ಶಿಡ್ಲಘಟ್ಟ ತಾಲ್ಲೂಕಿನ ಭಕ್ತರಹಳ್ಳಿಯಲ್ಲಿ ಕಾಂಕ್ರೀಟ್ ರಸ್ತೆಯನ್ನು ಅಗೆದು ಮುಚ್ಚದೇ ಬಿಟ್ಟಿರುವುದು
ಶಿಡ್ಲಘಟ್ಟ: ಪ್ರತಿ ಮನೆಗೂ ನಲ್ಲಿ ನೀರು ಪೂರೈಸುವ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಜಾರಿಗೆ ತಂದಿರುವ ಜಲ ಜೀವನ್ ಮಿಷನ್ ಯೋಜನೆಯು ಗ್ರಾಮೀಣ ಭಾಗದ ರಸ್ತೆಗಳಿಗೆ ಕಂಟಕವಾಗುತ್ತಿದೆ.
ತಾಲ್ಲೂಕಿನ ಕೆಲವು ಹಳ್ಳಿಗಳಲ್ಲಿ ನಡೆದಿರುವ ಜೆಜೆಎಂ ಕಾಮಗಾರಿಗಳೇ ಈ ಅಧ್ವಾನಗಳನ್ನು ಸಾರುತ್ತಿವೆ.
ಜಲಜೀವನ್ ಮಿಷನ್ ಯೋಜನೆಯಡಿ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲು ಪೈಪ್‌ಲೈನ್ ಅಳವಡಿಸುವ ಕಾರ್ಯದಿಂದ ರಸ್ತೆಗಳು ಹದಗೆಡುತ್ತಿವೆ. ಗುತ್ತಿಗೆದಾರರು ಕಾಮಗಾರಿಗಾಗಿ ಉತ್ತಮ ರಸ್ತೆಗಳನ್ನೇ ಅಗೆಯುತ್ತಿದ್ದಾರೆ.
ಹೀಗೆ ಅಗೆದ ರಸ್ತೆಗಳನ್ನು ಕಾಮಗಾರಿ ಪೂರ್ಣಗೊಂಡ ನಂತರವೂ ಸರಿಯಾಗಿ ಮುಚ್ಚುವುದಿಲ್ಲ. ರಸ್ತೆಗಳು ಕೆಸರುಮಯವಾಗಿ ಪಾದಚಾರಿಗಳು ಮತ್ತು ವಾಹನ ಸಂಚಾರಕ್ಕೆ ಅಡ್ಡಿ ಆಗುತ್ತಿದೆ.
ಪೈಪ್‌ಲೈನ್ ಅಳವಡಿಕೆಗೆ ರಸ್ತೆಗಳನ್ನು ಅಗೆಯುವಾಗ ಯಾವುದೇ ಯೋಜಿತ ರೀತಿಯಲ್ಲಿ ಕೆಲಸ ಮಾಡಲಾಗುವುದಿಲ್ಲ. ಇದು ರಸ್ತೆಗಳು ಹದಗೆಡಲು ಕಾರಣವಾಗುತ್ತದೆ. ಪೈಪ್‌ಲೈನ್ ಅಳವಡಿಸಿದ ನಂತರ ರಸ್ತೆಗಳನ್ನು ಸರಿಯಾಗಿ ಮುಚ್ಚಲು ಗುತ್ತಿಗೆದಾರರು ನಿರ್ಲಕ್ಷ್ಯ ವಹಿಸುತ್ತಾರೆ. ಇದರಿಂದಾಗಿ ರಸ್ತೆಗಳು ತಿಂಗಳುಗಟ್ಟಲೆ ಹಾಗೆಯೇ ಉಳಿಯುತ್ತವೆ. ನಿರ್ದಿಷ್ಟ ಗಡುವಿನ ಮುಂಚಿತವಾಗಿ ಕೆಲಸ ಪೂರ್ಣಗೊಳಿಸಲು ಗುತ್ತಿಗೆದಾರರು ತರಾತುರಿಯಲ್ಲಿ ಮತ್ತು ಅವೈಜ್ಞಾನಿಕವಾಗಿ ರಸ್ತೆಗಳನ್ನು ಅಗೆದು ಬಿಡುತ್ತಾರೆ. ಹೀಗಾಗಿ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಗಳು ಆಗುತ್ತಿವೆ.
ರಸ್ತೆಗಳಲ್ಲಿ ಬಗೆದ ಗುಂಡಿಗಳು ಮತ್ತು ತ್ಯಾಜ್ಯದಿಂದಾಗಿ ಜನರು ಓಡಾಡಲು ಕಷ್ಟವಾಗುತ್ತದೆ. ಮಳೆ ಬಂದರೆ, ಅಗೆದ ರಸ್ತೆಗಳು ಕೆಸರುಮಯವಾಗಿ ವಾಹನ ಸಂಚಾರ ಹಾಗೂ ಪಾದಚಾರಿಗಳ ಸಂಚಾರಕ್ಕೆ ತೀವ್ರ ಅಡ್ಡಿ ಆಗುತ್ತದೆ. ಅಲ್ಲಿ ನಿಂತ ನೀರು ಸೊಳ್ಳೆಗಳ ಉತ್ಪತ್ತಿಯ ತಾಣಗಳಾಗಿ ಸಾಂಕ್ರಾಮಿಕ ರೋಗಗಳು ಹರಡಲು ಕಾರಣವಾಗಿವೆ. ಮನೆಯಂಗಳದ ಬಳಿ ಆಳವಾದ ಗುಂಡಿಗಳನ್ನು ಬಗೆದಿರುವುದರಿಂದ ವೃದ್ಧರು ಮತ್ತು ಪುಟ್ಟ ಮಕ್ಕಳು ಓಡಾಡಲು ಬಹಳ ಕಷ್ಟಪಡುತ್ತಾರೆ.
ಕಳಪೆ ಕಾಮಗಾರಿ ಕಂಡುಬಂದರೆ ಗುತ್ತಿಗೆದಾರರ ವಿರುದ್ಧ ಸಾರ್ವಜನಿಕರು ದೂರು ಸಲ್ಲಿಸಿ, ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಈ ಮಾತುಗಳು ಕೇವಲ ಆ ಕ್ಷಣಕ್ಕೆ ಮಾತ್ರ ಎನ್ನುವಂತೆ ಆಗಿದೆ.
ಗ್ರಾಮೀಣ ರಸ್ತೆಗಳಿಗೆ ಕಂಟಕ: ಶಿಡ್ಲಘಟ್ಟ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ನಡೆಯುತ್ತಿರುವ ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿಗಳನ್ನು ಗುತ್ತಿಗೆದಾರರು ತಮಗೆ ಬೇಕಾದವರಿಗೆ ಹಂಚಿಕೆ ಮಾಡಿದ್ದಾರೆ. ಇದರಿಂದ ಕಾಮಗಾರಿ ವಿಳಂಬವಾಗುವ ಜತೆಗೆ ಮನಸೋಇಚ್ಛೆ ರಸ್ತೆಗಳನ್ನು ಅಗೆಯಲಾಗುತ್ತಿದೆ. ಗುಂಡಿಗಳನ್ನು ಮುಚ್ಚದೆ ಹಾಗೆ ಬಿಡುತ್ತಿದ್ದಾರೆ. ರಸ್ತೆಗಳನ್ನು ಹಾಳು ಮಾಡಲಾಗಿದೆ ಎಂದು ಗ್ರಾಮಸ್ಥರು ದೂರುವರು.
ಕೆಲವೆಡೆ ಗ್ರಾಮದ ಉದ್ದಗಲಕ್ಕೂ ಇರುವ ರಸ್ತೆಗಳ ಮದ್ಯ ಭಾಗಕ್ಕೆ ಅಗೆದು ಎರಡು ಭಾಗಗಳನ್ನಾಗಿ ಮಾಡಲಾಗಿದೆ. ರಸ್ತೆ ಮಧ್ಯ ಭಾಗದಲ್ಲಿ ಒಂದೆರಡು ಅಡಿ ಗುಂಡಿ ಅಗೆದು ಹಾಗೆ ಬಿಟ್ಟ ಪರಿಣಾಮ ಕಾಂಕ್ರಿಟ್ ರಸ್ತೆಗಳ ತ್ಯಾಜ್ಯ ಎಲ್ಲೆಂದರಲ್ಲಿ ಹಾಗೆ ಬಿಟ್ಟ ಪರಿಣಾಮ ಸಾರ್ವಜನಿಕರು ಓಡಾಡಲು ಕಷ್ಟವಾಗಿದೆ.
ಅಧಿಕಾರಿಗಳ ಜಾಣ ಕುರುಡು: ಜಲ ಜೀವನ್ ಮಿಷನ್ ಯೋಜನೆಯಡಿ ಗ್ರಾಮೀಣ ಪ್ರದೇಶಗಳ ರಸ್ತೆಗಳಿಗೆ ಹಾನಿ ಆಗುತ್ತಿದ್ದರು ಅಧಿಕಾರಿಗಳು ಕಂಡು ಕಾಣದಂತೆ ವರ್ತಿಸುತ್ತಿದ್ದಾರೆ. ಗುತ್ತಿಗೆದಾರರ ನಿರ್ಲಕ್ಷ್ಯದಿಂದ ರಸ್ತೆ , ಚರಂಡಿಗಳು ಹಾಳಾಗಿವೆ. ಎಲ್ಲೆಂದರಲ್ಲೇ ಕಾಂಕ್ರಿಟ್ ತ್ಯಾಜ್ಯ ಗುಡ್ಡೆ ಹಾಕಲಾಗಿದೆ. ಕಳೆದ ಒಂದು ತಿಂಗಳ ಹಿಂದೆ ರಸ್ತೆಗಳನ್ನು ಅಗೆದು ಹಾಗೆ ಬಿಟ್ಟಿದ್ದು ಓಡಾಡಲು ಕಷ್ಟವಾಗಿದೆ. ಮನೆಗಳ ಬಳಿ ಮೊಣಕಾಲುದ್ದ ಗುಂಡಿಗಳನ್ನು ಅಗೆದು ಹಾಗೆ ಬಿಡಲಾಗಿದೆ. ವಯೋವೃದ್ಧರು ಹಾಗೂ ಪುಟ್ಟ ಮಕ್ಕಳು ಓಡಾಡುವುದು ಕಷ್ಟವಾಗಿದೆ ಎಂದು ಗ್ರಾಮಸ್ಥರು ದೂರುತ್ತಾರೆ.
ಕರೆ ಸ್ವೀಕರಿಸದ ಗುತ್ತಿಗೆದಾರ
ಪೈಪ್ ಲೈನ್ ಕೂಡ ಹಾಕದೆ ಅಗೆದು ಬಿಟ್ಟು ಸಾಕಷ್ಟು ದಿನಗಳಾದವು. ಸಂಬಂಧಿಸಿದ ಗುತ್ತಿಗೆದಾರ ದೂರವಾಣಿ ಕರೆಯನ್ನು ಸ್ವೀಕರಿಸುತ್ತಿಲ್ಲ.
– ಶ್ರೀನಿವಾಸ ರೆಡ್ಡಿ ಮೇಲೂರು ಗ್ರಾಮ ಪಂಚಾಯತಿ ಕಾರ್ಯದರ್ಶಿ
ಜನಸಾಮಾನ್ಯರಿಗೆ ತೊಂದರೆ
ತಾಲ್ಲೂಕಿನ ಸಾಕಷ್ಟು ಹಳ್ಳಿಗಳಲ್ಲಿ ಈ ಸಮಸ್ಯೆ ಇದೆ. ಗುತ್ತಿಗೆದಾರರು ಹಣ ಬಿಡುಗಡೆಯಾಗಿಲ್ಲ ಎನ್ನುತ್ತಿದ್ದಾರೆ. ತೊಂದರೆ ಮಾತ್ರ ಜನಸಾಮಾನ್ಯರಿಗೆ.
– ಮೇಲೂರು ಆರ್.ಎ.ಉಮೇಶ್ ಗ್ರಾ.ಪಂ.ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.