಿಗೆಗಳ ಬಗ್ಗೆ ತಮ್ಮವರಿಗೆ ಮಾಹಿತಿ ಕಳುಹಿಸುವರು ಎಂದು ಇರಾನ್‌ನಲ್ಲಿ ಅಂತರ್ಜಾಲ ಸ್ಥಗಿತಗೊಳಿಸಲಾಗಿದೆ. ಅಕ್ಕನ ಮಗ ಕುಮ್‌ನಲ್ಲಿ ಧಾರ್ಮಿಕ ಶಿಕ್ಷಣ ಪಡೆಯುತ್ತಿದ್ದಾನೆ. ಅಕ್ಕ, ಭಾವ ನಿತ್ಯ ಕರೆ ಮಾಡಿ ಮಾತನಾಡುತ್ತಿದ್ದರು. ಈಗ ಸಾಧ್ಯವಾಗುತ್ತಿಲ್ಲ. ಟಿವಿ ನೋಡಿ ಅಲ್ಲಿನ ಸ್ಥಿತಿ ತಿಳಿಯುತ್ತಿದ್ದೇವೆಠ ಎಂದು ಸೈಯದ್ ಮೆಹೆದಿ ‘ಪ್ರಜಾವಾಣಿ’ಗೆ ತಿಳಿಸಿದರು.
ಶಾಂತಿ ನೆಲೆಸಲಿ. ಮನುಷ್ಯತ್ವ ಕಾಪಾಡುವವರಿಗೆ ಒಳ್ಳೆಯದಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ.ಅಲಿ ಅಬ್ಬಾಸ್, ಅಂಜುಮನ್ ಎ ಜಾಫರಿಯಾ ಸಂಘದ ಅಧ್ಯಕ್ಷ ಅಲೀಪುರ
ಅಲೀಪುರದ ನೋಟ (ಸಂಗ್ರಹ ಚಿತ್ರ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.