ADVERTISEMENT

ಸಾಮಾಜಿಕ ಜಾಲತಾಣ ಬಳಸಿ ಪಕ್ಷ ಸಂಘಟಿಸಿ: ಎಂ.ಕೃಷ್ಣಾರೆಡ್ಡಿ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2025, 2:42 IST
Last Updated 28 ಡಿಸೆಂಬರ್ 2025, 2:42 IST
ಚಿಂತಾಮಣಿಯಲ್ಲಿ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಕಾರ್ಯಾಗಾರದಲ್ಲಿ ಕೋರ್ ಕಮಿಟಿ ಅಧ್ಯಕ್ಷ ಎಂ.ಕೃಷ್ಣಾರೆಡ್ಡಿ ಮಾತನಾಡಿದರು
ಚಿಂತಾಮಣಿಯಲ್ಲಿ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಕಾರ್ಯಾಗಾರದಲ್ಲಿ ಕೋರ್ ಕಮಿಟಿ ಅಧ್ಯಕ್ಷ ಎಂ.ಕೃಷ್ಣಾರೆಡ್ಡಿ ಮಾತನಾಡಿದರು   

ಚಿಂತಾಮಣಿ: ರಾಜ್ಯದಲ್ಲಿ 2028ಕ್ಕೆ ಎಚ್.ಡಿ.ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡುವುದು ಜೆಡಿಎಸ್ ಗುರಿಯಾಗಿದೆ ಎಂದು ಪಕ್ಷದ ಕೋರ್ ಕಮಿಟಿ ಅಧ್ಯಕ್ಷ ಎಂ.ಕೃಷ್ಣಾರೆಡ್ಡಿ ತಿಳಿಸಿದರು.

ಶನಿವಾರ ಸಾಮಾಜಿಕ ಜಾಲತಾಣದ ಕುರಿತು ಪಕ್ಷದಿಂದ ಕಾರ್ಯಕರ್ತರಿಗಾಗಿ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.

ಆಧುನಿಕ ತಾಂತ್ರಿಕ ಯುಗದಲ್ಲಿ ಸಾಮಾಜಿಕ ಜಾಲತಾಣ ಪ್ರಭಾವಿ ಮಾಧ್ಯಮ. ಕಾರ್ಯಕರ್ತರು ಸಂಘಟಿತರಾಗಿ ಸಾಮಾಜಿಕ ಜಾಲತಾಣ ಬಳಸಿಕೊಂಡು ಮತದಾರರ ಮನೆ ಮನೆಯನ್ನು ತಲುಪಬೇಕು. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹಾಗೂ ದೇವೇಗೌಡ ಮುಖ್ಯಮಂತ್ರಿ ಮತ್ತು ಪ್ರಧಾನ ಮಂತ್ರಿಯಾಗಿದ್ದ ಕಾಲದಲ್ಲಿ ಮಾಡಿದ್ದ ಜನಪರ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಲು ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದರು.

ADVERTISEMENT

ಜೆಡಿಎಸ್‌ಕಾರ್ಯಕರ್ತರು ಎಚ್ಚೆತ್ತುಕೊಳ್ಳಬೇಕು. ಬೂತ್ ಮಟ್ಟದವರೆಗೂ ಸಾಮಾಜಿಕ ಜಾಲತಾಣಗಳ ಮೂಲಕ ಮತದಾರರನ್ನು ತಲುಪಬೇಕು. ಕಾರ್ಯಕರ್ತರು ಸೋಲಿನಿಂದ ಧೃತಿಗೆಡಬಾರದು. ಸೋಲು ಗೆಲುವು ಸಾಮಾನ್ಯ, ಕಾರ್ಯಕರ್ತರು ಸದಾ ಜಾಗರೂಕರಾಗಿರಬೇಕು ಎಂದರು.

ರಾಜ್ಯದ ನೀರಾವರಿ ಯೋಜನೆಗಳನ್ನು ರೂಪಿಸಿ ಹೆಚ್ಚು ಅನುದಾನ ಕೊಡಿಸಿರುವ ಏಕೈಕ ವ್ಯಕ್ತಿ ದೇವೇಗೌಡ. ನೀರಾವರಿ ಸಚಿವರಾಗಿ, ಮುಖ್ಯಮಂತ್ರಿಯಾಗಿ, ಪ್ರಧಾನ ಮಂತ್ರಿಯಾಗಿ ಲಕ್ಷಾಂತರ ಎಕರೆಗೆ ನೀರಾವರಿ ಯೋಜನೆ ಜಾರಿಗೊಳಿಸಿದ್ದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇತ್ತೀಚೆಗೆ ಹೊರತಂದಿರುವ ಪುಸ್ತಕದಲ್ಲೂ ದೇವೇಗೌಡರ ಯೋಜನೆಗಳನ್ನು ಉಲ್ಲೇಖ ಮಾಡಿದ್ದಾರೆ ಎಂದರು.

ಪಕ್ಷದ ಸಾಮಾಜಿಕ ಜಾಲತಾಣ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಎಚ್.ಎನ್.ಚಂದನ್ ಮಾತನಾಡಿ ಮುಂಬರುವ ಚುನಾವಣೆಗಳನ್ನು ಗಮನಿಸಿ ಕಾರ್ಯಕರ್ತರನ್ನು ಸಂಘಟನೆಯಲ್ಲಿ ತೊಡಗಿಸಿಕೊಂಡು ಪಕ್ಷವನ್ನು ಬಲಗೊಳಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.

ಚಿಂತಾಮಣಿಯಲ್ಲಿ ಆಯೋಜಿಸಿದ್ದ ಜೆಡಿಎಸ್ ಪಕ್ಷದ ಕಾರ್ಯಕರ್ತರ ಕಾರ್ಯಾಗಾರದಲ್ಲಿಪಕ್ಷದ ಸಾಮಾಜಿಕ ಜಾಲತಾಣ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಎಚ್.ಎನ್.ಚಂದನ್ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.