ADVERTISEMENT

ನೀರಾವರಿ: ಜನಾಂದೋಲನಕ್ಕೆ ಚಿಂತನೆ

ಚಿಕ್ಕಬಳ್ಳಾಪುರ, ಕೋಲಾರ, ಬೆಂ. ಗ್ರಾಮಾಂತರ ಜಿಲ್ಲೆಯ ಮುಖಂಡರು ಭಾಗಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2023, 5:52 IST
Last Updated 13 ಫೆಬ್ರುವರಿ 2023, 5:52 IST
ಚಿಕ್ಕಬಳ್ಳಾಪುರ ತಾಲ್ಲೂಕಿನ ನಾಯನಹಳ್ಳಿಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ನೀರಾವರಿ ಹೋರಾಟಗಾರರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು
ಚಿಕ್ಕಬಳ್ಳಾಪುರ ತಾಲ್ಲೂಕಿನ ನಾಯನಹಳ್ಳಿಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ನೀರಾವರಿ ಹೋರಾಟಗಾರರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು   

ಚಿಕ್ಕಬಳ್ಳಾಪುರ: ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆಗಳ ಬಗ್ಗೆ ಪ್ರಸ್ತಾಪಿಸಬೇಕು. ಅಧಿಕಾರಕ್ಕೆ ಬಂದರೆ ಯೋಜನೆಗಳನ್ನು ಕಾರ್ಯಗತಗೊಳಿಸಬೇಕು. ಈ ವಿಚಾರವಾಗಿ ಒತ್ತಡ ಹೇರಲು ಮೂರು ಜಿಲ್ಲೆಗಳಲ್ಲಿ ಜನಾಂದೋಲನ ರೂಪಿಸಬೇಕು ಎಂದು ತಾಲ್ಲೂಕಿನ ನಾಯನಹಳ್ಳಿಯಲ್ಲಿ ನಡೆದ ರೈತ ಮುಖಂಡರು ಹಾಗೂ ಹೋರಾಟಗಾರರ ಸಭೆಯಲ್ಲಿ ತೀರ್ಮಾನಿಸಲಾಯಿತು.

ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಭಾನುವಾರ ಶಾಶ್ವತ ನೀರಾವರಿ ಹೋರಾಟ ಸಮಿತಿ ನೇತೃತ್ವದಲ್ಲಿ ಸಭೆ ಆಯೋಜಿಸಲಾಗಿತ್ತು.

ಎತ್ತಿನಹೊಳೆ ಯೋಜನೆಯ ಮೋಸ, ಕೆ.ಸಿ.ವ್ಯಾಲಿ ಮತ್ತು ಎಚ್‌.ಎನ್.ವ್ಯಾಲಿ ಯೋಜನೆಯ ಅಪಾಯಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕು. ಪರಮಶಿವಯ್ಯ ಅವರ ಪರಿಕಲ್ಪನೆಯಂತೆ ಮೂರು ಜಿಲ್ಲೆಗಳ ಎಲ್ಲ ಕೆರೆಗಳನ್ನು ತುಂಬಿಸಬೇಕು. ಈ ವಿಚಾರವಾಗಿ ಸರ್ಕಾರದ ಮೇಲೆ ಒತ್ತಡ ಹೇರಬೇಕು.

ADVERTISEMENT

ವಿದ್ಯಾರ್ಥಿಗಳು, ಕಾರ್ಮಿಕರು ಸೇರಿದಂತೆ ಎಲ್ಲ ವರ್ಗಗಳ ಜನರನ್ನು ಹೋರಾಟದಲ್ಲಿ ಒಳ್ಳಗೊಳ್ಳಬೇಕಾಗಿದೆ ಎಂದು ಮುಖಂಡರು ಪ್ರತಿಪಾದಿಸಿದರು. ಜನಾಂದೋಲದ ರೂಪುರೇಷೆಗಳ ಬಗ್ಗೆ ಮುಂದಿನ ಸಭೆಯಲ್ಲಿ ಅಂತಿಮ ತೀರ್ಮಾನಕೈಗೊಳ್ಳಲು ನಿರ್ಣಯಿಸಲಾಯಿತು.

ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯ ರೆಡ್ಡಿ ಮಾತನಾಡಿ, ಕೆ.ಸಿ.ವ್ಯಾಲಿ, ಎಚ್‌.ಎನ್.ವ್ಯಾಲಿ ಯೋಜನೆಯ ನೀರಿನಿಂದ ಜನರು ಮತ್ತು ಜಾನುವಾರುಗಳ ಆರೋಗ್ಯದ ಮೇಲೆ ಯಾವ ಪರಿಣಾಮ ಆಗುತ್ತಿದೆ, ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಹೇಗಿವೆ, ಶುದ್ಧ ಕುಡಿಯುವ ನೀರಿನ ಘಟಕಗಳ ಕಾರ್ಯನಿರ್ವಹಣೆ ಸಮರ್ಪಕವಾಗಿದೆಯೇ ಎನ್ನುವುದನ್ನು ಗಮನಿಸಬೇಕಾಗಿದೆ ಎಂದರು.

ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಉತ್ತಮ ಮಳೆ ಆಗಿದೆ. ಆದರೆ ಆ ನೀರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ. ರಾಜಕಾಲುವೆಗಳ ನಿರ್ವಹಣೆ ಉತ್ತಮವಾಗಿಲ್ಲ. ಕೆರೆಗಳ ನೀರಿನ ಶೇಖರಣಾ ಸಾಮರ್ಥ್ಯ ಕಡಿಮೆ ಆಗಿದೆ ಎಂದರು.

ಭಗತ್ ಸಿಂಗ್ ಟ್ರಸ್ಟ್‌ನ ಸಂದೀಪ್ ರೆಡ್ಡಿ, ರೈತ ಮುಖಂಡರಾ ಹರೀಶ್, ದೇವರಾಜ್, ನಾಗದೇವನಹಳ್ಳಿ ನಾರಾಯಣಸ್ವಾಮಿ, ಲಕ್ಷ್ಮಿನಾರಾಯಣ್, ಆನಂದಪ್ಪ, ಜಿ.ಜಿ.ಹಳ್ಳಿ ನಾರಾಯಣಸ್ವಾಮಿ, ಯುವಶಕ್ತಿಯ ನವೀನ್, ಶಶಾಂಕ್ ರೆಡ್ಡಿ, ಕಾರಹಳ್ಳಿ ಶ್ರೀನಿವಾಸ್, ನಂಜಪ್ಪ ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.