ಚಿಕ್ಕಬಳ್ಳಾಪುರ: ತಾಲ್ಲೂಕಿನ ಆವಲಗುರ್ಕಿಯ ಈಶಾ ಯೋಗ ಕೇಂದ್ರದಲ್ಲಿ ಭಾನುವಾರ ನಡೆದ ಈಶಾ ಗ್ರಾಮೋತ್ಸವದ ವಿಭಾಗೀಯ ಮಟ್ಟದ ಪಂದ್ಯಾವಳಿಯ ಪುರುಷರ ವಾಲಿಬಾಲ್ ಪಂದ್ಯದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನ ಹೆಗ್ಗಡಿಹಳ್ಳಿಯ ‘ಇಬ್ಬನಿ’ ತಂಡ ಮತ್ತು ಮಹಿಳೆಯರ ಥ್ರೋಬಾಲ್ ಪಂದ್ಯದಲ್ಲಿ ಕೊಡಗಿನ ಮರಗೋಡಿನ ‘ಬ್ಲ್ಯಾಕ್ ಪ್ಯಾಂಥರ್ಸ್’ ತಂಡವು ಚಾಂಪಿಯನ್ ಆಗಿ ಹೊರಹುಮ್ಮಿದವು.
‘ಇಬ್ಬನಿ’ ತಂಡವು ಚಿಕ್ಕಬಳ್ಳಾಪುರ ತಾಲ್ಲೂಕಿನ ಮರಸನಹಳ್ಳಿ ಪಂಚಾಯಿತಿಯ ‘ಅಪ್ಪು ಬಾಯ್ಸ್’ ತಂಡವನ್ನು ಸೋಲಿಸಿ ಗೆಲುವಿನ ನಗೆ ಬೀರಿತು. ‘ಬ್ಲ್ಯಾಕ್ ಪ್ಯಾಂಥರ್ಸ್’ ತಂಡವು ದಕ್ಷಿಣ ಕನ್ನಡದ ಬಡಗನೂರಿನ ‘ಕುಡ್ಲ ಸ್ಟ್ರೈಕರ್ಸ್’ ತಂಡವನ್ನು ಮಣಿಸಿ ಚಾಂಪಿಯನ್ ಆಯಿತು.
ವಿಜೇತ ತಂಡಕ್ಕೆ ತಲಾ ₹ 12,000 ನಗದು ಬಹುಮಾನ ನೀಡಲಾಯಿತು. ರನ್ನರ್ ಅಪ್ ತಂಡಕ್ಕೆ ತಲಾ ₹8,000 ನಗದು ಬಹುಮಾನ ನೀಡಲಾಯಿತು.
ಕೊಯಮತ್ತೂರಿನ ಈಶಾ ಯೋಗ ಕೇಂದ್ರದಲ್ಲಿ ಸೆ.21ರಂದು ಫೈನಲ್ ಪಂದ್ಯಗಳು ನಡೆಯಲಿವೆ. ಫೈನಲ್ ವಿಜೇತ ಪುರುಷ ಮತ್ತು ಮಹಿಳಾ ವಿಭಾಗಗಳ ತಂಡಗಳಿಗೆ ತಲಾ ₹ 5 ಲಕ್ಷ ನೀಡಲಾಗುತ್ತದೆ.
ಜನರ ಚೈತನ್ಯ ಹೆಚ್ಚಳ: ಪಂದ್ಯಾವಳಿಗೆ ಚಾಲನೆ ನೀಡಿದ ಸದ್ಗುರು ಜಗ್ಗಿ ವಾಸುದೇವ್ ಮಾತನಾಡಿ, ‘ಈಶಾ ಗ್ರಾಮೋತ್ಸವವು ಗ್ರಾಮೀಣ ಭಾರತದಲ್ಲಿ ಜನರ ಚೈತನ್ಯ ಹೆಚ್ಚಿಸುತ್ತದೆ. ಈ ಉತ್ಸವಗಳ ಮೂಲಕ ನಾವು ಗ್ರಾಮಗಳಲ್ಲಿ ಕ್ರೀಡಾ ಚಟುವಟಿಕೆಗಳ ಸಂಭ್ರಮವನ್ನು ಮರಳಿ ತರುತ್ತಿದ್ದೇವೆ. ಗ್ರಾಮಸ್ಥರಲ್ಲಿ ಕ್ರೀಡಾ ಮನೋಭಾವ ಬೆಳೆಸುತ್ತಿದ್ದೇವೆ. ಅವರ ಜೀವನದ ಹೊರೆಯನ್ನು ನಿರಾಳವಾಗಿಸಲು ಬಯಸುತ್ತೇವೆ ಎಂದರು.
ಸಾಂಪ್ರದಾಯಿಕ ಮನರಂಜನೆ ಮತ್ತು ಸಕ್ರಿಯ ಭಾಗವಹಿಸುವಿಕೆಯು ಕಣ್ಮರೆಯಾಗಿದೆ. ಜನಪದ ಸಂಗೀತ ಮತ್ತು ಇತರ ವೈವಿಧ್ಯದ ಚಟುವಟಿಕೆಗಳ ಗಮನಾರ್ಹವಾಗಿ ಕಡಿಮೆಯಾಗಿದೆ. ಈ ಎಲ್ಲ ದೃಷ್ಟಿಯನ್ನು ಗಮನದಲ್ಲಿ ಇಟ್ಟುಕೊಂಡು ಗ್ರಾಮೋತ್ಸವವನ್ನು ಸಂಘಟಿಸಲಾಗುತ್ತಿದೆ ಎಂದು ಹೇಳಿದರು.
17ನೇ ಆವೃತ್ತಿಯ ಈಶಾ ಗ್ರಾಮೋತ್ಸವವು ಗ್ರಾಮೀಣ ಜನರ ಚೈತನ್ಯದ ಆಚರಣೆಯಾಗಿದೆ. ರೈತರು, ದಿನಗೂಲಿ ಕಾರ್ಮಿಕರು ಮತ್ತು ಗೃಹಿಣಿಯರು ಸೇರಿದಂತೆ ಗ್ರಾಮೀಣರು ಮನೆಗಳಿಂದ ಹೊರಬಂದು ಕ್ರೀಡೆಗಳಲ್ಲಿ ತೊಡಗುತ್ತಿದ್ದಾರೆ ಎಂದರು.
ವಿಭಾಗೀಯ ಪಂದ್ಯಾವಳಿಯಲ್ಲಿ ಪುರುಷರ ವಾಲಿಬಾಲ್‌ನ 18 ತಂಡಗಳು ಮತ್ತು ಮಹಿಳೆಯರ ಥ್ರೋಬಾಲ್‌ನ 14 ತಂಡಗಳು ಪಾಲ್ಗೊಂಡಿದ್ದವು.
ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಅತಿಥಿಗಳಾದ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಮತ್ತು ನಟಿ ಶ್ರೀನಿಧಿ ಶೆಟ್ಟಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.