ADVERTISEMENT

ಚಿಕ್ಕಬಳ್ಳಾಪುರಕ್ಕೆ ನೀರಾವರಿ ಯೋಜನೆ ರೂಪಿಸಿದ್ದು ಕಾಂಗ್ರೆಸ್: ಸಿದ್ದರಾಮಯ್ಯ

ಕಾಂಗ್ರೆಸ್ ನಾಯಕರಿಂದ ಚಿಕ್ಕಬಳ್ಳಾಪುರದಲ್ಲಿ ‘ಪ್ರಜಾಧ್ವನಿ’ ಯಾತ್ರೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2023, 6:50 IST
Last Updated 24 ಜನವರಿ 2023, 6:50 IST
ಕಾಂಗ್ರೆಸ್‌ನ ಪ್ರಜಾಧ್ವನಿ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರು
ಕಾಂಗ್ರೆಸ್‌ನ ಪ್ರಜಾಧ್ವನಿ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರು   

ಚಿಕ್ಕಬಳ್ಳಾಪುರ: ಎತ್ತಿನಹೊಳೆ, ಕೆ.ಸಿ.ವ್ಯಾಲಿ, ಎಚ್‌.ಎನ್.ವ್ಯಾಲಿ ನೀರಾವರಿ ಯೋಜನೆಯನ್ನು ರೂಪಿಸಿದ್ದು ಕಾಂಗ್ರೆಸ್. ನಾನು ಮುಖ್ಯಮಂತ್ರಿಯಾಗಿದ್ದಾಗ ಈ ಯೋಜನೆಗಳನ್ನು ಜಾರಿಗೊಳಿಸಲಾಯಿತು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ನಗರದಲ್ಲಿ ಸೋಮವಾರ ಕಾಂಗ್ರೆಸ್ ಪಕ್ಷವು ಹಮ್ಮಿಕೊಂಡಿದ್ದ ‘ಪ್ರಜಾಧ್ವನಿ’ ಯಾತ್ರೆಯಲ್ಲಿ ಅವರು ಮಾತನಾಡಿದರು.

‘ಪ್ರಜಾಧ್ವನಿ’ ಎಂದರೆ 7 ಕೋಟಿ ಕನ್ನಡಿಗರ ಧ್ವನಿ.‌ ಎಲ್ಲ ಜಿಲ್ಲೆ ಮತ್ತು ಮತ ಕ್ಷೇತ್ರದಲ್ಲಿ ಮತದಾರರು ಮತ್ತು ಜನರನ್ನು ಭೇಟಿ ಮಾಡಿ ಅವರ ನೋವು, ಕಷ್ಟಗಳನ್ನು ತಿಳಿಯಬೇಕು. ಅವರ ಸಲಹೆಗಳನ್ನು ಕೇಳಬೇಕು. ಜನರ ಕಷ್ಟಗಳಿಗೆ ಸ್ಪಂದಿಸಬೇಕು ಎಂದು ಈ ಯಾತ್ರೆ ನಡೆಸಲಾಗುತ್ತಿದೆ ಎಂದರು.

ADVERTISEMENT

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ನಿಮಗೆ ಧಮ್ಮು, ತಾಕತ್ತು ಇದ್ದರೆ ನನ್ನ ಆಡಳಿತದ ಅವಧಿ ಮತ್ತು ನಿಮ್ಮ ಆಡಳಿತದ ಅವಧಿಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಬಹಿರಂಗ ಚರ್ಚೆಗೆ ಬನ್ನಿ’ ಎಂದು ಸವಾಲು ಹಾಕಿದರು.

2013ರಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ನೀಡಿದ 165 ಆಶ್ವಾಸನೆಗಳಲ್ಲಿ 158 ಈಡೇರಿವೆ. ಆದರೆ 2018ರ ಚುನಾವಣೆಯಲ್ಲಿ ಬಿಜೆಪಿ ನೀಡಿದ್ದ 600 ಭರವಸೆಗಳಲ್ಲಿ ಎಷ್ಟು ಈಡೇರಿವೆ? ಈ ಬಗ್ಗೆ ಚರ್ಚಿಸಲು ಬಸವರಾಜ ಬೊಮ್ಮಾಯಿ ಅವರಿಗೆ ಧಮ್ಮು, ತಾಕತ್ತು ಇದ್ದರೆ ಒಂದೇ ವೇದಿಕೆಗೆ ಬರಲಿ. ನೀವೇ ಒಂದು ಸಭೆಯಲ್ಲಿ ಏರ್ಪಡಿಸಿ ಎಂದರು.

ನನ್ನ ಆಡಳಿತದ ಅವಧಿಯಲ್ಲಿ ಲೋಕಾಯುಕ್ತ ಮುಚ್ಚಿದವರು ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಲೋಕಾಯುಕ್ತ ಸಂಸ್ಥೆ ಮುಚ್ಚಲಿಲ್ಲ. ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚಿಸಿದೆವು. ಬಿಜೆಪಿ ಆಡಳಿತದ ಹಲವು ರಾಜ್ಯಗಳಲ್ಲಿ ಎಸಿಬಿ ರಚನೆ ಇದೆ ಎಂದು ಹೇಳಿದರು.

ರೈತರಿಗೆ ಬಡ್ಡಿರಹಿತವಾಗಿ ₹ 3 ಲಕ್ಷ ಸಾಲ ನೀಡಲಾಗುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ ಸಾಲವನ್ನು ₹ 5 ಲಕ್ಷಕ್ಕೆ, ಶೇ 3ರ ಬಡ್ಡಿ ಸಹಿತ ಸಾಲವನ್ನು ₹ 20 ಲಕ್ಷಕ್ಕೆ ಹೆಚ್ಚಿಸಲಾಗುವುದು ಎಂದು ಭರವಸೆ ನೀಡಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ‘ಮಹಿಳೆಯರಿಗೆ ಮಾಸಿಕ ₹ 2 ಸಾವಿರ ಸಹಾಯಧನ, 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡದಿದ್ದರೆ ರಾಜಕೀಯ ನಿವೃತ್ತಿ ಆಗುತ್ತೇವೆ ಎಂದು ಘೋಷಿಸಿದರು.

ಕಾಂಗ್ರೆಸ್ ಪಕ್ಷವು ರಾಜ್ಯದ ಜನರ ಸಮಸ್ಯೆ, ನೋವು ಸಂಕಟಗಳನ್ನು ಗಮನದಲ್ಲಿ ಇಟ್ಟುಕೊಂಡು ಯಾತ್ರೆ ಕೈಗೊಂಡಿದೆ ಎಂದು ಹೇಳಿದರು.

ಕಾಂಗ್ರೆಸ್ ಸಣ್ಣ ಕಪ್ಪು ಚುಕ್ಕೆ ಇಲ್ಲದೆ ಆಡಳಿತ ನಡೆಸಿಕೊಂಡು ಬಂದಿದೆ. ಕಾಂಗ್ರೆಸ್ ಎಲ್ಲ ವರ್ಗದವರಿಗೆ ನೆರವಾಗಿದೆ. ಹಾಲಿಗೆ ₹ 5 ಸಬ್ಸಿಡಿ ನೀಡಿದೆವು. ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗೆ ನೀರಾವರಿ ಯೋಜನೆ ನೀಡಿದೆವು. ಎಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ಯಾವುದೇ ನಾಯಕರು ಎತ್ತಿನಹೊಳೆ ಯೋಜನೆಯನ್ನು ನಿಲ್ಲಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಯೋಜನೆಯನ್ನು ಪೂರ್ಣಗೊಳಿಸಲಿದೆ ಎಂದು ಹೇಳಿದರು.

ನಾವೂ ಹಿಂದೂಗಳೇ. ಜನರ ಭಾವನೆಗಳ ಜತೆ ಬಿಜೆಪಿಯವರು ಆಟ ಆಡುತ್ತಿದ್ದಾರೆ. ಮೊದಲು ಜನರ ಬದುಕುವ, ಆದಾಯ ಹೆಚ್ಚಿಸುವ ವ್ಯವಸ್ಥೆ ಆಗಬೇಕು. ಬಿಜೆಪಿ ಆಡಳಿತದಲ್ಲಿ ರೈತರ ಆದಾಯ ಹೆಚ್ಚಳ ಆಗಿದೆಯಾ ಎಂದು ಪ್ರಶ್ನಿಸಿದರು.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್, ಮಾಜಿ ಸಂಸದರಾದ ‌ಕೆ.ಎಚ್.ಮುನಿಯಪ್ಪ, ವೀರಪ್ಪ ಮೊಯಿಲಿ, ಶಾಸಕರಾದ ಕೃಷ್ಣಬೈರೇಗೌಡ ಮಾತನಾಡಿದರು.

ಶಾಸಕರಾದ ಕೆ.ಆರ್.ರಮೇಶ್ ಕುಮಾರ್, ಶಿವಶಂಕರ ರೆಡ್ಡಿ, ಸುಬ್ಬಾರೆಡ್ಡಿ, ವಿ.ಮುನಿಯಪ್ಪ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಉಸ್ತುವಾರಿ ಬಿ‌.ವಿ.ಶಿವಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೇಶವರೆಡ್ಡಿ, ವಿ.ಎಸ್.ಉಗ್ರಪ್ಪ, ವಿಧಾನ ಪರಿಷತ್ ಸದಸ್ಯ ಅನಿಲ್ ಕುಮಾರ್ ನಾಗರಾಜ್ ಯಾದವ್, ಅನಿಲ್ ಕುಮಾರ್, ನಜೀರ್ ಅಹಮ್ಮದ್, ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪ ಅಮರನಾಥ್, ಮುಖಂಡರಾದ ಎಲ್. ಹನುಮಂತಯ್ಯ,‌ ಜಿ.ಸಿ‌.ಚಂದ್ರಶೇಖರ್, ಅಭಿಷೇಕ್ ದತ್ತ, ಕೀರ್ತಿ ಗಣೇಶ್, ವಿನಯ್ ಶ್ಯಾಮ್, ಜಿ.ಎಚ್.ನಾಗರಾಜ್, ಯಲುವಳ್ಳಿ ರಮೇಶ್, ಗಂಗರೇಕಾಲುವೆ ನಾರಾಯಣ ಸ್ವಾಮಿ, ವಿ‌.ಆರ್.ಸುದರ್ಶನ್, ಉದಯಶಂಕರ್, ಎನ್.ಸಂಪಂಗಿ, ರಾಜೀವ್ ಗೌಡ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.