ADVERTISEMENT

ಈಶಾ ಯೋಗ ಕೇಂದ್ರ: ಸಂಭ್ರಮದ ನಡುವೆ ಮಹಾಶೂಲ ಅನಾವರಣ

ಈಶಾ ಯೋಗ ಕೇಂದ್ರದಲ್ಲಿನ ಜಾತ್ರೆ ಸಂಪನ್ನ

​ಪ್ರಜಾವಾಣಿ ವಾರ್ತೆ
Published 14 ಜನವರಿ 2025, 23:51 IST
Last Updated 14 ಜನವರಿ 2025, 23:51 IST
ಸ್ಥಳೀಯ ರೈತರಿಂದ ಸದ್ಗುರು ಜಗ್ಗಿ ವಾಸುದೇವ್ ಅವರು ಸಂಕ್ರಾಂತಿಯ ನೈವೇದ್ಯವನ್ನು ಸ್ವೀಕರಿಸಿದರು
ಸ್ಥಳೀಯ ರೈತರಿಂದ ಸದ್ಗುರು ಜಗ್ಗಿ ವಾಸುದೇವ್ ಅವರು ಸಂಕ್ರಾಂತಿಯ ನೈವೇದ್ಯವನ್ನು ಸ್ವೀಕರಿಸಿದರು   

ಚಿಕ್ಕಬಳ್ಳಾಪುರ: ತಾಲ್ಲೂಕಿನ ಆವಲಗುರ್ಕಿ ಬಳಿಯ ಈಶಾ ಯೋಗ ಕೇಂದ್ರದಲ್ಲಿ ಮಕರ ಸಂಕ್ರಾಂತಿಯ ದಿನವಾದ ಮಂಗಳವಾರ 54 ಅಡಿ ಎತ್ತರದ ಮಹಾಶೂಲವನ್ನು (ತ್ರಿಶೂಲ) ಸದ್ಗುರು ಜಗ್ಗಿ ವಾಸುದೇವ್ ಅವರು ಅನಾವರಣಗೊಳಿಸಿದರು. 

ಕಾರ್ಯಕ್ರಮದ ಅಂಗವಾಗಿ ಮಂಗಳವಾರ ಬೆಳಿಗ್ಗೆಯಿಂದಲೇ ಈಶಾ ಯೋಗ ಕೇಂದ್ರದ ಆವರಣದಲ್ಲಿ ಸಂಭ್ರಮ, ಸಡಗರ ಮನೆ ಮಾಡಿತ್ತು. ಭಕ್ತರು ಯೋಗೇಶ್ವರ ಲಿಂಗ, ನಾಗ-ನಂದಿ ಮತ್ತು ಮಹಾಶೂಲಕ್ಕೆ ವಿಶೇಷ ಅರ್ಪಣೆ ಸಲ್ಲಿಸಿದರು.

ಭಾನುವಾರದಿಂದ ಸದ್ಗುರು ಸನ್ನಿಧಿಯಲ್ಲಿ ನಡೆಯುತ್ತಿದ್ದ ಜಾತ್ರೆಯು ಸಹ ಸಂಪನ್ನವಾಯಿತು. ಸ್ಥಳೀಯ ರೈತರು, ಕುಶಲಕರ್ಮಿಗಳು ಮತ್ತು ಕಲಾವಿದರು ಜಾತ್ರಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಕೃಷಿ ಉತ್ಪನ್ನಗಳು ಮತ್ತು ಕರಕುಶಲ ವಸ್ತುಗಳ ಮಳಿಗೆಗಳು, ತಿಂಡಿ ತಿನಿಸುಗಳ ಮಳಿಗೆಗಳು ದೊಡ್ಡ ಪ್ರಮಾಣದಲ್ಲಿ ತಲೆಎತ್ತಿದ್ದವು.

ADVERTISEMENT

ಸದ್ಗುರು ಗುರುಕುಲಂ ಸಂಸ್ಕೃತಿಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಆದಿಯೋಗಿ ದಿವ್ಯ ದರ್ಶನ ಮತ್ತು ದೇಸಿ ಜಾನುವಾರುಗಳ ಪ್ರದರ್ಶನ ನಡೆಯಿತು.

ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್ ಪಾಟೀಲ್, ಇಸ್ರೊ ಮಾಜಿ ಅಧ್ಯಕ್ಷ ಕಿರಣ್ ಕುಮಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಾರ್ಯದರ್ಶಿ ರಂದೀಪ್‌ ಡಿ ಮತ್ತಿತರರು ಪಾಲ್ಗೊಂಡಿದ್ದರು. 

ಮಕರ ಸಂಕ್ರಾಂತಿ ಹಬ್ಬದ ದಿನ ಆದಿಯೋಗಿ ಪ್ರತಿಮೆ ಎದುರು ಡೊಳ್ಳು ಕಲಾವಿದರಿಂದ ಕಲಾ ಪ್ರದರ್ಶನ
ಚಿಕ್ಕಬಳ್ಳಾಪುರದ ಈಶಾ ಯೋಗ ಕೇಂದ್ರದಲ್ಲಿ ಮಕರ ಸಂಕ್ರಾಂತಿಯ ದಿನ ಅನಾವರಣಗೊಂಡ 54 ಅಡಿ ಎತ್ತರದ ಮಹಾಶೂಲ (ತ್ರಿಶೂಲ)

ಯೋಗ ಕೇಂದ್ರಕ್ಕೆ ಜನಸಾಗರ

ಯೋಗ ಕೇಂದ್ರದಲ್ಲಿ ನಡೆಯುತ್ತಿದ್ದ ಜಾತ್ರೆ ಮತ್ತು ಮಹಾಶೂಲ ಅನಾವರಣ ಕಾರ್ಯಕ್ರಮಕ್ಕೆ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಯೋಗ ಕೇಂದ್ರಕ್ಕೆ ಸಾಗುವ ಹಾದಿಯಲ್ಲಿ ಕಾರು ಬೈಕ್‌ಗಳ ಸಂದಣಿ ದೊಡ್ಡದಾಗಿತ್ತು. ಸಂಜೆ 7ರ ಸುಮಾರಿನಲ್ಲಿಯೂ ಈಶಾ ಕೇಂದ್ರಕ್ಕೆ ಸಾಗುವವರು ಹೆಚ್ಚಿದ್ದ ಕಾರಣ ಚಿಕ್ಕಬಳ್ಳಾಪುರ ನಗರದ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಇತ್ತು.  ಈಶಾ ಯೋಗ ಕೇಂದ್ರದ ಎತ್ತ ನೋಡಿದರೂ ಜನವೊ ಜನ. ಯೋಗ ಕೇಂದ್ರದ ಪ್ರಕಾರ ಮಹಾಶೂಲ ಅನಾವರಣ ಕಾರ್ಯಕ್ರಮದಲ್ಲಿ 2 ಲಕ್ಷಕ್ಕೂ ಹೆಚ್ಚು ಜನರು ಭಾಗಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.